ಮಂಗಳೂರು: ಬಹ್ರೈನ್ ಹಾಗೂ ಮುಂಬಯಿಯಲ್ಲಿ ಎದುರಾದ ಸಮಸ್ಯೆಗಳನ್ನೇ ನೆಪವಾಗಿಟ್ಟುಕೊಂಡು ಇಂಡಿಗೋ ವಿಮಾನವೊಂದು ಮಂಗಳೂರಿಗೆ ತಲುಪಲು ಬರೋಬ್ಬರಿ ಎರಡು ದಿನ ಬೇಕಾಯಿತು!
ಮಾ. 20ರಂದು ರಾತ್ರಿ 10.35ರ ಸುಮಾರಿಗೆ ಬಹ್ರೈನಿಂದ ಮಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಕರಾವಳಿಯ ಸುಮಾರು 12 ಪ್ರಯಾಣಿಕರು ಮಂಗಳೂರು ತಲುಪಿದ್ದು ಮಾತ್ರ ಮಾ. 22ರಂದು ರಾತ್ರಿ 11 ಗಂಟೆಗೆ!
ಪ್ರಯಾಣಿಕರಾದ ಆರ್.ಜೆ. ಅನುರಾಗ್ “ಉದಯವಾಣಿ’ ಜತೆಗೆ ಮಾತನಾಡಿ, ಮಾ. 20ರಂದು ರಾತ್ರಿ 10.35ರ ಸುಮಾರಿಗೆ ಬಹ್ರೈನ್‌ನಿಂದ ಇಂಡಿಗೋ ವಿಮಾನ ಹೊರಡಬೇಕಿತ್ತು. ವಿಮಾನದಲ್ಲಿ 2 ತಾಸು ಕುಳಿತ ಅನಂತರ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿದೆ ಎಂದು ಹೇಳಿ ನಮ್ಮನ್ನು ಇಳಿಸಿದರು. ವಿಮಾನ ಮರುದಿನ (ಮಾ. 21) ರಾತ್ರಿ ಸಂಚಾರ ನಡೆಸಲಿದೆ ಎಂದರು.
ಆದರೆ ಪ್ರಯಾಣಿಕರಿಗೆ ಯಾವುದೇ ರೂಂ ವ್ಯವಸ್ಥೆ ನೀಡಲಿಲ್ಲ. ಬಳಿಕ ಮರುದಿನ ರಾತ್ರಿ 10.35ಕ್ಕೆ ಹೊರಡಬೇಕಾದ ವಿಮಾನವು ಒಬ್ಬ ಪ್ರಯಾಣಿಕನಿಗೆ ಕಾದು ಬರೋಬ್ಬರಿ 2 ತಾಸು ತಡವಾಗಿ ಹೊರಟಿತು. ಮಾ. 22ರಂದು ಬೆಳಗ್ಗೆ 7.30ಕ್ಕೆ ಮುಂಬಯಿಗೆ ವಿಮಾನ ಬಂದಾಗ ಮಂಗಳೂರಿಗೆ ಇದ್ದ ಕನೆಕ್ಟಿಂಗ್ ವಿಮಾನ ಅದಾಗಲೇ ತೆರಳಿತ್ತು. ಹೀಗಾಗಿ 12 ಪ್ರಯಾಣಿಕರು ಮತ್ತೆ ಗೊಂದಲ ಎದುರಿಸಬೇಕಾಯಿತು. ಬಳಿಕ ರಾತ್ರಿ 8 ಗಂಟೆಯ ವರೆಗೆ ಕಾದು ಮಂಗಳೂರಿಗೆ ಬರುವಂತಾಯಿತು’ ಎಂದಿದ್ದಾರೆ.