Advertisement

Baindur: ಅಭಿವೃದಿ ಕಾಣದ ಅಳ್ವೆಗದ್ದೆ ಬಂದರು

04:49 PM Aug 30, 2024 | Team Udayavani |

ಬೈಂದೂರು: ಬೈಂದೂರು ತಾಲೂಕಿನ ಐತಿಹಾಸಿಕ ಹಿನ್ನೆಲೆ ಇರುವ ಮತ್ತು ಸರ್ವಋತು ಬಂದರಿಗೆ ಅವಕಾಶವಿರುವ ಶಿರೂರು ಗ್ರಾಮದ ಅಳ್ವೆಗದ್ದೆ ಬಂದರು ಸಮರ್ಪಕ ಅಭಿವೃದ್ಧಿ ಕಾಣದೆ ಮೀನುಗಾರರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಸಮೀಪದ ಕಳುಹಿತ್ಲು ಭಾಗದ ಮೀನುಗಾರರು ಈ ಬಂದರನ್ನೇ ಅವಲಂಬಿಸಿದ್ದು, ಅಭಿವೃದ್ಧಿ ನಿರೀಕ್ಷೆಯಲ್ಲಿದ್ದಾರೆ.

Advertisement

ಇಲ್ಲಿನ ಸಮಸ್ಯೆಗಳೇನು?
ಕಳೆದ ಮಳೆಗಾಲ ಮತ್ತು ಇತ್ತೀಚೆಗೆ ಉಂಟಾದ ಕಡಲ ಅಬ್ಬರದಿಂದಾಗಿ ಅಳ್ವೆಗದ್ದೆಯಲ್ಲಿ ದೋಣಿ ನಿಲ್ಲಿಸುವ ಜಾಗದ ಮೇಲ್ಭಾಗ ಕೊಚ್ಚಿ ಹೋಗಿದೆ. ಕಳುಹಿತ್ಲು ಭಾಗದಲ್ಲಿ ಅನೇಕ ವರ್ಷ ಹಿಂದೆ ನಿರ್ಮಿಸಿದ ತಡೆಗೋಡೆ ನೆಲಮಟ್ಟದಲ್ಲಿರುವು ದರಿಂದ ನೀರು ಒಳಗೆ ನುಗ್ಗುತ್ತಿದೆ. ಮೀನುಗಾರಿಕೆಯನ್ನೇ ಕಳೆದ ಬಾರಿ 60ಕ್ಕೂ ಮಿಕ್ಕಿ ಬೋಟ್‌ಗಳು ಕೊಚ್ಚಿ ಹೋಗಿದ್ದವು. ನೂರಾರು ಪಾತಿದೋಣಿಗಳು ತೇಲಿ ಹೋಗಿದ್ದವು. ಬಲೆ, ಎಂಜಿನ್‌ಗಳು ಸಮುದ್ರ ಪಾಲಾಗಿದ್ದವು.

ಬೋಟ್‌ ನಿಲುಗಡೆಯ ಜಾಗ ಶಿಥಿಲಗೊಂಡಿದ್ದಲ್ಲದೆ, ಬೀದಿ ದೀಪ ಸಮಸ್ಯೆಯೂ ಇದೆ. ಜಟ್ಟಿ ನಿರ್ಮಾಣ, ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ಯೋಜನೆಗಳು ಅನುಷ್ಠಾನವಾಗಬೇಕು ಎನ್ನುವುದು ಮೀನುಗಾರರ ಆಗ್ರಹ.

ಇಲ್ಲಿ 5ಕ್ಕೂ ಹೆಚ್ಚು ಬೋಟ್‌ ನಿರ್ಮಾಣ ಕೇಂದ್ರಗಳಿವೆ. ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಈ ಭಾಗದಲ್ಲಿ ಸೀ ವಾಕ್‌ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಅನುಕೂಲ ಎಂದು ಉದಯವಾಣಿ ಈ ಹಿಂದೆಯೇ ವರದಿ ಪ್ರಕಟಿಸಿತ್ತು.

ಮೀನುಗಾರರಿಗೆ ಅಪಾರ ನಷ್ಟ
10 ವರ್ಷ ಹಿಂದೆ ಬ್ರೇಕ್‌ ವಾಟರ್‌ ನಿರ್ಮಾಣಕ್ಕೆ ಸುಮಾರು 9 ಕೋಟಿ ರೂಪಾಯಿ ಬಿಟ್ಟು ಬೇರೆ ಅನುದಾನ ಬಂದಿಲ್ಲ. ಔಟ್‌ ಡೋರ್‌ ಬಂದರು, ಬ್ರೇಕ್‌ವಾಟರ್‌ ವಿಸ್ತರಣೆ, ಪಾತಿ ದೋಣಿಗಳ ನಿಲುಗಡೆ ಕೇಂದ್ರ ನಿರ್ಮಾಣ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಅತಿವೃಷ್ಟಿಗೆ ಬಂದರು ಮತ್ತು ಮೀನುಗಾರಿಕಾ ವಲಯ ಅಪಾರ ನಷ್ಟ ಅನುಭವಿಸಿತ್ತು. ಬೋಟ್‌ ಕಳೆದುಕೊಂಡ ಮೀನುಗಾರರಿಗೆ ತಾತ್ಕಾಲಿಕ ಪರಿಹಾರ 6 ಸಾವಿರ ರೂಪಾಯಿ ಕೂಡ ಸರಿಯಾಗಿ ಸಿಕ್ಕಿಲ್ಲ. ಸೀಮೆಎಣ್ಣೆ ಪೂರೈಕೆಯೂ ಸಮರ್ಪಕವಾಗಿಲ್ಲ.
– ನಾಗೇಶ ಮೊಗೇರ ಅಳ್ವೆಗದ್ದೆ, ಸ್ಥಳೀಯ ಗ್ರಾ.ಪಂ. ಸದಸ್ಯ

Advertisement

ಸುರಕಿತ ಬಂದರು ಅಪಾಯದಲ್ಲಿ ಅಳ್ವೆಗದ್ದೆ ಮೂರು ದಶಕದ ಹಿಂದೆ ಸುರಕ್ಷಿತ ಬಂದರು ಎಂದು ಗುರುತಿಸಿಕೊಂಡಿತ್ತು. ಪರ್ಸಿನ್‌, ಟ್ರಾಲ್‌ ಸೇರಿದಂತೆ ದೊಡ್ಡ ಬೋಟ್‌ಗಳು ಬಂದರು ಪ್ರವೇಶಿಸುತ್ತಿದ್ದವು. ಅಳಿವೆಯಲ್ಲಿ ತುಂಬಿರುವ ಹೂಳಿನಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೋಟ್‌ಗಳು ಒಳ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಭಟ್ಕಳ ಹಾಗೂ ಗಂಗೊಳ್ಳಿ ನಡುವಿನ ಮೀನುಗಾರರ ನೆಲೆಯಾಗಿರುವ ಅಳ್ವೆಗದ್ದೆ ಬಂದರು ಪ್ರದೇಶವನ್ನು ನಿರ್ಲಕ್ಷಿಸಲಾಗುತ್ತಿದೆ. ಕಳುಹಿತ್ಲು ಭಾಗದಲ್ಲೂ ಉತ್ತಮ ಅವಕಾಶವಿದ್ದು ಜಂಟಿ ಅಭಿವೃದ್ದಿಯಾಗಬೇಕಿದೆ.
-ತಾರಿಸುಲ್ಲಾ ಮಹ್ಮದ್‌ ಗೌಸ್‌ ಕಳುಹಿತ್ಲು , ಸ್ಥಳೀಯ ಗ್ರಾ.ಪಂ ಸದಸ್ಯ

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next