ಬಾಗಲಕೋಟೆ: ರಾಜ್ಯದ 23 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ, ದೇಶದ 2ನೇ ಅತಿದೊಡ್ಡ ತೋಟಗಾರಿಕೆ ವಿವಿ ಎಂಬ ಖ್ಯಾತಿ ಪಡೆದ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ಘಟಪ್ರಭಾ ನದಿ ಪಕ್ಕದಲ್ಲೇ ಇದೆ. ವಿವಿ ಆರಂಭಗೊಂಡು ಬರೋಬ್ಬರಿ 15 ವರ್ಷ ಕಳೆದರೂ ನೀರಿನ ವಿಷಯದಲ್ಲಿ ಬರ ಎದುರಿಸುತ್ತಿತ್ತು. ಇದೀಗ ವಿವಿಗಿದ್ದ ನೀರಿನ ಬರ ದೂರಾಗಿದೆ.
ಹೌದು, ತೋಟಗಾರಿಕೆ ವಿವಿ ಆರಂಭಗೊಂಡು 15 ವರ್ಷಗಳಾಗುತ್ತ ಬಂದಿದೆ. ಆದರೆ, ಶಾಶ್ವತ ನೀರಿನ ಯೋಜನೆ ಇರಲಿಲ್ಲ. ವಿವಿ ಪ್ರಧಾನ ಕಚೇರಿ ಆವರಣದಲ್ಲಿ ಸಾಕಷ್ಟು ಕೊಳವೆ ಬಾವಿ ಕೊರೆಸಿದರೂ ನೀರಿನ ಲಭ್ಯತೆ ಅಷ್ಟೊಂದು ಇರಲಿಲ್ಲ. ಹೀಗಾಗಿ ವಿವಿಯಲ್ಲಿ ಕೈಗೊಳ್ಳುವ ಸಂಶೋಧನೆ, ಕೃಷಿ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳಿಗೆ ಸಮಸ್ಯೆ ಎದುರಾಗುತ್ತಿತ್ತು. ಇದಕ್ಕಾಗಿ ಶಾಶ್ವತ ಪರಿಹಾರ ಕೈಗೊಳ್ಳಿ ಎಂದು ಕೇಳಿಕೊಂಡರೂ, ಈ ವರೆಗೂ ಅದು ಕೂಡಿ ಬಂದಿರಲಿಲ್ಲ. ಇದೀಗ ರಾಜ್ಯ ಸರ್ಕಾರ, 9.95 ಕೋಟಿ ವೆಚ್ಚದ ಶಾಶ್ವತ ನೀರು ಪೂರೈಕೆ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಗೆ ಸೋಮವಾರ ಬಾಗಲಕೋಟೆಯ ಶಾಸಕ ಡಾ| ವೀರಣ್ಣ ಚರಂತಿಮಠ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, 2008ರಲ್ಲಿ ಕಾರ್ಯ ಪ್ರಾರಂಭಿಸಿ ತೋವಿವಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ಸಪೋಟ, ಸೇರಿದಂತೆ ಅನೇಕ ತರಕಾರಿ ಬೆಳೆಗಳನ್ನು ಬೆಳೆಸಲಾಗುತ್ತಿದ್ದು, ಈ ಎಲ್ಲ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯದೇ ತೊಂದರೆಯಾಗುತ್ತಿತ್ತು. ಕೇಲವ ಮಳೆಯಾಶ್ರಿತವಾಗಿದ್ದು, ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತೋವಿವಿಗೆ ಶಾಶ್ವತ ನೀರಿನ ಸೌಲಭ್ಯ ಯೋಜನೆ ಸಿದ್ಧಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ಯೋಜನೆ 9.95 ಕೋಟಿ ರೂ.ಗಳಾಗಿದ್ದು, ತಾಲೂಕಿನ ಆನದಿನ್ನಿ ಗ್ರಾಮದ ಹತ್ತಿರದ ಘಟಪ್ರಭಾ ನದಿಯಿಂದ ನೀರಿನ ಮೂಲ ದೊರೆಯುತ್ತಿದ್ದು, 1.36 ದಶಲಕ್ಷ ಘನ ಮೀಟರ್ ನೀರನ್ನು ಬಳಸಿಕೊಂಡು ಅಂದಾಜು 8495 ಮೀಟರ್‌ಗಳಷ್ಟು ಏರು ಕೊಳವಿಯ ಮೂಲಕ 406 ಮೀಮೀ ಹಾಗೂ 4 ಮಿಮಿ ದಪ್ಪದ ಪೈಪ್‌ಗ್ಳನ್ನು ಒಳವಡಿಸಲಾಗುತ್ತಿದೆ. ನೀರನ್ನು ಎತ್ತಲು 130 ಎಚ್‌ಪಿದಷ್ಟು ಸಾಮರ್ಥ್ಯವುಳ್ಳ ಮೋಟಾರ್ ಬಳಸಲಾಗುತ್ತಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಸೌಲಭ್ಯದ ಜತೆಗೆ ನವನಗರದ 5 ಸೆಕ್ಟರ್‌ಗಳನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ್ದು, ಈ 5 ಸೆಕ್ಟರಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಈ ಯೋಜನೆಯಿಂದ ವಿಶ್ವವಿದ್ಯಾಲಯಕ್ಕೆ 11.99 ಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದ್ದು, ಇದರಿಂದ ಬೇಸಿಗೆ ಕಾಲದಲ್ಲಿಯು ಕೂಡಾ ನೀರಿನ ಭವಣೆಯಾಗದಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ತೋಟಗಾರಿಕೆ ವಿವಿಯ ಪ್ರಾಧ್ಯಾಪಕರೂ ಯೋಜನೆಯ ನೋಡಲ್ ಅಧಿಕಾರಿ ಡಾ|ವಸಂತ ಗಾಣಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ವಿವರಣೆ ನೀಡಿದರು. ವಿವಿಯ ಸಂಶೋಧನ ನಿರ್ದೇಶಕ ಡಾ| ಮಹೇಶ್ವರಪ್ಪ, ಡೀನ್ ಡಾ| ರವೀಂದ್ರ ಮುಳಗೆ, ಆಸ್ತಿ ಅಧಿಕಾರಿ ವಿಜಯ ಭಾಸ್ಕರ ಭಜಂತ್ರಿ, ಡಾ|ಹಿಪ್ಪರಗಿ, ಪ್ರಕಾಶ ನಾಯಕ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಎನ್.ಕೆ.ಹುಬ್ಬಳ್ಳಿ, ಗುತ್ತಿಗೆದಾರ ಶಿವನಗೌಡ ಪಾಟೀಲ ಪಾಲ್ಗೊಂಡಿದ್ದರು.