Advertisement
ಬಜಪೆ: ತಂದೆ ಹಾಗೂ ದೊಡ್ಡಪ್ಪಂದಿರಂತೆ ತಾನೂ ಸೇನಾನಿಯಾಗಬೇಕು ಎಂಬ ಅದಮ್ಯ ಹಂಬಲ ಹಾಗೂ ಛಲದಿಂದ ಭೂಸೇನೆ ಸೇರಿದ್ದ ಬಜಪೆಯ ಹವಾಲ್ದಾರ ಓಸ್ವಾಲ್ಡ್ ನೊರೊನ್ಹಾ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಹೋರಾಟದ ವೇಳೆ ವೀರಮರಣನ್ನಪ್ಪಿದ್ದರು.
ಮರಣಾನಂತರ “ನೈಬ್ ಸುಬೇದಾರ್’ ಆಗಿ ಪದೋನ್ನತಿ ನೀಡಿದ್ದು, ಕೊಚ್ಚಿಯಲ್ಲಿ ತಾಯಿ ಲೂಸಿ ಅವರಿಗೆ ಪ್ರದಾನ ಮಾಡಲಾಯಿತು.
Related Articles
ಓಸ್ವಾಲ್ಡ್‌ಗೆ 1990ರ ಮೇ 8ರಂದು ಪುತ್ತೂರಿನ ಸಿಸಿಲಿಯಾ ಅಪೋಲಿನ್ ಲೋಬೋ ಅವರೊಂದಿಗೆ ವಿವಾಹವಾಗಿತ್ತು. ಹುತಾತ್ಮರಾಗುವ ಕೆಲವೇ ದಿನಗಳ ಹಿಂದೆ ಅಂದರೆ 1992ರ ಜುಲೈ ಆರಂಭದಲ್ಲಿ ಓಸ್ವಾಲ್ಡ್ ಊರಿಗೆ ಬಂದು ಸಂಬಂಧಿಕರು, ಗೆಳೆಯರನ್ನೆಲ್ಲ ಭೇಟಿಯಾಗಿ ಸೇವೆಗೆ ಮರಳಿದ್ದರು. ಎಲ್ಲರೊಂದಿಗೆ ಸ್ನೇಹದಿಂದ ಇದ್ದ ಅವರನ್ನು ಊರ ಮಂದಿ ಪ್ರೀತಿಯಿಂದ “ಓಜಿ’ ಎಂದು ಕರೆಯುತ್ತಿದ್ದರು.
Advertisement
ಶಿಸ್ತಿನ ಸಿಪಾಯಿಓಸ್ವಾಲ್ಡ್ ಶಿಸ್ತಿನ ಸಿಪಾಯಿ. ತಮ್ಮಂದಿರಿಗೂ ಶಿಸ್ತಿನ ಪಾಠ ಮಾಡುತ್ತ ಹಾಗೆಯೇ ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ರಜೆಯ ಬಳಿಕ ತವಾಂಗ್‌ಗೆ ತೆರಳಲು ಮಂಗಳೂರಿನ ರೈಲು ನಿಲ್ದಾಣಕ್ಕೆ ಬಂದರೂ ಎರಡು ಬಾರಿ ಮಳೆಯಿಂದಾಗಿ ರೈಲು ಇಲ್ಲದ ಕಾರಣ ಮನೆಗೆ ಮರಳಿದ್ದರು. ಜುಲಾೖ 24ರಂದು ರೈಲಿನ ಮೂಲಕ ಸೇವಾ ಕ್ಷೇತ್ರಕ್ಕೆ ಹೊರಟಿದ್ದರು. ಜುಲೈ 30ರಂದು ಅವರ ವೀರ ಮರಣ ಸಂಭವಿಸಿತ್ತು. ತಾಯಿಗೆ ಬರೆದ ಕೊನೆಯ ಪತ್ರ
ಓಸ್ವಾಲ್ಡ್ ಜು. 28ರಂದು ನನಗೆ ಕೊನೆಯ ಪತ್ರ ಬರೆದಿದ್ದು, ಅದು ಆ. 3ರಂದು ಸಿಕ್ಕಿತ್ತು ಎಂದು ತಾಯಿ ಲೂಸಿ ನೆನಪಿಸಿಕೊಳ್ಳುತ್ತಾರೆ. ಕೊಂಕಣಿ ಭಾಷೆಯ ಪತ್ರದಲ್ಲಿ ಜು. 29ರಿಂದ ತನ್ನ ವಿಳಾಸ ಬದಲಾವಣೆ ಆಗಲಿರುವ ಕುರಿತು ಉಲ್ಲೇಖೀಸಿದ್ದು, ಕಾರ್ಯಾಚರಣೆಗಾಗಿ ಬೆಟ್ಟದ ಮೇಲಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಅದರೆ ಜು. 30ರಂದು ವೀರ ಮರಣವನ್ನಪ್ಪಿದ ಎಂದು ತಾಯಿ ಮಗನ ಪತ್ರವನ್ನು ತೋರಿಸುತ್ತ ಹೇಳಿದರು. ತಡವಾಗಿ ತಿಳಿದ ಸುದ್ದಿ
ಓಸ್ವಾಲ್ಡ್ ಹುತಾತ್ಮರಾದ ವಿಚಾರವನ್ನು ಹೊತ್ತ ಟೆಲಿಗ್ರಾಂ ಅವರ ಪತ್ನಿಯ ಹೆಸರಿಗೆ ಸೇನೆಯಿಂದ ಬಂದಿತ್ತಾದರೂ ಹೆಸರು ತಪ್ಪಾಗಿದ್ದ ಕಾರಣ ಅಂಚೆಯಣ್ಣ ಊರೆಲ್ಲ ಸುತ್ತಿ ಇವರ ಮನೆಗೆ ತಲುಪಿಸುವಾಗ ಹಲವು ದಿನಗಳೇ ಕಳೆದಿದ್ದವು. ನಿಗದಿತ ಅವಧಿಯೊಳಗೆ ಟೆಲಿಗ್ರಾಂ ವಿಲೇವಾರಿಯಾಗದಿದ್ದರೆ ಮೂಲ ವಿಳಾಸಕ್ಕೆ ಮರಳಿ ಕಳಿಸಬೇಕೆಂಬ ನಿಯಮವಿತ್ತು. ಕೊನೆಯ ದಿನ ಓಸ್ವಾಲ್ಡ್ ಅವರ ಮನೆತಲುಪಿದ ಅಂಚೆಯಣ್ಣ ವಿಳಾಸ ಸರಿಯಾಗಿಲ್ಲದ ಕಾರಣ ಹಿಂದೆ ಕಳಿಸಲೇ ಎಂದು ಪ್ರಶ್ನಿಸಿದ್ದರು. ಏನೇ ಆಗಲಿ ತೆರೆದು ನೋಡೋಣ ಎಂದುಕೊಂಡು ಲೂಸಿ ಅವರು ಪತ್ರವನ್ನು ತೆರೆದಾಗ ಕಂಡದ್ದು ಮಗನ ನಿಧನದ ಸುದ್ದಿಯಾಗಿತ್ತು. ಯಾವುದಕ್ಕೂ ಈ ವಿಚಾರವಾಗಿ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಸಂಬಂಧಿಯೊಬ್ಬರಲ್ಲಿ ಮಾತನಾಡಿ ದೃಢಪಡಿಸಿಕೊಳ್ಳೋಣ ಎಂದು ತಾಯಿ ಟೆಲಿಗ್ರಾಂಅನ್ನು ಹಿಡಿದುಕೊಂಡು ಕಿನ್ನಿಗೋಳಿಯಲ್ಲಿದ್ದ ಸಂಬಂಧಿಯ ಮನೆಗೆ ತೆರಳುತ್ತಿದ್ದಾಗ ದಾರಿಯಲ್ಲಿ ಇಬ್ಬರು ಸೇನಾ ಜವಾನರು ಸಿಕ್ಕಿದರು. ಅವರನ್ನುವಿಚಾರಿಸಿದಾಗ ಓಸ್ವಾಲ್ಡ್ ನೊರೊನ್ಹಾ ಅವರ ಮನೆಯನ್ನು ಹುಡುಕುತ್ತಿರುವುದಾಗಿ ಹೇಳಿದರು. “ನಾನೇ ಆತನ ತಾಯಿ’ ಎಂದು ಪರಿಚಯಿಸಿ ಕೊಂಡು ಸೇನಾ ಸಿಬಂದಿಯನ್ನು ಮನೆಗೆ ಕರೆತಂದರು. ಅವರು ಓಸ್ವಾಲ್ಡ್ ಅವರ ಉಡುಪುಗಳನ್ನು ಹಸ್ತಾಂತರಿಸಿದರು. ಓಸ್ವಾಲ್ಡ್ ಅವರ ಪತ್ನಿ ಸಿಸಿಲಿಯಾ ಅಪೋಲಿನ್ ಆಗ ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಅವರಿಗೆ ಪತಿ ಹುತಾತ್ಮರಾಗಿರುವ ವಿಚಾರ ತಿಳಿಸಲಾಗಿತ್ತು. ತವಾಂಗ್‌ನಲ್ಲಿ ವೀರ ಸ್ಮಾರಕ
ಭೂಸೇನೆಯ ವತಿಯಿಂದ ಓಸ್ವಾಲ್ಡ್ ನೊರೊನ್ಹಾ ಅವರ ವೀರ ಮರಣದ ಹಿನ್ನೆಲೆಯಲ್ಲಿ ತವಾಂಗ್‌ನಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. -ಸುಬ್ರಾಯ ನಾಯಕ್ ಎಕ್ಕಾರು