Advertisement

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

12:03 AM Nov 16, 2024 | Team Udayavani |

ರಾಜ್ಯಾದ್ಯಂತ ಬಗರ್‌ಹುಕುಂ ಅಡಿ ಭೂ ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಅರ್ಹ ಬಡ ರೈತರಿಗೆ ಭೂ ಮಂಜೂರಾತಿ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜ್ಯದ ಎಲ್ಲ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಅಷ್ಟು ಮಾತ್ರ ವಲ್ಲದೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಪಡಿಸಿರುವ ಸಚಿವರು, ಈ ಅವಧಿಯೊಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸದೇ ಹೋದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಚಿವರು ಅಧಿಕಾರಿಗಳಿಗೆ ನೀಡಿರುವ ಈ ಆದೇಶ ಮತ್ತು ಎಚ್ಚರಿಕೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ ಬಗರ್‌ಹುಕುಂನಡಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಕಚೇರಿ ಅಲೆದಾಡುತ್ತಿರುವ ಬಡ ರೈತರ ಬವಣೆ ನೀಗುವ ಆಶಾವಾದ ಮೂಡಿದೆ.

Advertisement

ಬಗರ್‌ಹುಕುಂ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅದರಲ್ಲೂ ತಹಶೀಲ್ದಾರರು ತೋರುತ್ತಿರುವ ಅಸಡ್ಡೆಯ ಮನೋಭಾವಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವ ಜತೆಯಲ್ಲಿ ಉತ್ತಮ ಸಾಧನೆ ತೋರಿರುವ ತಹಶೀಲ್ದಾರರನ್ನು ಸಮ್ಮಾನಿಸುವುದಾಗಿ ಘೋಷಿಸುವ ಮೂಲಕ ಇಡೀ ಪ್ರಕ್ರಿಯೆಗೆ ಚುರುಕು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಬಗರ್‌ಹುಕುಂ ನಡಿ ಭೂ ಮಂಜೂರಾತಿ ಕೋರಿ ರೈತರು ಸಲ್ಲಿಸಿರುವ ಅರ್ಜಿಗಳ ಪೈಕಿ ಅರ್ಹ-ಅನರ್ಹ ಅರ್ಜಿಗಳನ್ನು ವಿಂಗಡನೆ ಮಾಡಲೂ ಇಲಾಖಾಧಿಕಾರಿಗಳು ವರ್ಷಗಟ್ಟಲೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಈ ಅರ್ಜಿಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ನೆಟ್‌ವರ್ಕ್‌ ಕೊರತೆ, ಆ್ಯಪ್‌ ಸಮಸ್ಯೆಯಂತಹ ತಾಂತ್ರಿಕ ಅಡಚಣೆಯ ಕುಂಟು ನೆಪವೊಡ್ಡುವುದನ್ನು ಸಹಿಸಲಾಗದು. ಈಗಾಗಲೇ ಈ ಅರ್ಜಿ ಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರಕಾರ ಮಾನದಂಡಗಳನ್ನು ರೂಪಿಸಿದ್ದು ಅದ ರಂತೆ ತ್ವರಿತಗತಿಯಲ್ಲಿ ಅರ್ಜಿಗಳನ್ನು ಪರಿಗಣಿಸಿ, ಅಗತ್ಯ ಬಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ಬಗರ್‌ಹುಕುಂನಡಿಯಲ್ಲಿ ಭೂ ಮಂಜೂರಾತಿಗೆ ಅರ್ಹವೇ ಅಥವಾ ಅನರ್ಹವೇ ಎಂದು ಮುಂದಿನ 10 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು. ಈ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ತಮ್ಮ ಅವಗಾಹನೆಗೆ ತರಬೇಕು. ಡಿಸೆಂಬರ್‌ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್‌ ಭೂ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಬಗರ್‌ಹುಕುಂನಡಿ ಭೂ ಮಂಜೂ ರಾತಿಯ ನಿರೀಕ್ಷೆಯಲ್ಲಿರುವ ಬಹುತೇಕ ರೈತರು ತೀರಾ ಬಡವರಾಗಿದ್ದು, ಅವರಿಗೆ ಭೂ ಮಂಜೂರಾತಿ ಪತ್ರ ದೊರಕಿಸಿಕೊಟ್ಟದ್ದೇ ಆದಲ್ಲಿ ನಿಶ್ಚಿಂತೆಯಿಂದ ಕೃಷಿ ಚಟು ವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆಯಲ್ಲದೆ ಅವರಿಗೆ ಜೀವನ ಭದ್ರತೆಯನ್ನು ಒದಗಿಸಿದಂತಾಗಲಿದೆ.

ಇನ್ನು ರಾಜ್ಯಾದ್ಯಂತ ಬಗರ್‌ಹುಕುಂ ನಡಿ ಸಲ್ಲಿಕೆಯಾಗಿರುವ 14 ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳ ಸಂಖ್ಯೆಯೇ ಅಧಿಕವಾಗಿದೆ. ನಕಲಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದರಿಂದ ಕೂಲಂಕಷವಾಗಿ ದಾಖಲೆಪತ್ರಗಳನ್ನು ಪರಿಶೀಲಿಸಿ, ಸರಕಾರದ ಮಾನದಂಡದನುಸಾರ ಅರ್ಜಿಗಳನ್ನು ವಿಲೇ ಮಾಡಬೇಕು. ಸಚಿವರ ಆದೇಶವನ್ನು ಮುಂದಿಟ್ಟು ನಿಗದಿತ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಪ್ರಕ್ರಿಯೆ ಯನ್ನು ಬೇಕಾಬಿಟ್ಟಿಯಾಗಿ ನಡೆಸಿ, ಅನರ್ಹರಿಗೆ ಬಗರ್‌ಹುಕುಂನಡಿ ಭೂ ಮಂಜೂ ರಾತಿಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇದೇ ವೇಳೆ ನಕಲಿ ಅರ್ಜಿ ದಾರರು ಮತ್ತು ಮಧ್ಯವರ್ತಿಗಳು ಕೂಡ ಸಚಿವರ ಆದೇಶವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಹಾಗೂ ನಾನಾ ತೆರನಾದ ವಶೀಲಿಬಾಜಿ ನಡೆಯುವ ಸಾಧ್ಯತೆ ಇರುವುದರಿಂದ ಇಡೀ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ಅರ್ಹರಿಗಷ್ಟೇ ಭೂ ಮಂ­ಜೂರಾತಿ ಲಭಿಸುವುದನ್ನು ಖಾತರಿಪಡಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next