Advertisement

ರಸ್ತೆಯಲ್ಲೇ ಹರಿಯುತಿದೆ ನೀರು, ಜೀವಬಲಿಗೆ ಕಾದಿವೆ ಹೊಂಡಗಳು

06:45 AM Jun 14, 2018 | Team Udayavani |

ಕಾರ್ಕಳ: ಬಜಗೋಳಿ ಪೇಟೆಯಲ್ಲಿ ರಚನೆಯಾಗುತ್ತಿರುವ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತ್ತಿದ್ದು, ಇದರಿಂದಾಗಿ ಪೇಟೆಯಲ್ಲಿ ಹತ್ತಾರು ಸಮಸ್ಯೆಗಳು ಉದ್ಭವವಾಗಿದೆ. ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದೇ ರಸ್ತೆಯೇ ನದಿಯಂತಾಗುತ್ತಿದೆ.

Advertisement

ಕಳೆದ ಐದಾರು ತಿಂಗಳ ಹಿಂದೆ ಪ್ರಾರಂಭಗೊಂಡ ಒಳಚರಂಡಿ ಕಾಮಗಾರಿ ಮಳೆ ಪ್ರಾರಂಭವಾಗುವ ಮುನ್ನವೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದ್ದು, ಮಳೆ ಪ್ರಾರಂಭವಾಗುತ್ತಲೇ ಹತ್ತಾರು ಸಮಸ್ಯೆಗಳು ಎದುರಾಗಿದೆ.

ಬಜಗೋಳಿ ಪೇಟೆಯ ಸಮೀಪದಿಂದ ಒಂದು ಬದಿಯಲ್ಲಿ ಒಂದಷ್ಟು ದೂರ ಕಾಂಕ್ರೀಟ್‌ ಹಾಕಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಮಧ್ಯ ಭಾಗದಲ್ಲಿ ಹಾಗೆಯೇ ಬಿಟ್ಟು ಚರಂಡಿ ಕೆಲಸ ಮುಂದುವರಿಸಲಾಗಿದೆ. ಅದೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದೆ. ಮಧ್ಯಭಾಗದಲ್ಲಿ ಜೆಸಿಬಿಯ ಮೂಲಕ ಚರಂಡಿ ಮಣ್ಣು ತೆಗೆದು ಹಾಗೆಯೇ ಬಿಟ್ಟಿರುವುದರಿಂದ ಮಳೆ ನೀರು ಹರಿದು ಹಿಂದಿನಂತೆಯೇ ಮಣ್ಣು ತುಂಬಿದೆ.

ಅಪಾಯಕಾರಿ ಹೊಂಡಗಳು
ಇನ್ನು ಒಳಚರಂಡಿಗಳಿಗೆ ಅಲ್ಲಲ್ಲಿ  ಕಾಂಕ್ರೀಟ್‌ ಸ್ಲಾéಬ್‌ನಿಂದ ಮುಚ್ಚಲಾಗಿದ್ದರೆ ಕೆಲವು ಕಡೆ ತೆರೆದ ಸ್ಥಿತಿಯಲ್ಲಿದೆ. ಈ ಹೊಂಡಗಳು ಅಪಾಯ ಆಹ್ವಾನಿಸುತ್ತಿವೆ. ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡುವ ಪ್ರದೇಶದಲ್ಲೇ ಈ ರೀತಿಯಾಗಿ ತೆರೆದ ಹೊಂಡಗಳಿರುವುದು ಮಳೆಗಾಲದಲ್ಲಿ  ಭಾರಿ ಅಪಾಯದ ಮುನ್ನೆಚ್ಚರಿಕೆ.

ಕುಡಿಯುವ ನೀರಿನ ಪೈಪ್‌ ಕಟ್‌
ಚರಂಡಿಗಾಗಿ ಕೆಲವು ಭಾಗದಲ್ಲಿ ಎರಡು ಮೂರು ಬಾರಿ ಜೆಸಿಬಿ ಮೂಲಕ ಮಣ್ಣು ತೆಗೆಯಲಾಗಿದ್ದು, ಕುಡಿಯುವ ನೀರಿನ ಪೈಪ್‌ಲೈನ್‌ ಕೂಡ ತುಂಡಾಗಿದೆ. ಹಲವು ಬಾರಿ ಕುಡಿಯುವ ನೀರಿಗೆ ಕೊಳಚೆ ನೀರು ಸೇರಿಕೊಂಡು ಸಮಸ್ಯೆ ಉಂಟಾಗಿದೆ.

Advertisement

ರಸ್ತೆಯಲ್ಲೇ ಹರಿಯುತಿದೆ ಮಳೆ, ತ್ಯಾಜ್ಯ ನೀರು
ಚರಂಡಿಯ ಕಾಮಗಾರಿ ಪೂರ್ಣಗೊಳ್ಳದೇ ಮಳೆಯ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಬಂದ ತ್ಯಾಜ್ಯಗಳೂ ರಸ್ತೆಗೆ ಬೀಳುತ್ತಿವೆ. ಅಂಗಡಿ, ಹೋಟೆಲ್‌ಗ‌ಳ ತ್ಯಾಜ್ಯ ನೀರು ಕೂಡ ಮಳೆ ನೀರಿನೊಂದಿಗೆ ರಸ್ತೆಯಲ್ಲೇ ಹರಿಯುತ್ತದೆ. ಆ ತೆರೆದ‌ ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾದನೆಗೂ ಕಾರಣವಾಗುತ್ತಿದೆ. ಮಳೆ ಕಡಿಮೆಯಾಗುತ್ತಲೇ ತೆರೆದ ಚರಂಡಿಯಲ್ಲಿ ಶೇಖರಣೆಗೊಂಡ ನೀರು ದುರ್ನಾತ ಬೀರುತ್ತದೆ.

ಆವಾಂತರ ಸೃಷ್ಟಿ
ನಿಧಾನಗತಿ ಕಾಮಗಾರಿಯಿಂದ  ಮಳೆ ಬೀಳುತ್ತಲೇ ಅವಾಂತರ ಸೃಷ್ಟಿಯಾಗಿದೆ.  ಕೆಲವು ಭಾಗದಲ್ಲಿ ಮಣ್ಣು, ತ್ಯಾಜ್ಯಗಳು ಶೇಖರಣೆಗೊಂಡಿದೆ. ಅದನ್ನು ತೆಗೆಯುವ ಅವಶ್ಯಕತೆ ಇದೆ. ಮೇ ತಿಂಗಳಿನಲ್ಲಿ ಕಾಮಗಾರಿ ಪೂರ್ತಿಗೊಳಿಸಿದ್ದರೆ ಹೀಗಾಗುತ್ತಿರಲಿಲ್ಲ.
– ಹೆಸರು ಹೇಳಲಿಚ್ಚಿಸಿದ
ಸ್ಥಳೀಯ ಅಂಗಡಿ ಮಾಲೀಕ

ಸೂಚನೆ ನೀಡಲಾಗಿದೆ 
ಒಳಚರಂಡಿ ಕೆಲಸ ಅರ್ಧಕ್ಕೆ ನಿಲ್ಲಿಸಲಾಗಿದೆ. ಪೂರ್ಣಗೊಳಿಸಲು ಈಗಾಗಲೇ ಸಂಬಂಧಿಸಿದವರಿಗೆ ಲಿಖೀತವಾಗಿ ಮನವಿ ಸಲ್ಲಿಸಲಾಗಿದೆ. ಅಂಗಡಿ ತೆರವುಗೊಳಿಸಲು ಈ ಹಿಂದೆ ಸೂಚನೆ ನೀಡಿದ್ದರು, ತೆರವು ಮಾಡಲಾಗಿದೆ. ಆದರೂ ಕೆಲಸ ಪ್ರಾರಂಭಿಸಲಿಲ್ಲ.
– ಗೀತಾ,
ಮುಡಾರು ಗ್ರಾ.ಪಂ. ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next