ಚನ್ನಪಟ್ಟಣ: ತಾಲೂಕಿನ ಬೈರನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಆರ್.ದೇವರಾಜು ಹಾಗೂ ಉಪಾಧ್ಯಕ್ಷರಾಗಿ ದೇವರಾಜಮ್ಮ ಬಸವರಾಜು ಅವರು ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೇವರಾಜು ಹಾಗೂ ದೇವರಾಜಮ್ಮ ಹೊರತಾಗಿ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ, ಈ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸಿ.ಎ.ಸುಧಾಕರ್ ಘೋಷಣೆ ಮಾಡಿದರು. ಸಂಘದ ಸಿಇಒ ಬಿ.ಜಿ.ಗಿರೀಶ್ ಗೌಡ, ಹಾಲು ಪರೀಕ್ಷಕ ಬಿ.ವಿ.ಲೋಕೇಶ್, ಸಹಾಯಕ ಬಿ. ಆರ್.ರಾಮಚಂದ್ರ ಚುನಾವಣೆಗೆ ನೆರವಾದರು. ಸಂಘದ ನಿರ್ದೇಶಕ ಗ್ರಾಪಂ ಮಾಜಿ ಸದಸ್ಯ ಬಿ.ಸಿ.ಗಂಗಾಧರ್, ಮಾಜಿ ಅಧ್ಯಕ್ಷ ಬಿ.ವಿ.ಶಂಕರೇಗೌಡ, ಬಿ.ಆರ್.ಗಿರೀಶ್ ಗೌಡ, ಬಿ.ಎಂ.ಬಸವರಾಜು, ಗಿರಿಗೌಡ, ಬಿ.ಎಚ್ .ನಾಗೇಶ್, ಪದ್ಮಾ, ಅನಿತಾ, ಬಿ.ಸಿ.ಪುರುಷೋತ್ತಮ ಹಾಗೂ ರಾಮಸಂಜೀವಯ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಒಮ್ಮತದ ಆಯ್ಕೆಗೆ ಸಮ್ಮತಿ ಸೂಚಿಸಿದರು.
ಜೆಡಿಎಸ್‌ಗೆ ಅಧಿಕಾರ: ಸಂಘದ ಆಡಳಿತ ಮಂಡಳಿಯ ಹದಿಮೂರು ಸ್ಥಾನಗಳ ಪೈಕಿ ಪರಿಶಿಷ್ಟ ಪಂಗಡ ಸ್ಥಾನ ಖಾಲಿ ಇದ್ದು, ಕಳೆದ ಜೂ.14ರಂದು ಸಂಘದ 12 ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 10 ನಿರ್ದೇಶಕರು, ಕಾಂಗ್ರೆಸ್ ಬೆಂಬಲಿತ ಒಬ್ಬ ನಿರ್ದೇಶಕ ಹಾಗೂ ಬಿಜೆಪಿ ಬೆಂಬಲಿತ ಒಬ್ಬ ನಿರ್ದೇಶಕ ಆಯ್ಕೆಯಾಗಿದ್ದರು. ಈ ನಿಟ್ಟಿನಲ್ಲಿ 10 ನಿರ್ದೇಶಕರ ಬಲ ಹೊಂದಿರುವ ಜೆಡಿಎಸ್ ಇಲ್ಲಿ ಅಧಿಕಾರ ಹಿಡಿದಿದೆ.
ಸಂಘದ ನೂತನ ಅಧ್ಯಕ್ಷ ಬಿ.ಆರ್.ದೇವರಾಜು ಮಾತನಾಡಿ, ಕಳೆದ 15 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತನಾಗಿ, ಮುಖಂಡನಾಗಿ ಸೇವೆ ಸಲ್ಲಿಸಿದ್ದು, ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಮುಂದಿನ ದಿನಗಳಲ್ಲಿ ಮಾಡಲು ಮುಂದಾಗಿರುವ ಅಭಿವೃದ್ಧಿ ಕೆಲಸಗಳೇ ನಮ್ಮ ಗೆಲುವಿಗೆ ಶಕ್ತಿಯಾಯಿತು ಎಂದರು.
ಡೇರಿ ಸರ್ವತೋಮುಖ ಬೆಳೆವಣಿಗೆಗೆ ಶ್ರಮಿಸುವೆ: ಪಕ್ಷಾತೀತವಾಗಿ ಎಲ್ಲ ನಿರ್ದೇಶಕರು ಹಾಗೂ ಸಂಘದ ಸರ್ವ ಸದಸ್ಯರ ಸಹಕಾರ ಹಾಗೂ ಗ್ರಾಮದ ಹಿರಿಯ ಮುಖಂಡರ ಬೆಂಬಲದೊಂದಿಗೆ ಬೈರನಾಯಕನಹಳ್ಳಿ ಡೇರಿಯ ಸರ್ವತೋಮುಖ ಬೆಳೆವಣಿಗೆಗೆ ಶ್ರಮವಹಿಸುವುದಾಗಿ ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಬಿ.ಸಿ.ಗಂಗಾಧರ್, ಗ್ರಾಮದ ಮುಖಂಡ ಡೇರಿ ನಿವೇಶನ ದಾನಿ, ನಿವೃತ್ತ ಅಧಿಕಾರಿ ರಾಮಚಂದ್ರಯ್ಯ, ತಮ್ಮಯ್ಯಣ್ಣ, ಶಿವಲಿಂಗಯ್ಯ, ಮರಿಯಣ್ಣ(ಗಿರಿಗೌಡ), ಶರತ್, ರಾಜು, ರಾಮಕೃಷ್ಣ, ಬಿ.ಜಿ.ಬಸವರಾಜು, ಬಿ.ಎಚ್ .ನಾಗೇಶ್, ಮುದ್ದಯ್ಯ, ಚಿಕ್ಕಮುಪ್ಪಯ್ಯ, ದಿನೇಶ್, ಕಾರ್ತಿಕ್, ಬಿ.ಸಿ.ರಾಜು ಹಾಗೂ ಮತ್ತಿತರರು ಇದ್ದರು.