Advertisement

ಉಪಯೋಗಕ್ಕೆ ಬಾರದ ಬಹುಗ್ರಾಮದ ಯೋಜನೆ

09:55 AM Jul 15, 2020 | Suhan S |

ಬಾದಾಮಿ: ಸುಕ್ಷೇತ್ರ ಶಿವಯೋಗಮಂದಿರ ಹತ್ತಿರದ ಮಲಪ್ರಭಾ ನದಿ ದಂಡೆಯಲ್ಲಿ ನಿರ್ಮಿಸಿದ ಬಹುಗ್ರಾಮದ ಕುಡಿಯುವ ನೀರಿನ ಯೋಜನೆ ಮತ್ತು ಏತನೀರಾವರಿ ಯೋಜನೆ ಪೂರ್ಣಗೊಂಡು ಹಲವಾರು ವರ್ಷಗಳೇ ಕಳೆದರೂ ಇನ್ನೂ ಕಾರ್ಯಾರಂಭ ಆಗಿಲ್ಲ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಯೋಜನೆಯನ್ನು ವಿಶ್ವ ಬ್ಯಾಂಕ್‌ ನೆರವಿನ ಜಲ ನಿರ್ಮಲ ಯೋಜನೆಯಡಿ 2012-13ರಲ್ಲಿ 1.35 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಾದ ಮಂಗಳೂರ, ಗೋನಾಳ ಮತ್ತು ಶಿರಬಡಗಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗಬೇಕಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿ ಯೋಜನೆಗೆ 3 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಗೆ ನೀರು ತುಂಬಿಸಿ ಕೆರೆಯಿಂದ ಹೊಲಗಳಿಗೆ ನೀರು ಬಿಡುವ ಯೋಜನೆಯೂ 2012-13 ರಲ್ಲಿ ಮುಕ್ತಾಯಗೊಂಡಿದೆ. ಆದರೆ, ರೈತರ ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ರೈತರು ಶೀಘ್ರ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ವರ್ಷ ಬಂದ ನೆರೆಹಾವಳಿಗೆ ಜಾಕ್‌ವೆಲ್‌ ಶಿಥಿಲಗೊಂಡಿವೆ. ಅದರೊಳಗಿನ ಉಪಕರಣ ಕಾರ್ಯ ನಿರ್ವಹಿಸದೇ ಸ್ಥಗಿತವಾಗಿವೆ. ಕುಡಿಯುವ ನೀರಿನ ಯೋಜನೆ ಮತ್ತು ಏತ ನೀರಾವರಿ ಯೋಜನೆಗಳು ಜನರಿಗೆ ಮತ್ತು ರೈತರಿಗೆ ಉಪಯೋಗಕ್ಕೆ ಬಾರದಂತಾಗಿದೆ. ಕಾಮಗಾರಿಗೆ ಜನಪ್ರತಿನಿಧಿ ಗಳು ಬಂದು ಶಂಕು-ಸ್ಥಾಪನೆ ನೆರವೇರಿಸಿದ್ದಾರೆಲ್ಲದೇ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಸರ್ಕಾರದ ಯೋಜನೆಗಳು ಜನರಿಗೆ ತಲುಪದೇ ನದಿ ಪಾಲಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೀರು ಶುದ್ಧೀಕರಣ ಘಟಕದಲ್ಲಿ ನಾಲ್ಕು ಬಾರಿ ವಿದ್ಯುತ್‌ ಮೋಟಾರ್‌ ಸುಟ್ಟಿದೆ. ಹೆಸ್ಕಾಂ ಇಲ್ಲಿಗೆ ನಿರಂತರ ಜ್ಯೋತಿ ಲೈನ್‌ ಕೊಟ್ಟರೆ ಯೋಜನೆ ಆರಂಭವಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ವಿನಾಯಕ ಪತಂಗಿ ಹೇಳಿದರು. ಪ್ರವಾಹದಿಂದ ಜಾಕ್‌ವೆಲ್‌ನ ಉಪಕರಣ ಹಾನಿಗೀಡಾಗಿವೆ. 15 ದಿನಗಳಲ್ಲಿ ಏತ ನೀರಾವರಿ ಯೋಜನೆ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next