Advertisement

ಬಹುರೂಪಿಯಲ್ಲಿ “ರಂಗ ರಸ’ಸವಿದ ರಂಗಾಸಕ್ತರು

09:55 PM Feb 14, 2020 | Lakshmi GovindaRaj |

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020ಕ್ಕೆ ಶುಕ್ರವಾರ ಸಂಜೆ ಸಂಭ್ರಮದ ಚಾಲನೆ ದೊರೆಯಿತು. ರಂಗಾಯಣದ ವನರಂಗದಲ್ಲಿ ಶುಕ್ರವಾರ ಸಂಜೆ ಕಿಕ್ಕಿರಿದು ತುಂಬಿದ್ದ ರಂಗಾಸಕ್ತರ ಸಮ್ಮುಖದಲ್ಲಿ ಹಿರಿಯ ನಟ ಅನಂತ್‌ನಾಗ್‌ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಿದರು. ಇದರ ಜೊತೆ-ಜೊತೆಗೆ ನಾಟಕ, ಸಿನಿಮಾ, ವಿಚಾರ-ಮಂಥನ, ಕಲೆ, ಜಾನಪದ ಸಹಿತ ವಿವಿಧ ಚಟುವಟಿಕೆಗಳೂ ಪ್ರಾರಂಭವಾದವು.

Advertisement

ನಾಟಕೋತ್ಸವದ ಮೊದಲ ದಿನ ರಂಗಾಯಣ ಅಂಗಳ ರಂಗಾಸಕ್ತರಿಂದ ತುಂಬಿ ತುಳುಕಿತು. ಕಲಾರಸಿಕರು ನಾಟಕೋತ್ಸವದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಿ ಪುಳಕಿತರಾದರು. ಮಧ್ಯಾಹ್ನದವರೆಗೂ ಖಾಲಿ ಇದ್ದ ರಂಗಾಯಣ ಆವರಣ ಸಂಜೆಯಾಗುತ್ತಿದ್ದಂತೆ ನಿಧಾನವಾಗಿ ತುಂಬಿತು.

ರಂಗಾಸಕ್ತರು, ಹಿರಿಯರು, ಯುವ ಮನಸುಗಳು ಸ್ನೇಹಿತರು ಮತ್ತು ತಮ್ಮ ಹಿತೈಷಿಗಳ ಜತೆಗೂಡಿ ರಂಗಾಯಣದ ಅಂಗಳಕ್ಕೆ ಜಮಾಯಿಸಿ “ರಂಗ ರಸ’ ಸವಿದರು. ಸಂಜೆ ನಡೆದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀರಂಗ ವೇದಿಕೆಯಲ್ಲಿ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ “ಗಾಂಧಿಪಥ’ ವಿಷಯಕ್ಕೆ ಸಂಬಂಧಿಸಿದ ಚಲನಚಿತ್ರೋತ್ಸವಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಗಿರೀಶ್‌ ಕಾಸರವಳ್ಳಿ ಚಾಲನೆ ನೀಡಿದರು.

ಬಳಿಕ ಪ್ರದರ್ಶನಗೊಂಡ ಕನ್ನಡ ಭಾಷೆಯ ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ಕೂರ್ಮಾವತಾರ’ ಹಾಗೂ ಇಂಗ್ಲಿಷ್‌ ಭಾಷೆಯ ಶ್ಯಾಮ ಬೆನಗಲ್‌ ನಿರ್ದೇಶನದ “ದಿ ಮೇಕಿಂಗ್‌ ಆಫ್ ಮಹಾತ್ಮ’ ಚಿತ್ರಗಳು ಪ್ರೇಕ್ಷಕರ ಮನಗೆದ್ದವು. ಇದಕ್ಕೂ ಮುನ್ನ ಅಗ್ರಹಾರ ವೃತ್ತ ಮತ್ತು ರೈಲ್ವೆ ನಿಲ್ದಾಣದ ಬಳಿ ಪ್ರದರ್ಶನಗೊಂಡ ಬೀದಿ ನಾಟಕ ಗಮನ ಸೆಳೆಯಿತು.

Advertisement

ಮನೆ ಮಾಡಿದ ಸಂಭ್ರಮ: ಬಹೂರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ರಂಗಾಯಣದ ಅಂಗಳದಲ್ಲಿ ಸಂಭ್ರಮ ಮನೆ ಮಾಡಿತ್ತು. ಗಾಂಧಿ ಪಥ ಆಶಯ ಇಟ್ಟುಕೊಂಡು ಆರಂಭವಾದ ಬಹುರೂಪಿಯಲ್ಲಿ ನಗರ ಸೇರಿದಂತೆ ಹೊರ ಭಾಗದ ರಂಗಾಸಕ್ತರು ಮತ್ತು ಕಲಾವಿದರು ಆಗಮಿಸಿ ನಾಟಕ, ಜಾನಪದ ಕಲೆಗಳನ್ನು ವೀಕ್ಷಿಸಿದರು.

ಗಮನ ಸೆಳೆದ ಕೊಡಗು ಸಂಸ್ಕೃತಿ: ಸಂಜೆಯಾಗುತ್ತಿದ್ದಂತೆ ಕೊಡುಗು ಸಂಪ್ರದಾಯಿಕ ವಿಶಿಷ್ಟ ಉಡುಗೆಯುನುಟ್ಟು ಆಗಮಿಸಿದ ನೂರಾರು ಮಂದಿ, ವಾಲಗತಟ್‌ ನೃತ್ಯ ಪ್ರದರ್ಶಿಸಿ ನೆರೆದವರನ್ನು ಮೂಕವಿಸ್ಮಿತರನ್ನಾಗಿಸಿದರು. ಇದೇ ಮೊದಲ ಬಾರಿಗೆ ನೂರಾರು ಮಂದಿ ಕೊಡವ ಗೌಡ ಹಾಗೂ ಕೊಡಗು ಗೌಡ ಸಮಾಜದವರು ರಂಗಾಯಣದ ಬಹುರೂಪಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಕರಕುಶಲ ವಸ್ತುಗಳು-ಪುಸ್ತಕಗಳು: ಬಹುರೂಪಿ ನಾಟಕೋತ್ಸವ ಅಂಗವಾಗಿ ರಂಗಾಯಣದ ಆವರಣದಲ್ಲಿ ಏರ್ಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಮಾರಟ ವಿಶೇಷವಾಗಿದೆ. 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯಕ್ಕೆ ಸಂಬಂಧಿಸಿದ ಸಾವಿರಾರು ಪುಸ್ತಕಗಳು ಪ್ರದರ್ಶನದಲ್ಲಿವೆ. ಜೊತೆಗೆ ಕರಕುಶಲ ವಸ್ತುಗಳು ಮತ್ತು ಖಾದಿ ಬಟ್ಟೆಗಳು ಪ್ರದರ್ಶನದಲ್ಲಿರುವುದು ಗಮನಾರ್ಹ.

ಚರಕ, ಕೈಮಗ್ಗ ಆಕರ್ಷಣೆ: ಗಾಂಧಿ ಪಥ ಎಂಬ ಥೀಮ್‌ ಇಟ್ಟುಕೊಂಡು ಆರಂಭವಾಗಿರುವ ಬಹುರೂಪಿ ನಾಟಕೋತ್ಸವದಲ್ಲಿ ಚರಕ ಮತ್ತು ಕೈಮಗ್ಗ ಕೇಂದ್ರಬಿಂದುವಾಗಿದೆ. ನೂಲನ್ನು ನೇಯುವ ಚರಕಗಳು ಹಾಗೂ ಬಟ್ಟೆ ಎಣೆಯುವ ಕೈಮಗ್ಗವನ್ನು ಇರಿಸಿದ್ದು, ರಂಗಾಯಣಕ್ಕೆ ಬರುವ ಮಂದಿ ತಮ್ಮ ಮೊಬೈಲ್‌ಗ‌ಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಆಹಾರ ಮಳಿಗೆ ಫ‌ುಲ್‌ ರಶ್‌: ವಿವಿಧ ಜಿಲ್ಲೆಗಳಿಂದ ತೆರೆದಿರುವ ಆಹಾರ ಮಳಿಗೆಗಳು ದೇಶಿ ಆಹಾರ, ಹೋಳಿಗೆ, ಗಿರ್ಮಿಟ್‌ ಸೇರಿದಂತೆ ಅನೇಕ ಖಾದ್ಯಗಳನ್ನು ನಾಟಕೋತ್ಸವಕ್ಕೆ ಬಂವರು ಸವಿದರು.

ತೊಗಲು ಬೆಂಬೆಯಲ್ಲಿ ಮೂಡಿಬಂದ ಗಾಂಧಿ: ರಂಗಾಯಣ ಕಿಂದರಿಜೋಗಿ ಆವರಣದಲ್ಲಿ ಬಳ್ಳಾರಿ ಶ್ರೀ ರಾಮಾಂಜನೇಯ ತೊಗಲು ಬೊಂಬೆ ಮೇಳ-ಟ್ರಸ್ಟ್‌ನಿಂದ ಗಾಂಧೀಜಿ ಜೀವನ ವೃತ್ತಾಂತ ಆಧರಿಸಿದ ಕಥೆಯನ್ನು ತೊಗಲು ಬೊಂಬೆಯ ಮೂಲಕ ಅಮೋಘವಾಗಿ ಪ್ರದರ್ಶಿಸಲಾಯಿತು.

ಈಗಾಗಲೇ ದೇಶ ವಿದೇಶಗಳಲ್ಲಿ ಗಾಂಧಿ ಜೀವನ ವತ್ತಾಂತದ ಬಗ್ಗೆ ಬಳ್ಳಾರಿ ಶ್ರೀ ರಾಮಾಂಜನೇಯ ತೊಗಲು ಬೊಂಬೆ ಮೇಳ-ಟ್ರಸ್ಟ್‌ 11 ಸಾವಿರಕ್ಕೂ ಹೆಚ್ಚು ಪ್ರದರ್ಶನ ನಡೆಸಿಕೊಟ್ಟಿರುದ್ದು, ಬಹುರೂಪಿ ಅಂಗವಾಗಿ ಶುಕ್ರವಾರ ರಂಗಾಯಣದಲ್ಲಿ ತೊಗಲು ಬೊಂಬೆಯಾಟ ಪ್ರದರ್ಶಿಸುವ ಮೂಲಕ ಸಾವಿರಾರು ರಂಗಾಸಕ್ತರನ್ನು ಸೆಳೆಯುವಲ್ಲಿ ಸಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next