ಉಪ್ಪಿನಂಗಡಿ: ನಾಲ್ಕು ತಿಂಗಳ ಹಿಂದೆ ಉಂಟಾದ ಪ್ರವಾಹದಲ್ಲಿ ಸಂತ್ರಸ್ತರಾದವರಿಗಾಗಿ ದಾನಿಗಳು ನೀಡಿದ್ದ ಬಟ್ಟೆಬರೆಗಳನ್ನು ಸರಿಯಾಗಿ ವಿತರಿಸದೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಉಳಿಸಿಕೊಂಡಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕು ಬಜತ್ತೂರು ಗ್ರಾ.ಪಂ. ಕಟ್ಟಡದ ಸಭಾಭವನದಲ್ಲಿ ಈ ವಸ್ತುಗಳನ್ನು ನಾಲ್ಕು ತಿಂಗಳಿಂದ ಇರಿಸಲಾಗಿದ್ದು, ಬಹುಪಾಲು ಈಗ ಇಲಿ, ಹೆಗ್ಗಣಗಳ ಪಾಲಾಗಿದೆ.
ಜುಲೈ ತಿಂಗಳ ಭಾರೀ ಮಳೆ, ನೆರೆಯಿಂದ ಬಜತ್ತೂರು, ಉಪ್ಪಿನಂಗಡಿ, 34-ನೆಕ್ಕಿಲಾಡಿ ಗ್ರಾಮಗಳಲ್ಲಿಯೂ ಹಲವಾರು ಮಂದಿ ಮನೆ ಕಳೆದುಕೊಂಡಿದ್ದರು. ಹಲವರಿಗೆ ನೆರವು ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು. ಬೆಂಗಳೂರು ಮೂಲದ ಸಂಸ್ಥೆಯೊಂದು ಒಂದು ಲಾರಿಯಷ್ಟು ಬಟ್ಟೆಬರೆಯನ್ನು ಸಂತ್ರಸ್ತರಿಗೆ ಹಂಚಲು ಬಜತ್ತೂರು ಗ್ರಾ.ಪಂ.ಗೆ ಮಾಡಿತ್ತು. ಅವುಗಳನ್ನು ಬಜತ್ತೂರು ಗ್ರಾಮದಲ್ಲಿ ವಿತರಿಸಿದ್ದರೂ ಬೇರೆಡೆ ವಿತರಣೆ ಮಾಡಲು ವ್ಯವಸ್ಥೆ ಮಾಡದ ಕಾರಣ ಉಳಿದುಕೊಂಡಿದೆ.
ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯ ಬಗ್ಗೆ ದೂರುಗಳು ಕೇಳಿ ಬಂದಿವೆ. ಬಜತ್ತೂರು ಗ್ರಾಮದಲ್ಲಿ ಕೇವಲ 2 ಮನೆ ಮಾತ್ರ ಕುಸಿದು ಬಿದ್ದಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಬಟ್ಟೆ ಇಲ್ಲದೆ ಕೈಚಾಚುವಂತಹ ಫಲಾನುಭವಿಗಳು ಬಜತ್ತೂರಿನಲ್ಲಿ ಇರಲಿಲ್ಲ. ಹೀಗಿರುವಾಗ ಒಂದು ಲಾರಿ ಬಟ್ಟೆಬರೆ ಇಲ್ಲಿ ಇರಿಸಿಕೊಂಡದ್ದೇ ತಪ್ಪು. ಇಲ್ಲಿ ವಿತರಣೆ ಮಾಡಿ ಉಳಿದುದನ್ನು ಅಗತ್ಯವಿದ್ದೆಡೆಗೆ ಕಳುಹಿಸಬಹುದಿತ್ತು ಎಂದು ಸಾಮಾಜಿಕ ಕಾರ್ಯಕರ್ತ ವಿಲ್ಫೆಡ್ ಡಿ’ಸೋಜಾ ತಿಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ವಿತರಿಸುವುದಕ್ಕಾಗಿ ಬೆಂಗಳೂರಿನ ಸಂಸ್ಥೆಯೊಂದರಿಂದ ಒಂದು ಲಾರಿ ಬಟ್ಟೆ ಬಂದಿತ್ತು. ಗ್ರಾಮದಲ್ಲಿ ಸುಮಾರು 30 ಮಂದಿಗೆ ವಿತರಿಸಿದ್ದೇವೆ. ಇಲ್ಲಿಗೆ ಸರಬರಾಜು ಮಾಡಿದ ಸಂಸ್ಥೆಯ ವ್ಯಕ್ತಿಯೊಂದಿಗೆ ಮಾತನಾಡಿ ಉಳಿದುದನ್ನು ಬೇರೆಡೆಗೆ ಕೊಂಡೊಯ್ಯಲು ತಿಳಿಸಿದ್ದೆ, ಆದರೆ ಅವರು ಕೊಂಡುಹೋಗದ ಕಾರಣ ಉಳಿದಿದೆ. ಈಗ ಇದನ್ನು ಅನಾಥಾಶ್ರಮಕ್ಕೆ ಕೊಡಲು ನಿರ್ಧರಿಸಿದ್ದೇವೆ.
-ಸಂತೋಷ್ ಕುಮಾರ್ ಪರಂದಾಜೆ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ