Advertisement

 “ಬಾಹುಬಲಿ- 3′! ಸಾಲಿಗ್ರಾಮ ಮೇಳದ “ವಜ್ರಮಾನಸಿ 2′

05:11 PM Jul 01, 2017 | |

ಬಾಹುಬಲಿ- 3 ಬರುತ್ತಿದೆ…! ಹಾಗಾದರೆ, ನಿರ್ದೇಶಕ ರಾಜಮೌಳಿ ಇನ್ನೊಂದು ಬೃಹತ್‌ ಚಮತ್ಕಾರಕ್ಕೆ ಸಿದ್ಧರಾದರಾ? ಖಂಡಿತಾ ಇಲ್ಲ, ಹಾಗೊಂದು ಯೋಚನೆಯನ್ನು ರಾಜಮೌಳಿ ಅವರು ಇನ್ನೂ ಮಾಡಿಯೇ ಇಲ್ಲ. ಆ “ಬಾಹುಬಲಿ- 3′ ಬರುತ್ತಿರುವುದು ಚಿತ್ರಪರದೆಯ ಮೇಲೂ ಅಲ್ಲ. ಯಕ್ಷಲೋಕದ ರಂಗಸ್ಥಳದಲ್ಲಿ!

Advertisement

ಈ ಹಿಂದೆ “ಬಾಹುಬಲಿ -2′ ಕತೆಯನ್ನು ರಾಜಮೌಳಿಗಿಂತ ಮೊದಲೇ ರಂಗಸ್ಥಳದಲ್ಲಿ ಹೇಳಿದ್ದ ಸಾಲಿಗ್ರಾಮ ಮೇಳ, ಈಗ ಪುನಃ ಆ ವಿಭಿನ್ನ ಹೆಜ್ಜೆಯನ್ನು ಮುಂದುವರಿಸಿದೆ. “ವಜ್ರಮಾನಸಿ - 2′ ಪ್ರಯೋಗದಲ್ಲಿ “ಬಾಹುಬಲಿ- 3’ರ ಕತೆಯನ್ನು ಹೇಳಲಾಗುತ್ತಿದೆ. ಜನಪ್ರಿಯ ಯಕ್ಷಗಾನ ಪ್ರಸಂಗಕರ್ತ ದೇವದಾಸ್‌ ಈಶ್ವರಮಂಗಲ ವಿರಚಿತ ಕತೆ ಇದಾಗಿದ್ದು, ಶಿವಗಾಮಿ, ಮಹೇಂದ್ರ ಬಾಹುಬಲಿ, ರಾಜೇಂದ್ರ ಬಾಹುಬಲಿ, ಕಟ್ಟಪ್ಪ, ಶಿವು, ಅಬ್ದುಲ್‌ ರಶೀದ್‌ ಸಂಬಂಧಿಯೂ ಇಲ್ಲಿರಲಿದ್ದಾರೆ.

ಸಿನಿಮಾದಲ್ಲಿ ಬಾಹುಬಲಿ ತನ್ನ ಪೌರುಷ, ಸಾಹಸಗಳಿಂದ ಪ್ರೇಕ್ಷಕನ ಮನ ಗೆಲ್ಲುತ್ತಾನೆ. ಇಲ್ಲಿ ಹಾಗಲ್ಲ… ಇದು ಸಾಹಸಪೂರ್ಣ ಕತೆಯೇ ಆದರೂ ಇಲ್ಲಿ ಬಾಹುಬಲಿ ತನ್ನ ವಿಚಾರಗಳಿಂದ, ಸಂಭಾಷಣೆಗಳಿಂದ ಎಲ್ಲರ ಮನ ಗೆಲ್ಲುತ್ತಾನೆ. ಯಕ್ಷನೃತ್ಯಗಳಿಂದ ನೋಡುಗನ ಹೃದಯವನ್ನು ಆವರಿಸಿಕೊಳ್ಳುತ್ತಾನೆ. “ಬಾಹುಬಲಿ’ಯಲ್ಲಿ ಬಿಜ್ಜಳದೇವನಾಗಿ ನಾಸರ್‌ ನಟಿಸಿದ್ದರು. ತೆರೆಯಲ್ಲಿ ಅವರ ಒಂದು ಕೈ ವೈಕಲ್ಯದಿಂದ ಕೂಡಿದ್ದು, ಸದಾ ಸಂಚು ರೂಪಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಆದರೆ, ಯಕ್ಷರಂಗದಲ್ಲಿ ಆ ರೀತಿಯ ವೈಕಲ್ಯವನ್ನು ಸೃಷ್ಟಿಸುವುದು ತುಸು ಕಷ್ಟ. ಇಲ್ಲಿ ಎಲ್ಲವನ್ನೂ ರಂಗದ ಸೌಂದರ್ಯದ ಅನುಕೂಲತೆಗೆ ತಕ್ಕಂತೆ ಬದಲಿಸಿಕೊಳ್ಳಲಾಗಿದೆ. ಹಾಗಾಗಿ, ಬಿಜ್ಜಳದೇವ ಇಲ್ಲಿ ಶಿವಗಾಮಿಯ ಅಣ್ಣ ಶಿವರುದ್ರನಾಗಿ ಮಾರ್ಪಾಡಾಗಿದ್ದಾರೆ. ಅಲ್ಲಿನ ಬಿಜ್ಜಳದೇವನಂತೆಯೇ ಇಲ್ಲೂ ಸಂಚನ್ನು ರೂಪಿಸಿ, ಬಾಹುಬಲಿಯ ದಾರಿಗೆ ಅಡ್ಡ ಬರುವ ಪಾತ್ರವೇ ಆಗಿರುತ್ತಾರೆ.

ವಜ್ರಮಾನಸಿ ಸೂಪರ್‌ ಹಿಟ್‌

“ಬಾಹುಬಲಿ’ ಚಿತ್ರ ತೆರೆಮೇಲೆ ಬಂದ ಕೆಲವೇ ತಿಂಗಳಲ್ಲಿ, “ಕಟ್ಟಪ್ಪನು ಬಾಹುಬಲಿಯನ್ನು ಯಾಕೆ ಕೊಂದ?’ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ದೇವದಾಸ್‌ ಈಶ್ವರಮಂಗಲ ಅವರು “ವಜ್ರಮಾನಸಿ’ ಪ್ರಯೋಗವನ್ನು ರಚಿಸಿದ್ದರು. ಸಿನಿಮಾ ಕತೆಯನ್ನು ಯಕ್ಷಲೋಕಕ್ಕೆ ಅಳವಡಿಸಿದರ ಬಗ್ಗೆ ಕೆಲವರು ಟೀಕೆಗಳನ್ನೂ ಮಾಡಿದ್ದರು. ಆ ಎಲ್ಲ ಟೀಕೆಗಳನ್ನು ಎದುರಿಸಿಯೂ, “ವಜ್ರಮಾನಸಿ’ ಬರೋಬ್ಬರಿ 149 ಪ್ರದರ್ಶನಗಳನ್ನು ಕಂಡು ಸೂಪರ್‌ ಹಿಟ್‌ ಆಗಿತ್ತು. ಇಲ್ಲಿನ ಅನೇಕ ಕಲ್ಪನೆಗಳು “ಬಾಹುಬಲಿ 2’ರಲ್ಲಿ ನಿಜವೂ ಆಗಿತ್ತು. ಈಗ “ಬಾಹುಬಲಿ- 3’ರಲ್ಲಿ ಏನೇನೆಲ್ಲ ಆಗಬಹುದು ಎಂಬುದನ್ನು ರಾಜಮೌಳಿಗಿಂತ ಮೊದಲೇ ದೇವದಾಸ್‌ ಅವರು ಹೇಳಲು ಹೊರಟಿದ್ದಾರೆ.

Advertisement

ರಂಗಸ್ಥಳದಲ್ಲಿ ಸಿನಿಮಾ ಕತೆ
ಬಾಕ್ಸ್‌ಆಫೀಸ್‌ನಲ್ಲಿ ಹಿಟ್‌ ಆದ ಸಿನಿಮಾದ ಕತೆಗಳನ್ನು ಯಕ್ಷಗಾನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. “ಪಡೆಯಪ್ಪ’ ಚಿತ್ರ ಆಧರಿಸಿ “ಶಿವರಂಜಿನಿ’, “ಆಪ್ತಮಿತ್ರ’ದ ಕತೆ ಇಟ್ಟುಕೊಂಡು “ನಾಗವಲ್ಲಿ’, “ಸಂಗೊಳ್ಳಿ ರಾಯಣ್ಣ’, “ಗಂಡುಗಲಿ ಮಯೂರ’, “ರಾಣಿ - ಮಹಾರಾಣಿ’ ಚಿತ್ರ “ಮಲ್ಲಿಗೆ  ಸಂಪಿಗೆ’ ಪ್ರಸಂಗವಾಗಿ, “ಮುಂಗಾರು ಮಳೆ’ ಕತೆ “ಪ್ರೇಮಾಭಿಷೇಕ’ ಆಗಿ, ಯಕ್ಷಪ್ರಿಯರನ್ನು ರಂಜಿಸಿದ್ದವು. ಸಾಲಿಗ್ರಾಮ ಮೇಳದ ಈ ವಿಭಿನ್ನ ಪ್ರಯೋಗಕ್ಕೆ ಸಾಕಷ್ಟು ಮೆಚ್ಚುಗೆಗಳೂ ಬಂದಿದ್ದವು.

ಇಮ್ಮಡಿ ಶ್ರಮ ಬೇಕು…
ನಾವು ಸ್ವಂತ ಕತೆ ಮಾಡುವುದು ಸುಲಭ. ಆದರೆ, ಸಿನಿಮಾ ಕತೆಯನ್ನು ರಂಗಸ್ಥಳಕ್ಕೆ ಅಳವಡಿಸುವಾಗ, ಅದು ಇಮ್ಮಡಿ ಬೇಡುತ್ತದೆ. “ಬಾಹುಬಲಿ’ಯನ್ನು ಹೋಲುವ “ವಜ್ರಮಾನಸಿ’ಯನ್ನು ಜನ ಮೆಚ್ಚಿಕೊಂಡಿದ್ದರು. ಈ ಕಾರಣ “ವಜ್ರಮಾನಸಿ  - 2’ಕ್ಕೆ ಕೈಹಾಕಿದ್ದೇವೆ. ಮಾಹಿಷ್ಮತಿ ಸಾಮ್ರಾಜ್ಯ ಮತ್ತೆ ಹೇಗೆ ಸುಭಿಕ್ಷವಾಗುತ್ತದೆಂಬುದನ್ನು ಇಲ್ಲಿನ ಕತೆ ಹೇಳುತ್ತದೆ.
– ದೇವದಾಸ್‌ ಈಶ್ವರಮಂಗಲ, ಯಕ್ಷಗಾನ ಪ್ರಸಂಗರ್ತ

ಯಾವಾಗ?: ಜುಲೈ 3, ಸೋಮವಾರ
ಸಮಯ: ರಾತ್ರಿ 10
ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಟಿಕೆಟ್‌: 200, 300 ರೂ.
ಸಂಪರ್ಕ: 9482940594

ಭಾಗವತರು
ಜಿ. ರಾಘವೇಂದ್ರ ಮಯ್ಯ ಹಾಲಾಡಿ, ಉದಯ ಹೊಸಾಳ, ಆನಂದ ಅಂಕೋಲ

ಚಂಡೆ
ಶಿವಾನಂದ ಕೋಟ
ರಾಕೇಶ್‌ ಮಲ್ಯ ಹಳ್ಳಾಡಿ

ಮದ್ದಳೆ
ಪರಮೇಶ್ವರ ಭಂಡಾರಿ ಕರ್ಕಿ
ನಾಗರಾಜ ಭಂಡಾರಿ ಹಿರೇಬೈಲು

ಪ್ರಮುಖ ಪಾತ್ರವರ್ಗ
ಶಶಿಕಾಂತ ಶೆಟ್ಟಿ, ಕಾರ್ಕಳ
ವಂಡಾರು ಗೋವಿಂದ ಮೊಗವೀರ
ಮಹಾಬಲೇಶ್ವರ ಭಟ್‌ ಕ್ಯಾದಗಿ
ಅರೋYಡು ಮೋಹನದಾಸ ಶೆಣೈ
ತುಂಬ್ರಿ ಭಾಸ್ಕರ್‌
ಮಂಕಿ ಈಶ್ವರ್‌ ನ್ಯಾಕ್‌

Advertisement

Udayavani is now on Telegram. Click here to join our channel and stay updated with the latest news.

Next