Advertisement

ಬಾಗೇಪಲ್ಲಿ, ಗುಡಿಬಂಡೆ ವೈದ್ಯರ ವರ್ಗ ಬೇಡ: ಶಾಸಕ

07:44 AM Jun 18, 2019 | Lakshmi GovindaRaj |

ಬಾಗೇಪಲ್ಲಿ: ರಾಜ್ಯದಲ್ಲಿಯೇ ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲೂಕುಗಳೆಂದು ಗುರುತಿಸಲ್ಪಟ್ಟಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿರುವ ವೈದ್ಯರ ವರ್ಗಾವಣೆ ಅಥವಾ ಬೇರೊಂದು ಸ್ಥಳಕ್ಕೆ ನಿಯೋಜನೆ ಮಾಡಬೇಡಿ ಎಂದು ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿಶಂಕರ್‌ರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ತೊಂದರೆಯಾಗುತ್ತದೆ: ಬಾಗೇಪಲ್ಲಿ-ಗುಡಿಬಂಡೆ ತಾಲೂಕುಗಳಿಗೆ ವೈದ್ಯರು ಬರುವುದೇ ದೊಡ್ಡ ಸಮಸ್ಯೆ. ಅಂತಹ ಪರಿಸ್ಥಿತಿಯಲ್ಲಿ ಇಲ್ಲಿಗೆ ಬಂದಿರುವ ವೈದ್ಯರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಅಥವಾ ನಿಯೋಜನೆ ಮಾಡಬೇಡಿ. ಇದರಿಂದ ಇಲ್ಲಿನ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಹೇಳಿದರು.

ವಸ್ತು ಸ್ಥಿತಿ ಅರಿವು: ತಾನು ಶಾಸಕನಾಗುವುದಕ್ಕೆ ಮೊದಲು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ ಮೂವರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ 9 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುಡಿಬಂಡೆ ಆಸ್ಪತ್ರೆಯ ಡಾ.ಅಕ್ಷಯ್‌ ಅವರನ್ನು ಮಂಚೇನಹಳ್ಳಿಗೆ ನಿಯೋಜನೆ ಮಾಡಲಾಗಿದ್ದು ತಕ್ಷಣ ಅವರನ್ನು ಗುಡಿಬಂಡೆಗೆ ವಾಪಸ್‌ ಕರೆಸಬೇಕು ಎಂದು ಸೂಚಿಸಿ ಡೀಸಿ ಮತ್ತು ಸಿಇಒ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ವಸ್ತುಸ್ಥಿತಿ ತಿಳಿಸಿದರು.

ನಿರ್ಲಕ್ಷ್ಯ ಬೇಡ: ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ಬಾರದಂತೆ ಅಗತ್ಯ ಕ್ರಮ ಜರುಗಿಸಬೇಕು. ಅನಿರೀಕ್ಷಿತವಾಗಿ ಭೇಟಿ ನೀಡಿ ವೈದ್ಯರ ಹಾಜರಾತಿ ಗಮನಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎನ್‌.ಸತ್ಯನಾರಾಯಣರೆಡ್ಡಿ ಅವರಿಗೆ ತಿಳಿಸಿದರು.

ಸ್ಥಳದ ಕೊರತೆಯಿದೆ: ಸಾರ್ವಜನಿಕ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಮಾಹಿತಿ ಕೋರಿದ ಶಾಸಕರು, ನರ್ಸ್‌ಗಳು ಮತ್ತು ಸಹಾಯಕರ ಹುದ್ದೆ ಖಾಲಿಯಿದೆ. ಲಾಂಡ್ರಿ, ಕೇಂದ್ರೀಕೃತ ಪ್ರಯೋಗಾಲಯ ವ್ಯವಸ್ಥೆ, ಆಕ್ಸಿಜನ್‌ ಕೊರತೆ ಬಾರದಂತೆ ಆಕ್ಸಿಜನ್‌ ಜನರೇಟರ್‌ ಪ್ರಾರಂಭಿಸಬೇಕು,ಪ್ರಮುಖವಾಗಿ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್‌ ವೈರಿಂಗ್‌ ವ್ಯವಸ್ಥೆ ಸಂಪೂರ್ಣ ಬದಲಾಯಿಸಬೇಕು, ಸಾರ್ವಜನಿಕ ಆಸ್ಪತ್ರೆಗೆ ತಾಯಿ-ಮಗು ಪ್ರಶಸ್ತಿ ಬಂದಿದೆ. ಆದರೆ ವಾರ್ಡಗೆ ಬೇಕಾದ ಸ್ಥಳದ ಕೊರತೆ ಇದೆ ಎಂದು ತಿಳಿಸಿದರು.

Advertisement

ಇದಕ್ಕೆ ಸ್ಪಂದಿಸಿದ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ, ಪ್ರಸ್ತುತ ಆಸ್ಪತ್ರೆ ಮೇಲ್ಭಾಗದಲ್ಲಿಯೇ ಮತ್ತೂಂದು ಕಟ್ಟಡ ನಿರ್ಮಿಸುವ ಭರವಸೆ ನೀಡಿದರಲ್ಲದೆ ಆಸ್ಪತ್ರೆಗೆ ಹೊಂದಿಕೊಂಡೇ ಇರುವ ಅಂಚೆ ಇಲಾಖೆಗೆ ನೀಡಿದ್ದ ನಿವೇಶನವನ್ನು ಆಸ್ಪತ್ರೆಗೆ ಕೊಡಿಸಲು ಪ್ರಯತ್ನಿಸುತ್ತೇನೆ. ತಕ್ಷಣದಿಂದಲೇ ಡೈಲೀವೇಜಸ್‌ ಆಧಾರದ ಮೇಲೆ 10 ನರ್ಸುಗಳನ್ನು ನೇಮಕ ಮಾಡಿಕೊಳ್ಳುವಂತೆ ಶಾಸಕರು ತಿಳಿಸಿದರು.

ಸಮಸ್ಯೆ ಬಗೆಹರಿಸುವೆ: ಭದ್ರತೆಗಾಗಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲು ಪೊಲೀಸ್‌ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಿದರು. ಆಸ್ಪತ್ರೆಯಲ್ಲಿ ಅಗತ್ಯವಾಗಿರುವ ಪ್ರಸೂತಿ ತಜ್ಞೆಯರ ಸಮಸ್ಯೆ ಪರಿಹರಿಸಲು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಆಶಾ ಕಾರ್ಯಕರ್ತೆಯರು ತಮಗಾಗುತ್ತಿದ್ದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಾಗ ಡಿಎಚ್‌ಒ ಅವರಿಗೆ ತಿಳಿಸಿ ಸಮಸ್ಯೆ ಬಗೆಹರಿಸಿದರು.

ಸಭೆಯಲ್ಲಿ ಡಿಎಚ್‌ಒ ಡಾ.ರವಿಶಂಕರ್‌, ಟಿಎಚ್‌ಒ ಡಾ.ಸಿ.ಎನ್‌.ಸತ್ಯನಾರಾಯಣರೆಡ್ಡಿ, ಜಿಪಂ ಸದಸ್ಯ ನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್‌.ನರೇಂದ್ರಬಾಬು, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹಿರಿಯ ವಕೀಲ ಎ.ಜಿ.ಸುಧಾಕರ್‌ ಮತ್ತಿತರರಿದ್ದರು.

ವೈದ್ಯಕೀಯ ಸೇವೆ ನಮ್ಮೆಲ್ಲರ ಜವಾಬ್ದಾರಿ: ಬಹುತೇಕ ಬಡ ಜನತೆ ಇರುವ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಡರೋಗಿಗಳಿಗೆ ಅಗತ್ಯ ವೈದ್ಯಕೀಯ ಸೇವೆ ನೀಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ಮತ್ತು ಚಿಂತಾಮಣಿಗಳು ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ತಾಲೂಕುಗಳು. ಇಲ್ಲಿಗೆ ಬರುವುದಕ್ಕೆ ವೈದ್ಯರು ಇಷ್ಟಪಡುತ್ತಾರೆ.

ಆದರೆ ಬಾಗೇಪಲ್ಲಿಗೆ ಬರಲು ಆಸಕ್ತಿ ತೋರಿಸುವುದಿಲ್ಲ. ಈಗ ಇಲ್ಲಿಯೂ ಪರಿಸ್ಥಿತಿ ಬದಲಾವಣೆಯಾಗಿದೆ. ಆಸ್ಪತ್ರೆಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ವೈದ್ಯರ ಮೇಲೆ ಹಲ್ಲೆಯಾಗುವುದನ್ನು ತಡೆಗಟ್ಟುನ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸೂಕ್ತ ಪೊಲೀಸ್‌ ವ್ಯವಸ್ಥೆ ಮಾಡಿರುವ ನಿಟ್ಟಿನಲ್ಲಿ ಅಂತಹ ಅಹಿತಕರ ಘಟನೆಗಳು ನಿಂತುಹೋಗಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next