ಬೆಂಗಳೂರು: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದು ಹಾಕಿದ್ದ ಖಾಸಗಿ ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕನ (ಎಚ್‌ಆರ್) ಕೊಲೆಗೆ ಯತ್ನಿಸಿದ ಐವರನ್ನು ಬಾಗಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಸ್‌ಮೋಸ್ ಎಚ್‌ಇಟಿ ಟೆಕ್ನೋಲಾಜಿಸ್ ಲಿ.ಕಂಪನಿಯ ಎಚ್ ಆರ್ ರಾಜರಾಜೇಶ್ವರಿನಗರದ ನಿವಾಸಿ ರಾಜಶೇಖರ್ ರೈ (46) ನೀಡಿದ ದೂರಿನ ಆಧಾರದಲ್ಲಿ ಶಿಡ್ಲ ಘಟ್ಟದ ನಿವಾಸಿ ಮಧು (30), ಆತನ ಸಹಚರರಾದ ಪ್ರಮೋದ್ (26), ಅಲೆಕ್ಸಾಂಡರ್ (27), ಚಿನ್ನರಾಜು (34), ಇಮ್ರಾನ್‌ಪಾಷಾ (29) ಅವರನ್ನು ಬಂಧಿಸಲಾಗಿದೆ.
ಬಾಗಲೂರಿನ ಕೆಐಎಡಿಬಿ ಪ್ರದೇಶದ ಎಸ್‌ಇಝಡ್ ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಸಾಸ್ ಮೋಸ್ ಎಚ್‌ಇಟಿ ಟೆಕ್ನೋಲಾಜಿಸ್ ಲಿ. ಸಂಸ್ಥೆಯು ದೇಶದ ರಕ್ಷಣಾ ಪಡೆಗಳಿಗೆ(ಡಿಫೆನ್ಸ್) ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಸಿಬ್ಬಂದಿಯು ಫೋಟೋ ಅಥವಾ ವಿಡಿಯೋ ಮಾಡಬಾರದು ಎಂಬ ನಿಯಮವಿದೆ. ಆದರೆ, ಆರೋಪಿ ಮಧು ಸಂಸ್ಥೆಯ ನಿಯಮಗಳನ್ನು ಉಲ್ಲಂ ಸಿ ಕೆಲ ಉತ್ಪನ್ನಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಇದು ಕಂಪನಿಯ ಮೇಲ್ವಿಚಾರಕರ ಗಮನಕ್ಕೆ ಬಂದು ಆತನಿಗೆ ನೋಟಿಸ್ ನೀಡಿದ್ದರು. ನೋಟಿಸ್‌ಗೂ ಉತ್ತರಿಸದ ಪರಿಣಾಮ, ಕಳೆದ ಒಂದೂವರೆ ತಿಂಗಳ ಹಿಂದೆ ಕೆಲಸದಿಂದ ಅಮಾನತು ಮಾಡಲಾಗಿತ್ತು.
ಮಾರಕಾಸ್ತ್ರ ಹಿಡಿದು ಐದಾರು ಜನಬೆನ್ನಟ್ಟಿದರೂ ಪಾರಾದ ಎಚ್‌ಆರ್ : ಕೆಲಸ ಕಳೆದುಕೊಂಡಿದ್ದರಿಂದ ಆಕ್ರೋಶಗೊಂಡ ಮಧು ತನ್ನ ಸಹಚರರ ಜೊತೆ ಸೇರಿ ದೂರುದಾರ ರಾಜಶೇಖರ್(ಎಚ್‌ಆರ್) ಕೊಲೆಗೆ ಸಂಚು ರೂಪಿಸಿದ್ದ. ಮಾ.8ರಂದು ರಾತ್ರಿ 8 ಗಂಟೆ ಸುಮಾರಿಗೆ ರಾಜಶೇಖರ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬಿ.ಕೆ.ಪಾಳ್ಯ ಕ್ರಾಸ್‌ನಲ್ಲಿ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದರು. ಕಾರು ಚಾಲಕನ ಸಮಯಪ್ರಜ್ಞೆಯಿಂದ ರಾಜಶೇಖರ್ ಆರೋಪಿಗಳಿಂದ ಪಾರಾಗಿದ್ದರು. ಆದರೂ ಆರೋಪಿಗಳು ಹಿಂಬಾಲಿಸುತ್ತಲೇ ಇದ್ದರು. ಕೊನೆಗೆ ಮಾರ್ಗಮಧ್ಯೆ ಬಾಗಲೂರು ಪೊಲೀಸ್ ಠಾಣೆ ಬಂದ ತಕ್ಷಣ ಕಾರನ್ನು ನೇರವಾಗಿ ಪೊಲೀಸ್ ಠಾಣೆ ಆವರಣದೊಳಕ್ಕೆ ಬಂದಿದ್ದರು. ಹಿಂದೆ ಹಿಂಬಾಲಿಸುತ್ತಿದ್ದ ಆರೋಪಿಗಳು ಪೊಲೀಸ್ ಠಾಣೆ ಬೋರ್ಡ್ ನೋಡಿ ಪರಾರಿಯಾಗಿದ್ದರು. ಆದರೆ, ಆರೋಪಿಗಳೆಲ್ಲರೂ ಮಾಸ್ಕ್ ಧರಿಸಿದ್ದರಿಂದ ಯಾರಿರಬಹುದೆಂದು ಸರಿಯಾಗಿ ಸುಳಿವು ಸಿಕ್ಕಿರಲಿಲ್ಲ.
ಠಾಣೆ ಬಿಟ್ಟು ಮನೆಗೆ ಬಂದ ಆರೋಪಿಗಳು: ರಾಜಶೇಖರ್ ಠಾಣೆಯಲ್ಲಿ ದೂರು ನೀಡಿ ಮನೆಗೆ ಬರುವ ಹೊತ್ತಿಗೆ ತಡರಾತ್ರಿಯಾಗಿತ್ತು. ಆದರೆ, ಬಾಗಲೂರು ಠಾಣೆ ಬಳಿಯಿಂದ ನೇರವಾಗಿ ರಾಜರಾಜೇಶ್ವರಿನಗರದಲ್ಲಿರುವ ರಾಜಶೇಖರ್ ಮನೆ ಬಳಿ ಆರೋಪಿಗಳು ಬಂದು ಕಾರು ನಿಲ್ಲಿಸಿ ಕಾಯ್ದಿದ್ದರು. ರಾಜಶೇಖರ್ ಬರುವುದು ತಡವಾಗಿದ್ದರಿಂದ ಆರೋಪಿಗಳು ಮದ್ಯ ಸೇವಿಸಿ ನಿದ್ದೆಗೆ ಜಾರಿದ್ದರು. ಹೀಗಾಗಿ ರಾಜೇಶೇಖರ್ ಮನೆಗೆ ಬಂದದ್ದು ಆರೋಪಿಗಳಿಗೆ ಗೊತ್ತಾಗಿರಲಿಲ್ಲ. ಮರುದಿನ ಎಚ್ಚರವಾದ ಮೇಲೆ ಆರ್‌ಆರ್ ನಗರದಿಂದ ಪರಾರಿಯಾಗಿದ್ದರು. ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ, ಪ್ರಕರಣದ ಕಿಂಗ್‌ಪಿನ್ ಮಧು ಶಿಡ್ಲಘಟ್ಟದಲ್ಲಿರುವುದು ಪತ್ತೆಯಾಗಿತ್ತು. ಕೂಡಲೇ ಆತನನ್ನು ಬಂಧಿಸಿ, ಆತ ಕೊಟ್ಟ ಸುಳಿವಿನ ಆಧಾರದ ಮೇಲೆ ಇತರ ಆರೋಪಿಗಳನ್ನು ಪಾಂಡಿಚೇರಿಯಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.