Advertisement

ಬೈತಡ್ಕ ಪ್ರಕರಣ: ಅಪಘಾತವೆಂದು ಕರೆ ಮಾಡಿದ್ದು11.52ಕ್ಕೆ, ಆದರೆ ಕಾರು ಬಿದ್ದದ್ದು 12.02ಕ್ಕೆ

09:14 AM Jul 11, 2022 | Team Udayavani |

ಪುತ್ತೂರು: ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ  ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಬೈತಡ್ಕ ಮಸೀದಿಯ ಬಳಿಯಿರುವ ಕಿರುಸೇತುವೆಯಿಂದ ಕಾರೊಂದು ಕೆಳಗೆ ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಕುರಿತಂತೆ ಮೂಡಿರುವ ದೂರವಾಣಿ ಕರೆ ಸಮಯದ ಗೊಂದಲಕ್ಕೆ ಸಂಬಂಧಿಸಿದಂತೆ ಕಾರು ಬಿದ್ದ ಸಮಯ ಹಾಗೂ ಯುವಕರಿಬ್ಬರು ಕರೆ ಮಾಡಿರುವ ಸಮಯದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗಿದೆ.

Advertisement

ನಾಪತ್ತೆಯಾಗಿರುವ ಯುವಕರನ್ನು ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ.

ಸವಣೂರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ರಾತ್ರಿ 11.53 ಕ್ಕೆ ತಪಾಸಣೆಗೆ ಒಳಪಟ್ಟು ಮುಂದೆ ಸಾಗಿ 12. 02 ನಿಮಿಷಕ್ಕೆ ಕಾರು ಸೇತುವೆಗೆ ಢಿಕ್ಕಿಯಾಗಿ ತಡೆಗೋಡೆ ಮುರಿದು ಕೆಳಕ್ಕೆ ಬಿದ್ದಿದೆ. ನಾಪತ್ತೆಯಾಗಿರುವ ಪೈಕಿ ವಿಟ್ಲ ಕನ್ಯಾನ ನಿವಾಸಿ ಧನುಷ್ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಧನುಷ್ ಅವರ ತಾಯಿಗೆ ಕರೆ ಮಾಡಿ ನಮ್ಮ ಕಾರು ಹಳೆಯಂಗಡಿಯಲ್ಲಿ ಲಾರಿಗೆ ಢಿಕ್ಕಿಯಾಗಿದೆ,  ನಾವು ಬದುಕಿ ಉಳಿದಿರುವುದೇ ಹೆಚ್ಚು, ಏನೂ ತೊಂದರೆಯಿಲ್ಲ, ನಾವು ಮನೆಗೆ ಮುಟ್ಟುವಾಗ ಬೆಳಿಗ್ಗೆ ಆಗಬಹುದು ಎಂದು ಹೇಳಿರುವ ವಿಚಾರ ಕೆಲವು ಸಂಶಯಗಳನ್ನು ಹುಟ್ಟು ಹಾಕಿದೆ.

ವಿಚಾರಣೆಯಲ್ಲಿ ನಿಖರ ಮಾಹಿತಿ

ಪೊಲೀಸರು ತನಿಖೆ ನಡೆಸಿದಾಗ ಧನುಷ್ ತಾಯಿಗೆ ಕರೆ ಮಾಡಿರುವುದು 11.52 ಕ್ಕೆ ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ. ಕಾರು ಹೊಳೆಗೆ ಬಿದ್ದಿರುವುದು 12.02 ನಿಮಿಷಕ್ಕೆ. ಹಾಗಾಗಿ ಕಾರು ಹೊಳಗೆ ಬೀಳುವ ಮುಂಚೆ ಕರೆ ಮಾಡಲಾಗಿದೆ ಎಂದು ನಿರ್ಧಾರಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಕಾರಿನೊಂದಿಗೆ ಹೊಳೆಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

Advertisement

ಸಾಕ್ಷಿಯಾದ ಸಿಸಿ ಕ್ಯಾಮರಾ

ಕಾರು ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದು ಹೊಳೆಗೆ ಬಿದ್ದಿರುವ ಪ್ರಕರಣಕ್ಕೆ ಮಸೀದಿಯಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಸಾಕ್ಷಿಯಾಯಿತು. ರವಿವಾರ ಬಕ್ರೀದ್ ಹಬ್ಬವಾಗಿದ್ದರಿಂದ ಮುಸ್ಲಿಮ್ ಬಾಂಧವರು ಮುಂಜಾವಿನ 4.30 ವೇಳೆಗೆ ಮಸೀದಿಗೆ ಆಗಮಿಸುವಾಗ ಸೇತುವೆಯ ತಡೆಗೋಡೆ ಮುರಿದು ಹೋಗಿರುವುದು ಗೋಚರಿಸಿತು. ಬಳಿಕ ಮಸೀದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಾರೊಂದು ಸೇತುವೆಗೆ ಢಿಕ್ಕಿ ಹೊಡೆದು ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿತು. ತಕ್ಷಣ ಮಸೀದಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದಿನಕ್ಕೆ 8 ಬಾರಿ ಊಟ ಮಾಡುತ್ತಿದ್ದರಂತೆ ನಟ ಪ್ರಭಾಸ್‌ : ಯಾಕೆ ಗೊತ್ತೇ…?

ಮಧ್ಯಾಹ್ನದ ವೇಳಗೆ ಕಾರು ಹೊಳೆಗೆ ಬಿದ್ದಿರುವ ಬಗ್ಗೆ ಅಂತೆ ಕಂತೆಗಳ ಸುದ್ದಿ ಎಲ್ಲೆಲ್ಲೋ ಹರಿದಾಡುತ್ತಿತ್ತು. ಕಾರು ಹೇಗೆ ಬಿದ್ದಿದೆ ಹಾಗೂ ಎಷ್ಟು ಹೊತ್ತಿಗೆ ಬಿದ್ದಿಗೆ ಎನ್ನುವ ವಿಚಾರ ಸ್ಪಷ್ಟಪಡಿಸಲು ಮತ್ತೆ ಸಿಸಿ ಕ್ಯಾಮರಾ ಮೊರೆ ಹೋಗಿ ನಾಪತ್ತೆಯಾಗಿರುವ ಇಬ್ಬರು ಧನುಷ್‌ಗಳ  ಪೈಕಿ ಒಬ್ಬ ಧನುಷ್ ಕಾರು ಹೊಳೆಗೆ ಬೀಳುವ ಮುಂಚೆಯೇ ಕರೆ ಮಾಡಿರುವುದನ್ನು ಖಚಿತಪಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next