Advertisement

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

05:37 PM Apr 15, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ ಯಾವುದೇ ಪಕ್ಷ ಗೆದ್ದರೂ ಅದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ದಾಖಲೆಯಾಗಲಿದೆ. ಹೌದು, ಕಳೆದ 1952ರಿಂದ ಇಲ್ಲಿಯ ವರೆಗೆ ಒಟ್ಟು 17 ಸಾರ್ವತ್ರಿಕ ಲೋಕಸಭೆ ಚುನಾವಣೆಗಳು ಬಾಗಲಕೋಟೆ ಕ್ಷೇತ್ರದಲ್ಲಿ ನಡೆದಿವೆ. ಸಧ್ಯ 18ನೇ ಸಾರ್ವತ್ರಿಕ ಲೋಕಸಭೆ
ಚುನಾವಣೆಗೆ ಈ ಕ್ಷೇತ್ರ ಸಜ್ಜಾಗಿದೆ.

Advertisement

ಎಸ್‌ಬಿಪಿ ದಾಖಲೆ ಮುರಿಯಲು ಪಣ: ಈ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆದ್ದ ದಾಖಲೆ, ಕಾಂಗ್ರೆಸ್‌ ಪಕ್ಷದ ಎಸ್‌.ಬಿ. ಪಾಟೀಲ
(ಸಂಗನಗೌಡ ಬಸನಗೌಡ ಪಾಟೀಲ) ಅವರ ಹೆಸರಿಗಿದೆ. ಆ ದಾಖಲೆ ಮುರಿದು, ಐದನೇಯ ಬಾರಿ ಗೆದ್ದು, ಹೊಸ ದಾಖಲೆ
ಬರೆಯಬೇಕೆಂಬುದು ಬಿಜೆಪಿಯ ಅಚಲ ಗುರಿ. ಅದಕ್ಕಾಗಿ ಬಿಜೆಪಿಯಲ್ಲಿನ ಹಲವು ಅಸಮಾಧಾನ, ಭಿನ್ನಮತ ಬದಿಗೊತ್ತಿ, ಮೋದಿ ನೋಡಿ ಮತ ಹಾಕಿ ಎಂಬ ಮನವಿ ಬಿಜೆಪಿಯಿಂದ ಕೇಳಿ ಬಂದಿವೆ.

ಎಸ್‌.ಬಿ. ಪಾಟೀಲರು, 5ನೇ ಬಾರಿಯೂ ಗೆಲ್ಲುವ ಅವಕಾಶ, ಆಗ ವಾತಾವರಣ ಇದ್ದರೂ, ಇಬ್ಭಾಗವಾಗಿದ್ದ ಕಾಂಗ್ರೆಸ್‌ನ ಒಂದು ಗುಂಪು, ಮಾಜಿ ಸಿಎಂ ವೀರೇಂದ್ರ ಪಾಟೀಲರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಕಾಂಗ್ರೆಸ್‌ ಹಾಕಿದ್ದ ವೇದಿಕೆಗೆ ಪಾಟೀಲರು ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದರು. ಹೊರಗಿನವರು ಬಂದು  ಲೋಕಸಭೆಗೆ ಆಯ್ಕೆಯಾಗಿದ್ದು ವೀರೇಂದ್ರ ಪಾಟೀಲರು ಮಾತ್ರ. 1980ರ ಲೋಕಸಭೆ ಚುನಾವಣೆಯಲ್ಲಿ ಜನತಾ ಪಾರ್ಟಿಯ (ಈಗಿನ ಬಿಜೆಪಿ) ಟಿ.ಎಂ. ಹುಂಡೇಕಾರ ವಿರುದ್ಧ 1,53,973 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್‌ (ಯು)ನಿಂದ ವಾಸಣ್ಣ ದೇಸಾಯಿ ಸ್ಪರ್ಧೆ ಮಾಡಿ, 64,132 ಮತ ಪಡೆದಿದ್ದರು.

ಗೆದ್ದವರೆಲ್ಲ ಒಂದೇ ಬಾರಿ: ಅದಾದ ಬಳಿಕ ನಡೆದ 1984ರಲ್ಲಿ ಕಾಂಗ್ರೆಸ್‌ನ ಎಚ್‌.ಬಿ. ಪಾಟೀಲ, 1989ರಲ್ಲಿ ಎಸ್‌.ಟಿ. ಪಾಟೀಲ, 1991ರಲ್ಲಿ ಇಡೀ ದೇಶವೇ ಗಮನ ಸೆಳೆಯುವ ಚುನಾವಣೆ ಈ ಕ್ಷೇತ್ರದಲ್ಲಿ ನಡೆದಿತ್ತು. ಆಗ ಕಾಂಗ್ರೆಸ್‌ನಿಂದ ಸಿದ್ದು ನ್ಯಾಮಗೌಡ, ಜನತಾ ದಳದಿಂದ ರಾಮಕೃಷ್ಣ ಹೆಗಡೆ, ಬಿಜೆಪಿಯಿಂದ ಪಿ.ಎಚ್‌. ಪೂಜಾರ ಸ್ಪರ್ಧೆ ಮಾಡಿದ್ದರು. ಮಾಜಿ ಸಿಎಂ ಎಸ್‌. ಬಂಗಾರಪ್ಪ ಅವರು, ಸ್ವತಃ ಬಾಗಲಕೋಟೆಯಲ್ಲಿದ್ದು, ರಾಮಕೃಷ್ಣ ಹೆಗಡೆ ಅವರ ಸೋಲಿಗೆ ರಣತಂತ್ರ ರೂಪಿಸಿ,
ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಸಿದ್ದು ನ್ಯಾಮಗೌಡರ ಗೆಲ್ಲಿಸಲು ತನು-ಮನ-ಧನದ ಶಕ್ತಿ ಹಾಕಿದ್ದರು.

1996ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸಂಸದರ ಆಯ್ಕೆಯ ದಾಖಲೆಯನ್ನು ಎಚ್‌.ವೈ. ಮೇಟಿ ಬರೆದಿದ್ದರು. ಆಗ ಕಾಂಗ್ರೆಸ್‌ನ ಹಾಲಿ ಸಂಸದ ಸಿದ್ದು ನ್ಯಾಮಗೌಡ ಅವರನ್ನು ಮೇಟಿ ಸೋಲಿಸಿದ್ದರು.

Advertisement

ಬಿಜೆಪಿಯಿಂದ ವೀರಣ್ಣ ಚರಂತಿಮಠ ಆಗ ಸ್ಪರ್ಧೆ ಮಾಡಿದ್ದರು. 1998ರಲ್ಲಿ ಲೋಕಶಕ್ತಿಯಿಂದ ಅಜಯಕುಮಾರ ಸರನಾಯಕ, 1999ರಲ್ಲಿ ಕಾಂಗ್ರೆಸ್‌ ನಿಂದ ಆರ್‌.ಎಸ್‌. ಪಾಟೀಲ ಇಲ್ಲಿಂದ ಗೆದ್ದರು. ಆದರೆ, 1980ರಿಂದ 2004ರ ವರೆಗೂ ಗೆದ್ದವರು, 2ನೇ ಅವಧಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಕೇವಲ ಒಂದೊಂದು ಬಾರಿ ಗೆದ್ದು ಖುಷಿ ಕಂಡವರಿದ್ದಾರೆ.

ಹೊಸ ದಾಖಲೆಗೆ ಸಜ್ಜು: ಕಳೆದ 2004ರಿಂದ ಸತತ ನಾಲ್ಕು ಬಾರಿ ಗೆದ್ದ ದಾಖಲೆ ಬರೆದ ಪಿ.ಸಿ. ಗದ್ದಿಗೌಡರ, 5ನೇ ಬಾರಿ ಗೆಲುವಿನ ದಾಖಲೆ ಬರೆಯಲು ಸಜ್ಜಾಗಿದ್ದರೆ, ಇತ್ತ ಬಾಗಲಕೋಟೆ ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸಂಸದರನ್ನಾಗಿ ಮಾಡಿದ ದಾಖಲೆ ಬರೆಯಲು ಕಾಂಗ್ರೆಸ್‌ ರಣತಂತ್ರ ಹಣೆಯುತ್ತಿದೆ.

ಜಿಲ್ಲೆಯಲ್ಲಿ 2ನೇ ಬಾರಿಗೆ ಕಾಂಗ್ರೆಸ್‌ ಮಹಿಳೆಗೆ ಅವಕಾಶ ಕೊಟ್ಟಿದೆ. 2019ರ ವರೆಗೂ ಲೋಕಸಭೆ ಕ್ಷೇತ್ರಕ್ಕೆ ಮಹಿಳೆಗೆ
ಅವಕಾಶವೇ ಸಿಕ್ಕಿರಲಿಲ್ಲ. ಕಳೆದ ಬಾರಿ ವೀಣಾ ಕಾಶಪ್ಪನವರ ಸ್ಪರ್ಧೆ ಮಾಡಿ, 4.97 ಲಕ್ಷ ಮತ ಪಡೆದಿದ್ದರು. ಇದೀಗ ಅಖಂಡ ವಿಜಯಪುರ ಜಿಲ್ಲೆಯ ಸಂಯುಕ್ತಾ ಪಾಟೀಲ ಅಭ್ಯರ್ಥಿಯಾಗಿದ್ದಾರೆ. 5ನೇ ಬಾರಿ ಗೆಲ್ಲಬೇಕೆಂಬ ಬಿಜೆಪಿ ಕನಸು ನನಸಾಗುತ್ತೋ, ಮೊದಲ ಮಹಿಳಾ ಸಂಸದೆ ನೀಡಬೇಕೆಂಬ ಕಾಂಗ್ರೆಸ್‌ ರಣತಂತ್ರ ಯಶಸ್ವಿಯಾಗುತ್ತಾ ಕಾದು ನೋಡಬೇಕು.

ಬಾಗಲಕೋಟೆ ಕ್ಷೇತ್ರ ಯಾವಾಗ್‌ ಆಯ್ತು?
1962ರ ವರೆಗೂ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರವಾಗಿದ್ದ ಈ ಕ್ಷೇತ್ರ, 1967ರಿಂದ ಬಾಗಲಕೋಟೆ ಪ್ರತ್ಯೇಕ ಕ್ಷೇತ್ರವಾಗಿ
ರೂಪುಗೊಂಡಿದೆ. ಆಗ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಗೆ, ಗದಗ ಜಿಲ್ಲೆಯ ರೋಣ ವಿಧಾನಸಭೆ ಕ್ಷೇತ್ರವೂ ಒಳಗೊಂಡಿತ್ತು. ಗದಗ ಜಿಲ್ಲೆ, ಮೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಹಂಚಿಕೆಯಾಗಿತ್ತು. ಅಲ್ಲಿಯ ವರೆಗೂ ಧಾರವಾಡ ಉತ್ತರ ಕ್ಷೇತ್ರದಲ್ಲಿದ್ದ ನರಗುಂದ ಕ್ಷೇತ್ರ, ಬಾಗಲಕೋಟೆಗೆ, ರೋಣ ಹಾಗೂ ಗದಗ ಜಿಲ್ಲೆಯ ಉಳಿದ ಕ್ಷೇತ್ರಗಳು ಒಳಗೊಂಡು ಹಾವೇರಿ-ಗದಗ ಪ್ರತ್ಯೇಕ ಕ್ಷೇತ್ರವಾಗಿ ರೂಪುಗೊಂಡವು.

■ ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next