Advertisement

ನ್ಯಾನೋ ಬಳಿಕ ಬಜಾಜ್‌

09:04 AM Apr 30, 2019 | Hari Prasad |

ಒಂದು ಲಕ್ಷದ ಕಾರು ಎಂದು ಟಾಟಾ ಕಂಪನಿಯ ನ್ಯಾನೋ, ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸುದ್ದಿಯಾದದ್ದು, ಬಳಿಕ ಮಾರುಕಟ್ಟೆಯಲ್ಲಿ ಒಂದಷ್ಟು ಹವಾ ಸೃಷ್ಟಿಸಿರುವುದು ಗೊತ್ತೇ ಇದೆ. ನ್ಯಾನೋ ಆಬಳಿಕ ಬೆಲೆಯನ್ನು ಹೆಚ್ಚಿಸಿಕೊಂಡಿತ್ತು. ಆದರೀಗ, ಈಗ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದೆ. ಇದೇ ವೇಳೆ ಇತ್ತ ಬಜಾಜ್‌ ಕೂಡ ಹೊಸ ಮಾದರಿಯ ಕ್ವಾಡ್ರ್ ಸೈಕಲ್‌ ಕ್ಯೂಟ್‌ ಹೆಸರಿನ ಕಾರು ತಯಾರಿಕೆಯನ್ನು ಆರಂಭಗೊಳಿಸಿದ್ದು, ಈಗಾಗಲೇ ವಿದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊನ್ನೆಯಷ್ಟೇ ಭಾರತದ ಮಾರುಕಟ್ಟೆಗೂ ಬಿಡುಗಡೆ ಮಾಡಲಾಗಿದೆ. ಆ ಕಾರುಗಳು ಸದ್ಯ ಮಹಾರಾಷ್ಟ್ರದಲ್ಲಿ ಮಾತ್ರ ಲಭ್ಯವಿವೆ. ಕೆಲವೇ ತಿಂಗಳಲ್ಲಿ ಬೇರೆ ರಾಜ್ಯಗಳಲ್ಲೂ ಲಭ್ಯವಾಗಲಿವೆ.

Advertisement

ಏನಿದು ಕ್ವಾಡ್ರ್ ಸೈಕಲ್‌
ನಾಲ್ಕು ಚಕ್ರವಿರುವ ಕಾರಿನ ಮಾದರಿಯ ವಾಹನಗಳು ಇವು ಅಥವಾ ಇವುಗಳಿಗೆ ಸಣ್ಣ ಕಾರು ಎಂದೇ ಕರೆಯಬಹುದು. ಈವರೆಗೆ ಭಾರತದಲ್ಲಿ ಈ ರೀತಿಯ ವಾಹನಗಳಾಗಲಿ, ಅವುಗಳ ಮಾರಾಟಕ್ಕೆ ಅನುಮತಿಯಾಗಲಿ ಇರಲಿಲ್ಲ. ಬಜಾಜ್‌ ಕ್ಯೂಟ್‌ ಬಿಡುಗಡೆಗಾಗಿ ಕೇಂದ್ರ ಸರಕಾರದಿಂದ ಅನುಮತಿ ಪಡೆದುಕೊಳ್ಳುವುದರೊಂದಿಗೆ ಹೊಸ ಕ್ವಾಡ್ರ್ ಸೈಕಲ್‌ ಮಾರುಕಟ್ಟೆಗೆ ಭಾರತ ತೆರೆದುಕೊಂಡಿದೆ.

ಈ ಪುಟಾಣಿ ಕಾರುಗಳು ಕಡಿಮೆ ಮಾಲಿನ್ಯಕಾರಿಯಾಗಿದ್ದು, ನಗರ ಪ್ರದೇಶಗಳಿಗೆ ಹೆಚ್ಚು ಸೂಕ್ತವಾದವುಗಳು. ಭಾರತದಂಥ ದಟ್ಟಣೆಯಿರುವ ನಗರಗಳಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಹೇಳಲಾಗಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಇಂತಹ ವಾಹನಗಳನ್ನು 16-18 ವರ್ಷದವರಿಗೂ ಚಾಲನೆಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಿನ್ಯಾಸ ಹೇಗಿದೆ?
ಬಜಾಜ್‌ನ ಕ್ಯೂಟ್‌, ಹೆಸರಿಗೆ ತಕ್ಕಂತೆ ಕ್ಯೂಟ್‌ ಆಗಿದೆ. ಪುಟಾಣಿ ವಿನ್ಯಾಸ ಇದರಲ್ಲಿದ್ದು ಹಿಂಭಾಗದಿಂದ ರಿಕ್ಷಾದಂತೆ ಕಾಣಿಸುತ್ತದೆ. ನಾಲ್ವರು ಇದರಲ್ಲಿ ಕೂರಬಹುದು. ಮುಂಭಾಗದ ದೊಡ್ಡದಾದ ಎರಡು ಹೆಡ್‌ಲೈಟ್‌ಗಳು, ಅಗಲವಾದ ಮುಂಭಾಗದ ಗಾಜು, ಹಿಂಭಾಗ ಎಂಜಿನ್‌ ಹೊಂದಿದೆ. ಹಿಂಭಾಗ ಎರಡು ಬ್ರೇಕ್‌ಲೈಟ್‌ಗಳು, ಫೈಬರ್‌ ಬಂಪರ್‌ ಹೊಂದಿದೆ. ಡೋರ್‌ಗಳೂ ಫೈಬರ್‌ನದ್ದು ಜೊತೆಗೆ ಸ್ಲೆ„ಡ್‌ ಮಾಡಬಹುದಾದ ವಿಂಡೋ ಗ್ಲಾಸ್‌ಗಳನ್ನು ಹೊಂದಿದೆ. ಸೀಟುಗಳು ರಿಕ್ಷಾ ಮಾದರಿಯಲ್ಲಿವೆ.


ಒಳಭಾಗದಲ್ಲಿ ಎ.ಸಿ. ಇಲ್ಲ. ಆದರೆ, ಗಾಳಿ ಬರುವ ವ್ಯವಸ್ಥೆ ಇದೆ. ಪುಟಾಣಿ ಮೀಟರ್‌, ಎಫ್ಎಂ ವ್ಯವಸ್ಥೆ ಹೊಂದಿದೆ. ನ್ಯಾನೋ ಮತ್ತು ಮಾರುತಿ 800 ಗಿಂತಲೂ ತುಸು ಕಡಿಮೆ ಜಾಗ ಇದರಲ್ಲಿದೆ. ಹಿಂದೆ ತೆರೆಯ ಬಹುದಾದ ಡಿಕ್ಕಿ ಇಲ್ಲ. ಹಿಂಭಾಗದ ಸೀಟಿನ ಹಿಂದೆ ತುಸು ಸ್ಥಳಾವಕಾಶವಿದೆ. ಹಾಗೆಯೇ ಮುಂದಿನ ಬಾನೆಟ್‌ ಎತ್ತಿದರೆ ತುಸು ಸ್ಥಳಾವಕಾಶವಿದೆ. 2752 ಎಂಎಂ ಉದ್ದವಿದ್ದು, 1312 ಎಂಎಂ ಅಗಲವಿದೆ. 1925 ವೀಲ್‌ಬೇಸ್‌ ಇದ್ದು, 3.5 ಎಂಎಂ ಟರ್ನಿಂಗ್‌ ರೇಡಿಯಸ್‌ ಇದೆ. ಇದರಿಂದ ರಿಕ್ಷಾ ಹೋಗುವ ಜಾಗಗಳಲ್ಲೆಲ್ಲ ಈ ಕಾರು ನಿರಾಯಾಸವಾಗಿ ಚಲಿಸಬಹುದು. ವಾಹನದ ಟಾಪ್‌ನಲ್ಲಿ ರೂಫ್ರೈಲ್ಸ್‌ ಅಳವಡಿಸಲು ಅವಕಾಶವಿದ್ದು 40 ಕೆ.ಜಿ.ವರೆಗೆ ಭಾರದ ವಸ್ತುಗಳನ್ನು ಇಡಬಹುದು.

ಎಂಜಿನ್‌ ಸಾಮರ್ಥ್ಯ
4 ಸ್ಟ್ರೋಕ್‌ನ ಟ್ವಿನ್‌ಸ್ಪಾರ್ಕ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದರಲ್ಲಿದೆ. 216 ಸಿಸಿಯ ಎಂಜಿನ್‌ ಸಿಎನ್‌ಐ ಮತ್ತು ಪೆಟ್ರೋಲ್‌ನಲ್ಲಿ ಲಭ್ಯವಿದೆ. ಪೆಟ್ರೋಲ್‌ ಎಂಜಿನ್‌ 13 ಎಚ್‌ಪಿ ಶಕ್ತಿ ಉತ್ಪಾದಿಸಿದರೆ, ಸಿಎನ್‌ಜಿ 11 ಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಪೆಟ್ರೋಲ್‌ ಎಂಜಿನ್‌ 4 ಸಾವಿರ ಆರ್‌ಪಿಎಂನಲ್ಲಿ 18.9 ಟಾರ್ಕ್‌ ಉತ್ಪಾದಿಸುತ್ತದೆ. 5+1 ಗಿಯರ್‌ ಬಾಕ್ಸ್‌ ಹೊಂದಿದೆ. ಇದರ ಗಿಯರ್‌ ಕೂಡ ಬೈಕ್‌ ಮಾದರಿ 1,2, 3 ಮತ್ತು 3,2,1 ರೀತಿ ಹಾಕಬೇಕು. ಗರಿಷ್ಠ 70 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. 8 ಕೆ.ಜಿ. ಪೆಟ್ರೋಲ್‌ ಮತ್ತು 8 ಲೀ.ಸಿಎನ್‌ಜಿ ಟ್ಯಾಂಕ್‌ ಹೊಂದಿದೆ. ಸುಮಾರು 35 ಕಿ.ಮೀ. ಮೈಲೇಜ್‌ ನೀಡುತ್ತದೆ.

Advertisement

ಯಾರಿಗೆ ಬೆಸ್ಟ್‌?
ನಿತ್ಯವೂ ವಾಹನದಟ್ಟಣೆ ಇರುವ ಪೇಟೆಗಳಲ್ಲಿ ಸಂಚಾರ, ಮನೆಯಲ್ಲಿ ನಿಲ್ಲಿಸಿಕೊಳ್ಳಲು ಸರಿಯಾಗಿ ಜಾಗವಿಲ್ಲ. ದೊಡ್ಡ ಕಾರು ಒಬ್ಬರಿಗೇ ಓಡಿಸುವುದು ವ್ಯರ್ಥ. ಸಣ್ಣ ಕಾರೊಂದು ಬೇಕು ಎಂದಿದ್ದರೆ ಬಜಾಜ್‌ ಕ್ಯೂಟ್‌ ಉತ್ತಮ ಆಯ್ಕೆ. ಜತೆಗೆ ಮಾರುಕಟ್ಟೆಗೆ, ಇತರ ಕೆಲಸಗಳಿಗೆ ಹೋಗಲೂ ಇದು ಪ್ರಯೋಜನಕಾರಿ. ಬೆಲೆ ಸುಮಾರು 2.4 ಲಕ್ಷ ರೂ. ಇದೆ.

ತಾಂತ್ರಿಕತೆ
– 4ಸ್ಟ್ರೋಕ್‌ ಸಿಎನ್‌ಜಿ/ಪೆಟ್ರೋಲ್‌
– ಟ್ವಿನ್‌ಸ್ಪಾರ್ಕ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌
– 216 ಸಿಸಿಯ ಎಂಜಿನ್‌
– 13/11 ಎಚ್‌ಪಿಯ ಎಂಜಿನ್‌
– 18.9 ಟಾರ್ಕ್‌
– 1925 ವೀಲ್‌ ಬೇಸ್‌
– 3.5 ಎಂಎಂ ಟರ್ನಿಂಗ್‌ ರೇಡಿಯಸ್‌

Advertisement

Udayavani is now on Telegram. Click here to join our channel and stay updated with the latest news.

Next