ಪಡೀಲ್: ಅನೇಕ ವರ್ಷಗಳ ಹಿಂದೆ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿಗಳಿಗೆ ನೀರುಣಿಸುತ್ತಿದ್ದ ಪಡೀಲ್ ಬಳಿಯ ಬೈರಾಡಿ ಕೆರೆ ಅಭಿವೃದ್ಧಿ ಕಾಮ ಗಾರಿಗೆ ಮತ್ತಷ್ಟು ವೇಗ ಸಿಗಬೇಕಿದೆ.
ಸುಮಾರು 2.5 ಎಕರೆ ವಿಸ್ತೀರ್ಣದ ಬೈರಾಡಿ ಕೆರೆಯ ಅಭಿವೃದ್ಧಿಯನ್ನು ಮುಡಾ ವಹಿಸಿಕೊಂಡಿದ್ದು, ಮೊದಲನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿದೆ. ಇದೀಗ ಎರಡನೇ ಹಂತದಲ್ಲಿ ನಡೆಯುವ ಕಾಮಗಾರಿಗಳಿಗೆ ಮತ್ತಷ್ಟು ಅನುದಾನ ಅಗತ್ಯವಿದ್ದು, ಅದನ್ನು ಹೊಂದಿಸುವ ಕೆಲಸ ನಡೆಯುತ್ತಿದೆ.
ಬೈರಾಡಿ ಕೆರೆಯನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸುಮಾರು 1.3 ಎಕರೆ ಪ್ರದೇಶ ನೀರಿನ ಜಾಗ ಇದೆ. ಇದೀಗ ರೂಪಿಸಿದ ನೂತನ ಯೋಜನೆಯ ಪ್ರಕಾರ ಉದ್ಯಾನವನ, ಇಂಟರ್‌ಲಾಕ್ ಅಳವಡಿಕೆ, ವಾಕಿಂಗ್ ಟ್ರಾÂಕ್, ಮಕ್ಕಳ ಅಟದ ಪ್ರದೇಶ, ಕೆರೆಯ ಹೂಳು ತೆಗೆಯುವುದು ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಕೆರೆಯ ನೀರನ್ನು ಆವಿ ಮಾಡಿ, ಹೂಳೆತ್ತುವ ಕಾಮಗಾರಿ ಎರಡು ಬಾರಿ ನಡೆದಿದೆ. ಆದರೂ ಸದ್ಯ ಕೆರೆ ತುಂಬಾ ನೀರು ಇದ್ದು, ಹೂಳಿನಿಂದ ತುಂಬಿಕೊಂಡಿದೆ.
ಕೆರೆಯಯ ಸುತ್ತ ಆವರಣ ಗೋಡೆ ನಿರ್ಮಿಸಿ ಕಬ್ಬಿಣದ ಗ್ರಿಲ್ಸ್ ಅಳವಡಿಸಲಾಗಿದೆ. ಕೆರೆಯ ಮೆಟ್ಟಿಲುಗಳನ್ನು ಸರಿಪಡಿಸಲಾಗಿದ್ದು, ನೀರಿಗೆ ಇಳಿಯಲು ಸಹಕಾರಿಯಾಗುವಂತೆ ಹೆಚ್ಚುವರಿಯಾಗಿ ಕಡಿಮೆ ಎತ್ತರದ ಮ್ಟೆಟಿಲು ನಿರ್ಮಾಣ ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕೆರೆ ಪ್ರವೇಶಕ್ಕೆ ಸ್ವಾಗತ ಕಮಾನು ನಿರ್ಮಾಣ ಮಾಡಲಾಗಿದೆ. ಕೆರೆ ಪ್ರವೇಶಕ್ಕೆ ರಸ್ತೆಯನ್ನೂ ನಿರ್ಮಾಣವಾಗಿದೆ.
ಆಟದ ಪ್ರದೇಶ ಕೆಲಸ ಬಾಕಿ
ಕೆರೆಯ ಒಂದು ಬದಿಯಲ್ಲಿ ಜಾಗ ಇದ್ದು, ಅಲ್ಲಿ ಮಕ್ಕಳಿಗೆ ಆಟದ ಪ್ರದೇಶ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಕೆಲವು ಕಾಮಗಾರಿಗಳು ಸದ್ಯ ಬಾಕಿ ಇದೆ. ಈ ಎಲ್ಲಾ ಕಾಮಗರಿಗಳನ್ನು ತ್ವತರಿ ಗೊಳಿಸಿ ಎರಡು ತಿಂಗಳೊಳಗೆ ಉದ್ಘಾಟನೆ ಗೊಳಿಸಲು ಮುಡಾ ನಿರ್ಧರಿಸಿದೆ.
ಕಾಮಗಾರಿಗೆ ವೇಗ
ಬೈರಾಡಿ ಕೆರೆಯನ್ನು ಮುಡಾದಿಂದ ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡುವ ಉದ್ದೇಶವಿದೆ. ಕೆರೆಯ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತ್ವರಿತವಾಗಿ ಬಾಕಿ ಉಳಿದಿರುವ ಕಾಮಗಾರಿ ನಡೆಸಿ ಸದ್ಯದಲ್ಲೇ ಉದ್ಘಾಟಿಸಲಾಗುವುದು.
-ರವಿಶಂಕರ ಮಿಜಾರು, ಮುಡಾ ಅಧ್ಯಕ್ಷ