Advertisement

ಬಾಹುಬಲಿ ಮಹಾಮಸ್ತಕಾಭಿಷೇಕ: ಶೇ.70ರಷ್ಟು ಸಿದ್ಧತೆ ಪೂರ್ಣ

06:45 AM Dec 28, 2017 | Harsha Rao |

ಬೆಂಗಳೂರು: ವಿಶ್ವವಿಖ್ಯಾತ ಭಗವಾನ್‌ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಈವರೆಗೆ ಶೇ.70ರಷ್ಟು ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ಫೆಬ್ರುವರಿ ಮೊದಲ ವಾರದೊಳಗೆ ಸಂಪೂರ್ಣ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಧ್ಯಕ್ಷರಾದ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಎಸ್‌.ಜಿತೇಂದ್ರ ಕುಮಾರ್‌ ಹೇಳಿದರು.

Advertisement

ನಗರದಲ್ಲಿರುವ ಸಂಘದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಧಾರ್ಮಿಕ ಆಚರಣೆಗಳೊಂದಿಗೆ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 1038 ವರ್ಷಗಳಿಂದ 58.8 ಅಡಿಯ ಏಕಶಿಲಾ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಾ ಬಂದಿದೆ. ಫೆ.7ರಿಂದ 16ರವರೆಗೆ ಪ್ರಥಮ ತೀರ್ಥಂಕರ ಆದಿನಾಥ ಭಗವಾನರಿಗೆ ಪಂಚಕಲ್ಯಾಣ ಮಹೋತ್ಸವ ನಡೆಯಲಿದೆ. ಫೆ.17ರಿಂದ 25ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.

ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳಿಗೆ ತಗಲುವ ವೆಚ್ಚವನ್ನು ಶ್ರವಣ ಬೆಳಗೊಳ ಮಠವೇ ಭರಿಸಲಿದ್ದು, ಇದಕ್ಕೆ ಸರ್ಕಾರದಿಂದ ಬಿಡಿಗಾಸು ಪಡೆಯುವುದಿಲ್ಲ. ರಾಜ್ಯ ಸರ್ಕಾರ ಮಹೋತ್ಸವ ಆಚರಣೆಗೆ 175 ಕೋಟಿ ರೂ. ಅನುದಾನ ನೀಡಿದ್ದು, ಅದರಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಮಹಾಮಸ್ತಕಾಭಿಷೇಕಕ್ಕೆ ಪೂರಕವಾಗಿ ಅಟ್ಟಣಿಗೆ ಜತೆಗೆ 5000 ಮಂದಿಗೆ ವೀಕ್ಷಣಾ ಗ್ಯಾಲರಿ ನಿರ್ಮಾಣವಾಗುತ್ತಿದೆ. 12 ತಾತ್ಕಾಲಿಕ ಉಪನಗರಗಳು ನಿರ್ಮಾಣವಾಗುತ್ತಿದ್ದು, 20,000 ಮಂದಿಗೆ ವಾಸ್ತವ್ಯ ಕಲ್ಪಿಸಲಾಗುವುದು. 22 ಶೌಚಾಲಯಗಳು ನಿರ್ಮಾಣವಾಗುತ್ತಿವೆ ಎಂದು ಹೇಳಿದರು.

2006ರಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕೆ 20- 25 ಲಕ್ಷ ಮಂದಿ ಪಾಲ್ಗೊಂಡಿದ್ದರು. ಈ ಬಾರಿಯ ಮಹೋತ್ಸವದಲ್ಲಿ 35ರಿಂದ 40 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಿತ್ಯ ಮೂರ್‍ನಾಲ್ಕು ಲಕ್ಷ ಮಂದಿ ಆಗಮಿಸಲಿದ್ದು, ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಸುಮಾರು 450ಕ್ಕೂ ಹೆಚ್ಚು ದಿಗಂಬರ ಮುನಿಗಳು ಸಾವಿರಾರು ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲೇ ಆಗಮಿಸಲಿದ್ದು, ಅವರಿಗೆ ತ್ಯಾಗಿ ನಗರದಲ್ಲಿ ವಾಸ್ತವ್ಯ ಕಲ್ಪಿಸಲಾಗುವುದು. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಕಳೆದ ಮಹಾಮಸ್ತಕಾಭಿಷೇಕಕ್ಕೆ ಹೋಲಿಸಿದರೆ ಈ ಬಾರಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ನೇರ ರೈಲ್ವೆ ಸಂಪರ್ಕ ಸೇವೆ ಆರಂಭವಾಗಿದೆ. ಇದರಿಂದ ದೇಶದ ನಾನಾ ಭಾಗಗಳಿಂದ ನೇರವಾಗಿ ಶ್ರವಣ ಬೆಳಗೊಳ ತಲುಪಬಹುದಾಗಿದೆ. ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ 21 ವಿಶೇಷ ರೈಲು ಸಂಚಾರ ಸೇವೆ ಆರಂಭವಾಗಲಿದೆ ಎಂದು ಹೇಳಿದರು.

Advertisement

ಕೇಂದ್ರದಿಂದ 100 ಕೋಟಿ ರೂ.ಗೆ ಪ್ರಸ್ತಾವ
ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಅತಿಥಿಗೃಹದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸುಸಜ್ಜಿತ ಅತಿಥಿ ಗೃಹ ನಿರ್ಮಾಣ ಇತರೆ ನಿರ್ದಿಷ್ಟ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕೋರಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಸಿಗಲಿದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ  ಎಂದು ಹೇಳಿದರು.

ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಸಮಿತಿ ಗೌರವ ಸಲಹೆಗಾರ ಡಾ.ಹಂಪ ನಾಗರಾಜಯ್ಯ, ಸಲಹೆಗಾರರಾದ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಸಂಯೋಜಕ ದೇವೇಂದ್ರಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next