Advertisement

ಹೋರಾಟದ ಫಲವಾಗಿ ಹಕ್ಕುಪತ್ರ ಲಭ್ಯ: ದತ್ತ

06:35 PM Sep 05, 2020 | Suhan S |

ಕಡೂರು: ತಾಲೂಕಿನ ಎಮ್ಮೆದೊಡ್ಡಿ ಭಾಗದ ಕೆಲವು ರೈತರಿಗೆ ತಮ್ಮ ಹೋರಾಟದ ಫಲವಾಗಿ ಸಾಗುವಳಿ ಪತ್ರ ಲಭಿಸಿದೆ ಎಂದು ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಹೇಳಿದರು.

Advertisement

ಪಟ್ಟಣದ ಕೋಟೆ ಬಡಾವಣೆಯ ತಮ್ಮ ನಿವಾಸದಲ್ಲಿ ಶುಕ್ರವಾರ ಎಮ್ಮೆದೊಡ್ಡಿ ಭಾಗದ ರೈತರು ಮತ್ತು ತೆಲುಗುಗೌಡ ಸಮಾಜದ ಮುಖಂಡರು ನೀಡಿದ ಗೌರವ ಸ್ವೀಕರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಎಮ್ಮೆದೊಡ್ಡಿ ಬಗರ್‌ಹುಕುಂ ಸಮಸ್ಯೆಗೆ ಬಹುದೊಡ್ಡ ಇತಿಹಾಸ ಇದೆ. ನೂರಾರು ವರ್ಷಗಳಿಂದ ಸಾಗುವಳಿಪತ್ರ ಇಲ್ಲದೆ ಈ ಭಾಗದ ಜನರು ನರಳುತ್ತಿದ್ದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ವಿಶೇಷ ಕಾಳಜಿಯ ಫಲವಾಗಿ ಈ ಸಮಸ್ಯೆ ಬಗೆ ಹರಿಸಲು ವಿವಿಧ ಇಲಾಖೆಯ ಅಧಿಕಾರಿಗಳ ತಂಡವೇ ಸ್ಥಳಕ್ಕೆ ಆಗಮಿಸಿತ್ತಲ್ಲದೆ ಪ್ರಕರಣ ನ್ಯಾಯಾಲಯದ ಮೆಟ್ಟಿಲ್ಲನ್ನು ಏರಿತ್ತು ಎಂಬುದು ಈಗ ಇತಿಹಾಸ ಎಂದರು.

ಇದೀಗ ರಾಜ್ಯದ ನೂರಾರು ರೈತರಿಗೆ ಬಗರ್‌ ಹುಕುಂ ಸಮಿತಿಯ ಸಭೆಗಳ ಮೂಲಕ ಸಾಗುವಳಿ ಪತ್ರ ನೀಡಲು ಸರ್ಕಾರ ಮುಂದಾದ ಫಲವಾಗಿ ಮತ್ತು ಕೆಲವು ವೈಯಕ್ತಿಕ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾದ ಹಿನ್ನೆಲೆಯಲ್ಲಿ ಎಮ್ಮೆದೊಡ್ಡಿ ಭಾಗದ ರೈತರಿಗೆ ಸಾಗುವಳಿ ಪತ್ರ ಸಿಗುತ್ತಿದೆ. ತಾವು ಶಾಸಕರಾಗಿದ್ದಾಗ ನ್ಯಾಯಾಲಯದ ಸಾಮಾನ್ಯ ಗ್ಯಾಲರಿಯಲ್ಲಿ ಕುಳಿತು ಈ ಭಾಗದ ರೈತರ ಬೆಂಬಲಕ್ಕಿದ್ದೆ ಎಂಬುದನ್ನು ಸ್ಮರಿಸಿಕೊಂಡರು. ಅಂದಾಜು ಸುಮಾರು 60 ಜನರಿಗೆ ಸಾಗುವಳಿ ಪತ್ರ ಲಭ್ಯವಾಗಿದ್ದು ಇನ್ನು ಅನೇಕ ರೈತರಿಗೆ ನ್ಯಾಯಸಮ್ಮತವಾಗಿ ಸಾಗುವಳಿ ಪತ್ರ ದೊರಕಬೇಕಾಗಿದೆ ಎಂದ ಅವರು, ಬಗರ್‌ಹುಕುಂ ಸಾಗುವಳಿ ಪತ್ರ ವಿತರಣೆ ವಿಷಯದಲ್ಲಿ ಭ್ರಷ್ಟಾಚಾರ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಾವು ಆ ಕುರಿತು ಹೆಚ್ಚೇನೂ ಹೇಳಲಾರೆ ಎಂದರು.

ಇದೇ ಸಂದರ್ಭ ತೆಲುಗುಗೌಡ ಸಮಾಜದ ರಾಜಕೀಯ ಮೀಸಲಾತಿ ಕುರಿತಂತೆ ವಿಷಯ ಪ್ರಸ್ತಾಪಿಸಿದ ದತ್ತ ಅವರು, ಹಲವು ವರ್ಷದಿಂದ ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದು ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಬರುವ ಪಂಚಾಯತ್‌ ಚುನಾವಣೆಯಲ್ಲಿ ಈ ಜನಾಂಗದ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ತೆಲುಗುಗೌಡ ಸಮಾಜದ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಮಂಜುನಾಥ್‌, ಕೃಷ್ಣಮೂರ್ತಿ, ವಾಸು, ಶೂದ್ರ ಶ್ರೀನಿವಾಸ್‌ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next