Advertisement

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!

01:36 AM May 03, 2024 | Team Udayavani |

ಬಾಗಲಕೋಟೆ: ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪ ಕಲೆಯ ಸ್ಮಾರಕಗಳ ಮೂಲಕ ವಿಶ್ವದ ಗಮನ ಸೆಳೆದ ಬಾಗಲಕೋಟೆ ಜಿಲ್ಲೆ 18ನೇ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ. ಈ ಬಾರಿ ಯಾರೇ ಗೆದ್ದರೂ ರಾಜಕೀಯ ಇತಿಹಾಸದಲ್ಲಿ ಚಾರಿತ್ರಿಕ ದಾಖಲೆ ಸೇರಲಿದೆ.

Advertisement

ಈ ಕ್ಷೇತ್ರದಿಂದ ಸತತ 4 ಬಾರಿ ಗೆದ್ದ ದಾಖಲೆ ಕಾಂಗ್ರೆಸ್‌ನ ದಿ| ಎಸ್‌.ಬಿ. ಪಾಟೀಲರಿಗಿದೆ. ಆ ದಾಖಲೆ ಮುರಿದು ಐದನೇ ಬಾರಿ ಗೆದ್ದು ಹೊಸ ದಾಖಲೆ ಬರೆಯುವುದು ಹಾಲಿ ಸಂಸದ ಗದ್ದಿಗೌಡರ ಹಂಬಲ. ಇನ್ನೊಂದೆಡೆ ತಂದೆ, ಸಚಿವ ಶಿವಾನಂದ ಪಾಟೀಲರ ರಾಜಕೀಯ ಚಾಣಕ್ಷéತನದ ಅನುಭವದ ಬಲ ದೊಂದಿಗೆ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಾ, ಜಾಣತನದ ಭಾಷಣ ಮೂಲಕ ಕ್ಷೇತ್ರದ ಜನರ ಗಮನ ಸೆಳೆಯುತ್ತಿರುವ ಕಾಂಗ್ರೆಸ್‌ನ ಸಂಯುಕ್ತಾ ಪಾಟೀಲ ಅವರು ಲೋಕಸಭೆ ಪ್ರವೇಶಿಸಿ ಬಾಗಲಕೋಟೆ ಕ್ಷೇತ್ರದ ಮೊದಲ ಸಂಸದೆ ಎಂಬ ರಾಜಕೀಯ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದಾರೆ.

ಫಸ್ಟ್‌ ಆ್ಯಂಡ್‌ ಲಾಸ್ಟ್‌: ಈ ಕ್ಷೇತ್ರ ಈವರೆಗೆ 17 ಸಾರ್ವತ್ರಿಕ ಚುನಾವಣೆ ಕಂಡಿದೆ. ಕಾಂಗ್ರೆಸ್‌ ಅತೀಹೆಚ್ಚು ಅಂದರೆ 11 ಬಾರಿ, ಬಿಜೆಪಿ ನಾಲ್ಕು ಬಾರಿ ಹಾಗೂ ಲೋಕಶಕ್ತಿ ಮತ್ತು ಜನತಾದಳ ತಲಾ ಒಂದು ಬಾರಿ ಗೆದ್ದಿವೆ. ಈ ಮಧ್ಯೆ 1992ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಹೊರಗಿನವರು’ ಅಸ್ತ್ರ ಬಳಸಿ ಸೋಲಿಸಿದ ಖ್ಯಾತಿ ಈ ಕ್ಷೇತ್ರಕ್ಕಿದೆ.

ಬಿಜೆಪಿಯ ಗದ್ದಿಗೌಡರು, ಇದು ನನ್ನ ಕೊನೆಯ ಚುನಾವಣೆ ಎಂದು ಪ್ರಚಾರ ನಡೆಸುತ್ತಾ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದರೆ; ಇದು ನನ್ನ ಫಸ್ಟ್‌ ಚುನಾವಣೆ, ನನಗೆ ಒಮ್ಮೆ ಅವಕಾಶ ಕೊಟ್ಟು ನೋಡಿ ಎಂದು ಕಾಂಗ್ರೆಸ್‌ನ ಸಂಯುಕ್ತಾ ಪಾಟೀಲ ಮತದಾರರ ಸೆಳೆಯುವ ಪ್ರಯತ್ನದಲ್ಲಿದ್ದಾರೆ.

ಗದಗ ಜಿಲ್ಲೆಯ ನರಗುಂದ ಸಹಿತ ಎಂಟು ವಿಧಾನಸಭೆ ಕ್ಷೇತ್ರ ಒಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು ಐವರು ಕಾಂಗ್ರೆಸ್‌, ಮೂವರು ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‌ಗೆ ಸಚಿವ ಸಹಿತ ಐವರು ಶಾಸಕರು, ಸರಕಾರದ ಗ್ಯಾರಂಟಿ ಯೋಜನೆಗಳ ಬಲವಿದೆ. ಜತೆಗೆ ಕಾಂಗ್ರೆಸ್‌ ಸಾಂಪ್ರದಾಯಿಕ ಅಹಿಂದ ಮತಗಳ ಮೇಲೂ ಕಣ್ಣಿಟ್ಟು ಚುನಾವಣೆ ರಣತಂತ್ರ ಹಣೆದಿದೆ.

Advertisement

ಐದು ವರ್ಷಗಳಿಂದ ಚುನಾವಣೆಗೆ ತಯಾರಿ ಮಾಡಿಕೊಂಡು ಕೊನೆಗೆ ಟಿಕೆಟ್‌ ವಂಚಿತರಾದ ವೀಣಾ ಕಾಶಪ್ಪನವರ, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜತೆಗೆ ಒಮ್ಮೆ ಕಾಣಿಸಿ ಕೊಂಡಿದ್ದಾರಾದರೂ ಒಂದಿಷ್ಟು ಕಾರ್ಯಕರ್ತರಲ್ಲಿ ಅಸಮಾಧಾನವಂತೂ ಇದೆ ಎನ್ನಲಾಗುತ್ತಿದೆ.
ಇನ್ನು ಬಿಜೆಪಿ ಮೂವರು ಶಾಸಕರು, ಮೋದಿಯ ಅಲೆ, ಜಿಲ್ಲೆಯಲ್ಲಿ ಗಟ್ಟಿಯಾಗಿರುವ ಹಿಂದುತ್ವ ಸಂಘಟನೆಯ ಬಲ ನೆಚ್ಚಿಕೊಂಡಿದೆ. ಜತೆಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಲ್ಲಿ, ಹೊರಗಿನವರನ್ನು ಕರೆಸಿ ಒತ್ತಾಯಪೂರ್ವಕವಾಗಿ ಕಾರ್ಯ ಕರ್ತರ ಮೇಲೆ ಹಾಕಿದೆ ಎಂಬ ಅಸ್ತ್ರವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಮೋದಿ ಅಲೆ, ಸಚಿವ ಶಿವಾನಂದ ಪಾಟೀಲರ ರಾಜಕೀಯ ಚಾಣಾಕ್ಷ ನಡೆಗಳ ಮಧ್ಯೆ ಚುನಾವಣೆ ರಣತಂತ್ರ, ಜಿದ್ದಾಜಿದ್ದಿನಿಂದ ನಡೆದಿದೆ.

ಲಿಂಗಾಯತ-ಅಹಿಂದ ಲೆಕ್ಕಾಚಾರ: ಒಟ್ಟು 18,06,183 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಲಿಂಗಾಯತರು ಪ್ರಾಬಲ್ಯ ಹೊಂದಿದ್ದಾರೆ. ಆದರೆ ಲಿಂಗಾಯತರು ಒಗ್ಗಟ್ಟಾದರೆ ಮಾತ್ರ ಮತಗಳ ಕ್ರೋಡೀಕರಣ ಸಾಧ್ಯ. ಇಲ್ಲಿ ಲಿಂಗಾಯತರ ನ್ನು ವಿಭಜಿಸಿ ರಾಜಕೀಯ ಮೇಲಾಟ ನಡೆಯುತ್ತ ಬಂದಿದೆ. ಅಹಿಂದ ವರ್ಗದಡಿ ಅತಿ ಹೆಚ್ಚು ಕುರುಬ, ವಾಲ್ಮೀಕಿ, ಮುಸ್ಲಿಂ, ಎಸ್‌ಸಿ-ಎಸ್‌ಟಿ ಮತಗಳೂ ನಿರ್ಣಾಯಕವಾಗಿವೆ. ಲಿಂಗಾಯತ ಉಪ ಜಾತಿ ಗಾಣಿಗ ವರ್ಗಕ್ಕೆ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಸೇರಿದ್ದರೆ, ಪಂಚಮಸಾಲಿ ಸಮುದಾಯಕ್ಕೆ ಸೇರಿದ ಸಂಯುಕ್ತಾ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಎರಡೂ ಪಕ್ಷಗಳು ಲಿಂಗಾಯತರಿಗೇ ಮಣೆ ಹಾಕಿರುವುದು ರಾಜಕೀಯ ಪ್ರಾಬಲ್ಯಕ್ಕೆ ಅನಿವಾರ್ಯ ಕೂಡ.

ಪಿ.ಸಿ. ಗದ್ದಿಗೌಡರ ಬಿಜೆಪಿ ಅಭ್ಯರ್ಥಿ ಸಾಮರ್ಥ್ಯ
ಗಟ್ಟಿಯಾದ ಬಿಜೆಪಿ ಸಂಘಟನೆ ಬಲ.
ಮೋದಿ ಅಲೆ ; ಪಕ್ಷಾತೀತ ಸಂಪರ್ಕದ ವ್ಯಕ್ತಿತ್ವ.
ಅಭಿವೃದ್ಧಿ ಕಾರ್ಯಗಳ ಸಾಧನೆ.

ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ನನ್ನದೇ ಆದ ಪರಿಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ 10 ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಕೋಟಿಗೂ ಅಧಿಕ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ದೇಶಕ್ಕಾಗಿ ಮೋದಿ, ಬಾಗಲಕೋಟೆಗಾಗಿ ಬಿಜೆಪಿ ಎಂಬ ಗುರಿ ಮತದಾರರಲ್ಲಿದೆ.

ಸಂಯುಕ್ತಾ ಪಾಟೀಲ ಕಾಂಗ್ರೆಸ್‌ ಅಭ್ಯರ್ಥಿ ಸಾಮರ್ಥ್ಯ
ಸಚಿವ-ತಂದೆಯ ರಾಜಕೀಯ ಬಲ.
ಸರಕಾರದ ಗ್ಯಾರಂಟಿ ಯೋಜನೆಗಳ ಬಲ
ವಿದ್ಯಾವಂತೆ-ಕ್ಷೇತ್ರದ ಬಗ್ಗೆ ಹಲವು ಕನಸು.

ಕಳೆದ 20 ವರ್ಷಗಳಿಂದ ಒಬ್ಬರ ಕೈಗೆ ಅಧಿಕಾರ ಕೊಟ್ಟು ಜನ ಬೇಸತ್ತಿದ್ದಾರೆ. ಕ್ಷೇತ್ರದ ಜನ ಹೊಸಬರಿಗಾಗಿ ತುದಿಗಾಲಲ್ಲಿದ್ದಾರೆ. ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ತಲುಪಿದೆ. ಪ್ರಚಾರಕ್ಕೆ ಹೋದಲ್ಲೆಲ್ಲ, ನೀವೇ ಗೆಲ್ಲಬೇಕ್ರಿ ಅಂತಿದ್ದಾರೆ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next