ಕಾರ್ಕಳ: ತುಳುನಾಡ ಸೃಷ್ಟಿಕರ್ತ ಪರಶುರಾಮನ ಪ್ರತಿಮೆಯ ಥೀಂ ಪಾರ್ಕ್ ಲೋಕಾರ್ಪಣೆ ಪ್ರಯುಕ್ತ ದೇಶದ ಕರಕೌಶಲ, ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯಗಳನ್ನು ಪ್ರದರ್ಶಿಸುವ ರಾಷ್ಟ್ರ ಮಟ್ಟದ ಕರಕುಶಲ ವಸ್ತುಗಳ ಮತ್ತು ಸಂಜೀವಿನಿ ಸಂಘದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜ. 25ರಿಂದ ಫೆ. 3ರ ತನಕ ಬೆಳಗ್ಗೆ 10ರಿಂದ 8.30 ವರೆಗೆ ಬೈಲೂರು ಪ್ರೌಢ ಶಾಲೆ ಮೈದಾನದಲ್ಲಿ ನಡೆಯಲಿದೆ.
ಗ್ರಾಮೀಣ ಭಾಗದಲ್ಲಿ ನಡೆಯುವ ಮೊದಲ ರಾಷ್ಟ್ರ ಮಟ್ಟದ ಕರಕುಶಲ ಮೇಳ ಎನ್ನುವ ಹೆಗ್ಗಳಿಕೆ ಇದರದ್ದು. ಕೇಂದ್ರ ಸರಕಾರದ ಗಾಂಧಿ ಶಿಲ್ಪ ಬಜಾರ್, ರಾಜ್ಯ ಸರಕಾರದ ಕರಕುಶಲ ಅಭಿವೃದ್ಧಿ ನಿಗಮ, ದ.ಕ./ಉಡುಪಿ ಜಿ.ಪಂ., ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿಯ ಸಹಯೋಗದಲ್ಲಿ ಕರಕುಲಶಲ, ಸಂಜೀವಿನಿ ಸಂಘದ ಉತ್ಪನ್ನಗಳ ಪ್ರದರ್ಶನ, ಮಾರಾಟ ನಡೆಯಲಿದೆ.
ಆಂಧ್ರಪ್ರದೇಶದ ಟೆರಕೋಟ ವರ್ಕ್, ಗುಜರಾತ್‌ನ ಆರ್ಟ್ ಮೆಟಲ್ ವೇರ್, ಜಮ್ಮು ಕಾಶ್ಮೀರದ ಎಂಬ್ರಾಯಿಡರಿ ವರ್ಕ್ಸ್, ಕೇರಳದ ಟೆಕ್ಸ್‌ಟೈಲ್ಸ್, ಹ್ಯಾಂಡ್ ಎಂಬ್ರಾಯಿಡರಿ, ತೆಂಗಿನ ಚಿಪ್ಪಿನ ಉತ್ಪನ್ನಗಳು, ಮಧ್ಯಪ್ರದೇಶದ ಸೆಣಬಿನ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ಮಹಾರಾಷ್ಟ್ರದ ಫ್ಯಾನ್ಸಿ ಉತ್ಪನ್ನಗಳು, ರಾಜಸ್ಥಾನದ ಎಂಬ್ರಾಯಿಡರಿ ವರ್ಕ್ಸ್, ಪೈಂಟಿಂಗ್, ಬಳೆಗಳು, ಕನ್ಯಾಕುಮಾರಿಯ ನ್ಯಾಚುರಲ್ ಫೈಬರ್, ಕರ್ನಾಟಕದ ಚೆನ್ನಪಟ್ಟಣ ಗೊಂಬೆಗಳು ಹೀಗೆ ಭಾರತದ ವಿವಿಧ ರಾಜ್ಯಗಳ ಪ್ರಸಿದ್ಧ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಇಲ್ಲಿನ ವೈಶಿಷ್ಟ್ಯ.
ಮಹಿಳಾ ಉದ್ಯಮಿಗಳ ಮಳಿಗೆ
100 ಕುಶಲಕರ್ಮಿಗಳ ಮಾರಾಟ ಮಳಿಗೆ ಹಾಗೂ ಕರ್ನಾಟಕದ ವಿವಿಧ ಜಿÇÉೆಗಳ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ 130 ಮಾರಾಟ ಮಳಿಗೆಗಳು ಪಾಲ್ಗೊಳ್ಳಲಿವೆ. ಮಹಿಳಾ ಸಶಕ್ತೀಕರಣ ಇದರ ಉದ್ದೇಶ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ತಿಳಿಸಿದ್ದಾರೆ.
ಸಾಂಪ್ರದಾಯಿಕ ತಿನಿಸುಗಳು ಜತೆಗೆ ಸಾವಯವ ಖಾದ್ಯ, ಪ್ರಸಿದ್ಧ ತಿನಿಸುಗಳ (ಸಸ್ಯಾಹಾರ, ಮಾಂಸಾಹಾರ ಸಹಿತ) 55 ಮಳಿಗೆಗಳು ಇಲ್ಲಿರಲಿವೆ.