Advertisement

ಬೈಗುಳ ಹಬ್ಬದಲ್ಲಿ ಯುವಕರ ದಂಡು; ನಕ್ಕ ಮಾನಿನಿಯರು

02:54 PM Apr 11, 2022 | Team Udayavani |

ಕಿಕ್ಕೇರಿ: ಮಡಿಕೇರಿಯ ಬುಂಡೆ ಹಬ್ಬದ ತದ್ರೂಪದಂತೆ ಬೈದಾಡುವ ಬೈಗುಳ ಹಬ್ಬವಾದ ಕಿಕ್ಕೇರಮ್ಮನ ವಸಂತನ ಹಬ್ಬಕ್ಕೆ ಎತ್ತ ನೋಡಿದರೂ ಜನವೋ ಜನ.

Advertisement

ಸತತವಾಗಿ 2ವರ್ಷದಿಂದ ಕೊರೊನಾ ಭರಾ ಟೆಯಿಂದ ನಡೆಯದ ವಸಂತನ ಹಬ್ಬ ಕಣ್ತುಂಬಿ ಕೊಳ್ಳಲು ಈ ಬಾರಿ ದಾರಿಯುದ್ಧಕ್ಕೂ ಜನವೋ ಜನ. ಯುವ ಜೋಡಿಗಳು ಹಬ್ಬದ ವಿಶೇಷತೆ ತಿಳಿದುಕೊಳ್ಳಲು ಕುತೂಹಲದಿಂದ ಕಾದಿದ್ದರು.

ಕಿಕ್ಕೇರಮ್ಮ ಗುಡಿಯಿಂದ ಆರಂಭವಾದ ವಸಂತನ ಹಬ್ಬಕ್ಕೆ ರಂಗೇನಹಳ್ಳಿಯ ಕೊಂತಪ್ಪ ಗುಡ್ಡಧಾರಿ ಹಾಗೂ ಪರಿವಾರದವರೇ ಪ್ರಮುಖ ಪಾತ್ರ ವಹಿಸಿದ್ದರು. ಕೊಂತದಾರಿ ಗುಡ್ಡಪ್ಪ ತಲೆಗೆ ರಂಗಿನ ಪೇಟ, ಹೊದೆಯಲು ಸುಂದರ ಶಾಲು, ಕಾಲಿಗೆ ಗೆಜ್ಜೆ ಕಟ್ಟಿ ಮರದಲ್ಲಿ ಮಾಡಿದ ಪುರುಷ ಗುಪ್ತಾಂಗವನ್ನು ದೇವಿ ಮುಂದೆ ಪೂಜೆ ಮಾಡಿ ಸೊಂಟಕ್ಕೆ ಕಟ್ಟಿಕೊಂಡರು. ಸಹ ಗುಡ್ಡಪ್ಪರು ಗುಡ್ಡಪ್ಪನ ಕುಣಿತಕ್ಕೆ ಚಕ್ರವಾದ್ಯ ಮೇಳವಾದರು. ಆರಂಭದಲ್ಲಿ ದೇವಿ ಗುಡಿ ಮುಂದೆ ಕೊಂತಪ್ಪ ಗುಡ್ಡಪ್ಪ ಕುಣಿಯುತ್ತ “ಡುಮ್ಮಿ ಸಾಲಿರೆನ್ನಿರೇ’ ಎಂದು ಕೊಂತಪ್ಪನನ್ನು ತೋರಿಸಿ ಎಗರಿ ಕುಣಿದರು.

ಇದೇ ರೀತಿ ದೇವಿ ಮೆರವಣಿಗೆ ಮುಂದೆ ಸಾಗುತ್ತ ಹೊಸಬೀದಿ, ಅಂಗಡಿಬೀದಿ, ಕೋಟೆ ಆಂಜನೇಯ ಬೀದಿಗಳಲ್ಲಿ ನರ್ತಿಸಿದರು. ಅಂತಿಮವಾಗಿ ಮೆರವಣಿಗೆ ಪಟ್ಟಣದ ದೊಡ್ಡ ನರಸಿಂಹಸ್ವಾಮಿ ಗುಡಿ ಬಳಿ ಸಾಗಿತು. ಈ ಬೈಗುಳ ಹಬ್ಬದ ಕೊಂತಪ್ಪಧಾರಿಯನ್ನು ನೋಡಲು ಯುವಕರು ಗುಂಪು, ಮಹಿಳೆಯರ ಗುಂಪು ಗುಡಿ ಅಕ್ಕಪಕ್ಕದ ಮಹಡಿ ಮೇಲೆ ಜಮಾಯಿಸಿದ್ದರು.

ಕೊಂತಪ್ಪಧಾರಿಯನ್ನು ನೋಡಲು ಯುವಕರು ತಳ್ಳಾಟ ನಡೆಸಿದರೆ, ಮಹಿಳೆಯರು ವೀಕ್ಷಣೆ ಮಾಡಲು ಕದ್ದು ಮುಚ್ಚಿ ಇಣುಕು ನೋಟದ ಪ್ರಸಂಗ ನಡೆಯಿತು.

Advertisement

ಹಳೆಯ ಸಾಂಪ್ರದಾಯಿಕ ಪೂಜೆಯಂತೆ ದೇವರು, ಕಿಕ್ಕೇರಮ್ಮ(ಮಹಾಲಕ್ಷ್ಮೀ) ದೇವಿಯನ್ನು ನರಸಿಂಹ ಸ್ವಾಮಿಯೊಂದಿಗೆ ಸಮಾಗಮ ಮಾಡಿಸುವಂತೆ ವಿವಿಧ ಜನಾಂಗದವರ ಗುಪ್ತಾಂಗ ಹೋಲಿಕೆ ಮಾಡುತ್ತ ಬೈದಾಡಿದರು. ನೆರದಿದ್ದ ಸಮೂಹ ನಕ್ಕು ನಕ್ಕು ಹುಣ್ಣಾದರು. ಅಂತಿಮವಾಗಿ ಆರತಿ ಎತ್ತಿ ಗುಡಿ ಬಾಗಿಲು ತೆಗೆದು ಆರತಿ ಎತ್ತಿ ಬೈಗುಳಕ್ಕೆ ಇತಿಶ್ರೀ ಹಾಡಲಾಯಿತು. ನಂತರ ದೇವಿ ಉತ್ಸವ ಹರಕೆ ಹೊತ್ತು ರಸ್ತೆಯಲ್ಲಿ ಅಡ್ಡಲಾಗಿ ಮಲಗಿದ್ದ ಭಕ್ತರ ಮೇಲೆ ಸಾಗಿತು. ಮುಂದುವರೆದು ಜನಾರ್ಧನ ಬೀದಿಯ ಲಕ್ಷ್ಮೀದೇವಿ ಗುಡಿ, ಅಮಾನಿಕೆರೆಯ ಗಂಗೆ ಕಡೆಗೆ ಸಾಗಿತು. ಸೊಳ್ಳೇಪುರ ಗ್ರಾಮಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಲಕ್ಷ್ಮೀಪುರ ಗ್ರಾಮಕ್ಕೆ ದೇವಿ ಮೆರವಣಿಗೆ ಸಾಗಿತು.  ಉಪವಾಸ ವ್ರತಾಚರಣೆಯಲ್ಲಿದ್ದ ಗ್ರಾಮದ ಪ್ರತಿ ಮನೆಯವರು ದೇವಿಗೆ ಆರತಿ ಎತ್ತಿ ಕೃತಾರ್ಥರಾದರು.

ಜನ ಕಾತರದಿಂದ ಕಾದಿದ್ದರು… : ರಂಗೇನಹಳ್ಳಿಯ ಗುಡ್ಡಪ್ಪ ಕಿಕ್ಕೇರಿಗೌಡ, ಚಿಕ್ಕೇಗೌಡ, ಅಪ್ಪಾಜಿಗೌಡ, ರಾಮೇಗೌಡ ಬೈಗುಳ ಹಬ್ಬದ ಪ್ರಮುಖಧಾರಿಗಳಾಗಿದ್ದರು. ದೇವಿಯ ಒಕ್ಕಲಿನ ಬೂನಾಸಿ, ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ವಠಾರದ ಮುಖಂಡರು ಇದ್ದರು. ಬುಂಡೆ ಹಬ್ಬವನ್ನು ನಾಚಿಸುವ ಈ ಬೈಗುಳ ಹಬ್ಬ ಸತತ ಕೊರೊನಾದಿಂದ 2ವರ್ಷ ವೀಕ್ಷಿಸಲು ಸಾಧ್ಯವಾಗದೆ ಜನತೆ ಬಲು ಕಾತುರದಿಂದ ಇದ್ದರು. ಹಬ್ಬ ವೀಕ್ಷಿಸಲು ಹೆಣ್ಣು ಮಕ್ಕಳು, ನವಜೋಡಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next