Advertisement

Bagalkote; ಸ್ವಚ್ಛ ವಾಹಿನಿಗೆ ಬಂತು ಗಾಂಧಿ ಪುರಸ್ಕಾರ

05:02 PM Sep 29, 2023 | Team Udayavani |

ಬಾಗಲಕೋಟೆ: ಗ್ರಾಮೀಣ ಜನರಿಗೆ ಗ್ರಾಮ ಪಂಚಾಯಿತಿಯೇ ಸರ್ಕಾರ. ಅಲ್ಲಿನ ಸದಸ್ಯರು-ಅಧಿಕಾರಿಗಳು ಇಚ್ಛಾಸಕ್ತಿಯಿಂದ
ಕಾರ್ಯ ನಿರ್ವಹಿಸಿದರೆ, ಇಡೀ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯವೇ ಗಮನ ಸೆಳೆಯುವ ಕಾರ್ಯ ಮಾಡಬಹುದು ಎಂಬುದಕ್ಕೆ ತಾಲೂಕಿನ ನೀರಲಕೇರಿ ಗ್ರಾಮ ಸಾಕ್ಷಿಯಾಗಿದೆ.

Advertisement

ಹೌದು, ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿ, ಹಳ್ಳಿಗಳ ಉದ್ಧಾರವೇ ದೇಶದ ಅಭಿವೃದ್ಧಿ ಎಂದು ನಂಬಿದ್ದರು. ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಬೇಕೆಂಬ ಆಶಯ ಅವರದ್ದಾಗಿತ್ತು. ಹೀಗಾಗಿ ಪ್ರತಿವರ್ಷ ಗ್ರಾಮೀಣ ಅಭಿವೃದ್ಧಿಯಲ್ಲಿ ವಿಶೇಷ ಆಸಕ್ತಿ ವಹಿಸಿ, ಕ್ರಿಯಾತ್ಮಕ ಕೆಲಸ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ, ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸುತ್ತದೆ. ಅಂತಹ ಪುರಸ್ಕಾರಕ್ಕೆ ಈ ಬಾರಿ ನೀರಲಕೇರಿ ಗ್ರಾ.ಪಂ. ಆಯ್ಕೆಯಾಗಿದೆ.

ಸ್ವಚ್ಛ ವಾಹಿನಿ: ಗಾಂಧಿಗ್ರಾಮ ಪುರಸ್ಕಾರಕ್ಕೆ ಸರ್ಕಾರ ತನ್ನದೇ ಆದ ಕೆಲವು ಮಾನದಂಡ ಹಾಕುತ್ತದೆ. ಅದರಲ್ಲಿ ಯಾವ ಪಂಚಾಯಿತಿ ನಿರ್ದಿಷ್ಟ ಗುರಿ ಸಾಧನೆ ಅಥವಾ ಪ್ರಗತಿ ಮಾಡಿರುತ್ತದೆಯೋ ಅಂತಹ ಗ್ರಾಪಂಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಪ್ರತಿ ತಾಲೂಕಿಗೆ ಒಂದು ಪಂಚಾಯಿತಿ ಆಯ್ಕೆ ಮಾಡುವುದು ಒಂದು ಷರತ್ತು. ಅದರಲ್ಲಿ ಈ ಬಾರಿ 9 ತಾಲೂಕು ವ್ಯಾಪ್ತಿಯಲ್ಲಿ 9 ಗ್ರಾ.ಪಂ. ಆಯ್ಕೆ ಮಾಡಲಾಗಿದೆ.

ಪುರಸ್ಕಾರಕ್ಕೆ ಆಯ್ಕೆಯಾದ ನೀರಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಐತಿಹಾಸಿಕ ಮುಚಖಂಡಿ ಗ್ರಾಮ ಕೂಡ ಬರುತ್ತದೆ.
ನಗರಕ್ಕೆ ಹೊಂದಿಕೊಂಡಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ, ನಗರ ವ್ಯಾಪ್ತಿಯಲ್ಲಿ ನಡೆದಂತೆ ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸ್ವತ್ಛ ವಾಹಿನಿ ವಾಹನದ ಮೂಲಕ ನಿತ್ಯವೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಸಲಾಗುತ್ತಿದೆ.

ಐತಿಹಾಸಿಕ ಕೆರೆ ಅಭಿವೃದ್ಧಿ: ನೀರಲಕೇರಿ ಗ್ರಾ.ಪಂ. ವ್ಯಾಪ್ತಿಯ ಮುಚಖಂಡಿ ಕೆರೆ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಬ್ರಿಟಿಷರ ಆಡಳಿತದ 1882ರಲ್ಲಿ ನಿರ್ಮಿಸಿದ ಸುಮಾರು 721 ಎಕರೆ ವಿಸ್ತಾರದ ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿದೆ. ಕೆರೆಯ ಹೂಳು ತಗೆಯುವ ಜತೆಗೆ ಗ್ರಾಮೀಣ ದುಡಿಯುವ ಜನರ ಕೈಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ಮುಚಖಂಡಿ ಕೆರೆ ಅಭಿವೃದ್ಧಿಗೆ ಗ್ರಾಪಂನಿಂದ ಒಟ್ಟು 46 ಲಕ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಸಲಾಗಿದೆ.

Advertisement

ವರ್ಗ-1ರಡಿ ತೆರಿಗೆ ವಸೂಲಿಯಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ 20 ಸಾವಿರ ಮಾನವ ದಿನ ಸೃಷ್ಟಿಸುವ ಗುರಿ ಇದ್ದು, ಅದರಲ್ಲಿ ಈಗಾಗಲೇ 15 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಸರ್ಕಾರದ ಪ್ರತಿ ಯೋಜನೆಯ ಅನುಷ್ಠಾನದಲ್ಲೂ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು, ಇಚ್ಛಾಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಪುರಸ್ಕಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮ ಗ್ರಾಪಂ ಆಯ್ಕೆಯಾಗಿರುವುದು ಖುಷಿ ತಂದಿದೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿ ಕೆಲಸ ಮಾಡಿದ್ದೇವ. ವರ್ಗ-1ರಡಿ ವಸೂಲಾತಿಯೂ ನಿಗದಿತ ಗುರಿ ಸಾಧಿಸಲಾಗಿದೆ. ಪ್ರತಿಯೊಂದೂ ಕಾರ್ಯಕ್ಕೂ ಗ್ರಾ.ಪಂ. ಅಧ್ಯಕ್ಷ ರಂಗಪ್ಪ  ಪೂಜಾರಿ, ಉಪಾಧ್ಯಕ್ಷರು, ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ರತ್ನಾ ಮೂಕಿ, ಪಿಡಿಒ, ನೀರಲಕೇರಿ ಗ್ರಾ.ಪಂ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next