Advertisement

ಬಜೆ ಹಿನ್ನೀರು ಬಳಕೆ ನಿರ್ಬಂಧ: ರೈತ ಕಂಗಾಲು

12:35 AM Feb 16, 2019 | |

 ವಿಶೇಷ ವರದಿ – ಮಣಿಪಾಲ: ಉಡುಪಿ ನಗರಕ್ಕೆ ನೀರುಣಿಸುವ ಬಜೆ ಅಣೆಕಟ್ಟಿನ ಹಿನ್ನೀರನ್ನು ಬಳಸುವ ರೈತರು ಮಾತ್ರ ಜಿಲ್ಲಾಡಳಿತದ ನೀರು ಬಳಕೆ ನಿರ್ಬಂಧ ದಿಂದ ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅಣೆಕಟ್ಟಿ ನಿಂದಾಗುವ ನೆರೆಯಿಂದಾಗಿ ಕಾರ್ತಿ ಬೆಳೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಕೊಳಕೆ ಬೆಳೆಯನ್ನಾದರೂ ಮಾಡಿ ಬದುಕು ಸಾಗಿಸುತ್ತಿರುವ ಇಲ್ಲಿನ ರೈತರಿಗೆ, ಭತ್ತ ಹಾಳಾಗುವ ಈ  ಕಾಲದಲ್ಲಿ ಪಂಪ್‌ ಮೂಲಕ ಸ್ವರ್ಣೆಯ ಹಿನ್ನೀರಿನ ಬಳಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದರಿಂದ ಬೆಳೆ ಕರಟುವ ಭೀತಿ ಎದುರಾಗಿದೆ. ಫೆಬ್ರವರಿ ಕೊನೆಯವರೆಗಾದರೂ ನೀರು ಕೊಡಿ ಎಂದು ಅಂಗಲಾಚುತ್ತಿರುವ ರೈತರ ಮೊರೆಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ವಿಪರ್ಯಾಸ. ಜತೆಗೆ ತೆಂಗು, ಕಂಗು, ಬಾಳೆ, ತರಕಾರಿ ಸಹಿತ ಉಪಬೆಳೆಗಳೂ ಒಣಸುವ ಭೀತಿ ಎದುರಾಗಿದೆ. 

Advertisement

ಯಾವಾಗಿನಿಂದ ಸಮಸ್ಯೆ?
ಉಡುಪಿ ನಗರಕ್ಕೆ ನೀರು ಪೂರೈಸಲು ಸ್ವರ್ಣಾ ನದಿಗೆ ಬಜೆ ಎಂಬಲ್ಲಿ ಅಣೆಕಟ್ಟು ಕಟ್ಟಲಾಗಿದ್ದು ಅದು 1974ರಿಂದ 
ಆರಂಭಗೊಂಡಿತ್ತು. ಇದಕ್ಕಿಂತ ಮೊದಲು ಇಲ್ಲಿನ ರೈತರು ಪ್ರಕೃತಿದತ್ತ ಸ್ವರ್ಣೆಯ  ಹಿನ್ನೀರಿನಿಂದ ಕೃಷಿ ಮಾಡುತ್ತಿದ್ದರು. ಅಣೆಕಟ್ಟಿನ ಬಳಿಕ ನೀರನ್ನು ಪಂಪ್‌ ಮಾಡಿ ಕೃಷಿಗೆ ಬಳಸಲಾಗು ತ್ತಿದೆ. ಬಜೆ 2ನೇ ಹಂತ 2003-04 ರಿಂದ ಆರಂಭಿಸಿದ್ದು 2007ರಲ್ಲಿ ಇದು ಕಾರ್ಯಾರಂಬಿಸಿತ್ತು. ಉಡುಪಿ ನಗರಕ್ಕೆ ನೀರಿನ ಕೊರತೆ ಉಂಟಾಗುವ ಹಿನ್ನೆಲೆಯಲ್ಲಿ ಜನವರಿ ಬಳಿಕ ಪಂಪ್‌ ಮೂಲಕ ಕೃಷಿಗೆ ನೀರನ್ನು ತೆಗೆಯದಂತೆ ಕೃಷಿಕರಿಗೆ 2007ರಲ್ಲಿ ಆದೇಶಿಸಲಾಗಿತ್ತಾದರೂ ಈ ವರ್ಷ ಫೆಬ್ರವರಿ ಮೊದಲ ದಿನವೇ ಪಂಪ್‌ಸೆಟ್‌ಗೆ ವಿದ್ಯುತ್‌ ಸ್ಥಗಿತಗೊಳಿಸಲಾಗಿದೆ. 

ಪಂಪ್‌ ಸೆಟ್‌ಗೆ ವಿದ್ಯುತ್‌ ಕಡಿತ 
ಬಜೆ ಹಿನ್ನೀರಿನ ಆಶ್ರಯದಲ್ಲಿ ಸುಮಾರು 180 ಎಕರೆ ಭತ್ತ ಕೃಷಿ ಇದ್ದು ಫೆಬ್ರವರಿಯಲ್ಲಿ ಭತ್ತದಲ್ಲಿ ಹಾಲು ಆಗುವ ಸಮಯವಾಗಿದೆ. ಆದರೆ ಫೆಬ್ರವರಿ ಆರಂಭದಲ್ಲೇ ಪಂಪ್‌ಸೆಟ್‌ಗಳಿಗೆ ನೀಡಲಾಗಿರುವ ತ್ರೀ ಫೇಸ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ನೀರನ್ನೇ ಅವಲಂಭಿಸಿದ್ದ ಕೃಷಿಕರ ಗದ್ದೆಗಳು ಒಣಗಲು ಆರಂಭಿಸಿದ್ದು ಫ‌ಸಲು ಬರುವಾಗಲೇ ಕರಟಲು ಆರಂಭಿಸಿದೆ. ಫೆಬ್ರವರಿ ಕೊನೆಯವರೆಗಾದರೂ ನೀರು ಕೊಟ್ಟು ನಮ್ಮ ಬೆಳೆ ಉಳಿಸಿ ಎಂಬ ರೈತರ ಬೇಡಿಕೆಗೆ ಅಧಿಕೃತರಿಂದ ಯಾವ ಸ್ಪಂದನೆಯೂ ದೊರೆತಿಲ್ಲ.

ಕಾರ್ತಿ ಇಲ್ಲ; ಕೊಳಕೆಯೂ ನಷ್ಟ!
ಮಳೆಗಾಲದಲ್ಲಿ ಡ್ಯಾಂ ನೀರು ಗದ್ದೆ ಮತ್ತು ಕೆಲವರ ಮನೆವರೆಗೆ ತುಂಬುವುದರಿಂದ ಈ ಅಚ್ಚುಕಟ್ಟು ಪ್ರದೇಶದಲ್ಲಿ ಕಾರ್ತಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಇಲ್ಲಿನ ರೈತರು ಅನಿವಾರ್ಯವಾಗಿ ಹಿನ್ನೀರಿನಿಂದ ಕೊಳಕೆ  ಬೆಳೆ ಮಾಡಿಕೊಳ್ಳುತ್ತಿದ್ದಾರೆ. ಈಗ ಪಂಪ್‌ಸೆಟ್‌ಗೆ ವಿದ್ಯುತ್‌ ಸ್ಥಗಿತಗೊಳಿಸಿದ್ದರಿಂದ ಕೊಳಕೆಯೂ ಒಣಗುತ್ತಿದೆ. ಒಟ್ಟಿನಲ್ಲಿ ಉಡುಪಿಗೆ ನೀರು ಸಿಗುವುದಕ್ಕಾಗಿ ಕಾರ್ತಿ ಬೆಳೆ ತ್ಯಾಗ ಮಾಡಿದ ಇಲ್ಲಿನ ರೈತರಿಗೆ ಈಗ ಕೊಳಕೆಯೂ ಮಾಡದಂತಾಗಿದೆ.

ಬದಲಿ ವ್ಯವಸ್ಥೆ ಇಲ್ಲ
ಹಿನ್ನೀರನ್ನು ಬಳಸುತ್ತಿರುವ ರೈತರಿಗೆ ಕೃಷಿಗೆ ಬಾವಿ, ಕೆರೆ ಅಥವಾ ಬೇರೆ ನೀರಿನ ವ್ಯವಸ್ಥೆ ಇಲ್ಲ. ಹೆಚ್ಚುವರಿ ಬಾವಿ ತೋಡಲು ಖರ್ಚು ಮಾಡುವಷ್ಟು ಅನುಕೂಲವೂ ರೈತರಿಗೆ ಇಲ್ಲ. ಸರಕಾರ ನೀಡುವ ನೆರವು ವಾಸ್ತವದಲ್ಲಿ ಅನುಷ್ಠಾನಕ್ಕೆ ಸಾಲದು. ಬೆಳೆ ನಷ್ಟವಾದರೆ ಸಾಲ ಶೂಲದಲ್ಲಿರುವ ರೈತರ ಸ್ಥಿತಿ ಮತ್ತಷ್ಟು ಕಂಗೆಡಲಿದೆ. 

Advertisement

ಡ್ಯಾಂನಿಂದ ನೀರು ಸೋರಿಕೆ 
ಮೊದಲ ಹಂತದ ಡ್ಯಾಂನಲ್ಲಿ ಒಂದು ಗೇಟ್‌ ಮುರಿದಿದ್ದರಿಂದ ಡಿಸೆಂಬರ್‌ ವರೆಗೂ ನೀರು ಪೋಲಾಗುತ್ತಿತ್ತು. ಬಳಿಕ ಅಲ್ಲಿ ಮರಳಿನ ಗೋಣಿ ಚೀಲಗಳನ್ನು ಹಾಕಿದ್ದು ಅದರಲ್ಲೂ ನೀರು ಸೋರಿ ಪೋಲಾಗುತ್ತಿದೆ. ಇದು ನಿರ್ವಹಣೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಇದನ್ನು ತಡೆಯದ ಅಧಿಕಾರಿಗಳು  ತಮಗೆ ನೀರು ಬಳಸಲು ತಡೆಯೊಡ್ಡುತ್ತಿದ್ದಾರೆ. 

ಸ್ಪಂದಿಸಿ 
ಫೆಬ್ರವರಿ ಕೊನೆಯ ವರೆಗಾದರೂ ನೀರು ಕೊಟ್ಟರೆ ಬೆಳೆ ಉಳಿಯಬಹುದು. ಕನಿಷ್ಠ ಎರಡು ದಿನವಾದರೂ ನೀರು ಕೊಡಬೇಕು. ಜಿಲ್ಲಾಡಳಿತ ಮಾನವೀಯ ಅಂತಃಕರಣದಿಂದ ಸ್ಪಂದಿಸಬೇಕು.
– ನಾರಾಯಣ ಪೂಜಾರಿ, ಹಿನ್ನೀರಿನ ಕೃಷಿಕ, ಗ್ರಾ.ಪಂ. ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next