Advertisement

Bagalkote: ಹೆಣ್ಣು ಶಾಪವಲ್ಲ, ಸೌಭಾಗ್ಯವತಿ: ದ್ಯಾವಪ್ಪ

05:49 PM Oct 12, 2023 | Team Udayavani |

ಬಾಗಲಕೋಟೆ: ಈ ಹಿಂದೆ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ, ಶಾಪವೆಂದು ತಿಳಿಯುವ ಕಾಲವಿತ್ತು. ಇಂದು ಹೆಣ್ಣು ಶಾಪವಲ್ಲ, ಸೌಭಾಗ್ಯವತಿಯಾಗಿ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾಳೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್‌.ಬಿ ಹೇಳಿದರು.

Advertisement

ವಿದ್ಯಾಗಿರಿಯ ಬಿವಿವಿ ಸಂಘದ ಕೋಟಾಕ್‌ ಮಹೇಂದ್ರ ಆರ್‌ಸೆಟ್‌ ಸಂಸ್ಥೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಅಧ್ಯಯನ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳ ಮೇಲಿರುವ ತಾತ್ಸಾರವನ್ನು ಗಮನಿಸಿದ ಸರಕಾರ ಹೆಣ್ಣು ಭ್ರೂಣ ಪತ್ತೆ ಕಾರ್ಯ ನಡೆಸಿ ಕ್ರಮ ಜರುಗಿಸಿದ್ದರಿಂದ ಭ್ರೂಣ ಪತ್ತೆ ಅಪರಾಧ ಎಂಬುದು ತಿಳಿಯಿತು. ಆದರೆ, ಭ್ರೂಣ ಪತ್ತೆ ಮಾಡಿ ಅಪರಾಧಿಯಾದ ವೈದ್ಯರಿಗೆ ಇದುವರೆಗೂ ಯಾರೊಬ್ಬರಿಗೂ ಶಿಕ್ಷೆಯಾಗದಿರುವುದು ದುರಂತವೆಂದರು. ಹೆಣ್ಣು ಗಂಡು ಎಂಬ ಲಿಂಗ ತಾರತಮ್ಯ ಬೇಡ ಎಂದರು.
ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಮಾತನಾಡಿ, ಹೆಣ್ಣು ಮಗುವಿಗೆ ಪಾಲಕರಾದವರು ಕಾಳಜಿ ವಹಿಸಿದಲ್ಲಿ ಕುಟುಂಬಕ್ಕೂ ಸಮಾಜಕ್ಕೂ ಉತ್ತಮ ಹೆಸರು ತರಬಲ್ಲಳು ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಇಂದು ನಾವೆಲ್ಲ ಹೇಳುತ್ತೇವೆ, ಆದರೆ ಮಾಡುತ್ತಿಲ್ಲ. ಹೆಣ್ಣಿಗೆ ದೇವತೆ ಸ್ಥಾನ ಮಾನ ಕೊಡುವುದು ಬೇಡ. ಸಮಾನತೆಯಿಂದ ಕಂಡರೆ ಸಾಕು. ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗಿದ್ದು, ಪ್ರಕೃತಿಗೆ ಬೇಧವಿಲ್ಲ. ಆದರೆ ಇಂದು ಕೃತಕ ಬೇದವಾಗಿದೆ ಎಂದು ತಿಳಿಸಿದರು. ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಹೆಣ್ಣು ಮಕ್ಕಳು ಸಮಾನ ಸ್ಥಾನಮಾನ ಪಡೆದಿದ್ದು, ವಿದ್ಯಾರ್ಥಿ ದಿಶೆಯಲ್ಲಿ ಗಮನಿಸಿದಾಗ ಎಸ್‌ಎಸ್‌ ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೆ ಮುಂಚೂಣಿಯಲ್ಲಿದ್ದಾರೆ.

ಇದಲ್ಲದೇ ಕ್ರೀಡೆ, ಸರ್ಕಾರಿ ಉದ್ಯೋಗ, ಚಾಲಕರಾಗಿಯೂ ಕೂಡಾ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಹೆಣ್ಣು ಮಕ್ಕಳಿಗೆ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಗತಿ ಹೊಂದಲು ಶೇ. 33ರಷ್ಟು ಮೀಸಲಾತಿ ಘೋಷಿಸಿದೆ. ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 53 ರಷ್ಟು ಮಹಿಳಾ ಕೂಲಿ ಕಾರ್ಮಿಕರಿದ್ದಾರೆ ಎಂದರು.

ಮಾಜಿ ದೇವದಾಸಿಯರು ಸಾಕಷ್ಟು ಬದಲಾವಣೆಯಾಗಿ ಸ್ವತಂತ್ರ ಉದ್ಯೋಗ ಮಾಡಿ ಬದುಕುತ್ತಿದ್ದಾರೆ. ಅವರನ್ನು ಮಾಜಿ ದೇವದಾಸಿ ಎಂಬುದರ ಬದಲು ವಿಶೇಷ ಮಹಿಳೆ ಎಂದು ಕರೆಯಬೇಕಾಗಿದೆ. ಕರಾಟೆಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಬಾಲಕಿಯನ್ನು ಕಂಡು ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿತಿರುವುದು ಸಂತಸ ತಂದಿದೆ ಎಂದು ಹೇಳಿದರು.

Advertisement

ಇದೇ ವೇಳೆ ಕರಾಟೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಹೆಣ್ಣು ಮಕ್ಕಳನ್ನು ಸನ್ಮಾನಿಸಲಾಯಿತು. ಅಲ್ಲದೇ ಹೆಣ್ಣು ಮಕ್ಕಳ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು.

ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಜಿಲ್ಲಾ ಅಧಿ ಕಾರಿ ಗೌರಮ್ಮ ಸಂಕದ, ಕೊಟೆಕ್‌ ಮಹೇಂದ್ರ ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಶರಣಬಸಪ್ಪ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next