ಬಾಗಲಕೋಟೆ: ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ನಗರದ ಶಾಂತಿ ಆಸ್ಪತ್ರೆ ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಮಗು ಸಂಪೂರ್ಣ ಆರೋಗ್ಯವಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಅನುಶ್ರಿ ಎಂಬ ಮೂರುವರೆ ವರ್ಷದ ಬಾಲಕಿ ತಂದೆ-ತಾಯಿಯೊಂದಿಗೆ ಕೆಲವು ದಿನಗಳ ಹಿಂದೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಳು. ಬೀಳುವಾಗ ಪಕ್ಕದಲ್ಲಿದ್ದ ಮರದ ಕೊಂಬೆಯೊಂದು ಆಕೆಯ ಹೊಟ್ಟೆಗೆ ಚುಚ್ಚಿ ಗಂಭೀರ ಗಾಯವಾಗಿತ್ತು.ಆಕೆಯ ಹೊಟ್ಟೆಯಿಂದ ಸಣ್ಣಕರುಳು ಶೇ.60ರಷ್ಟು ಹೊರಕ್ಕೆ ಬಂದು ಮಗು ತುಂಬಾ ಗಾಬರಿಯಾಗಿತ್ತು.
ಕೂಡಲೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಪಾಲಕರು ನಗರದ ಶಾಂತಿ ಆಸ್ಪತ್ರೆಗೆ ಕರೆ ತಂದರು. ಮಕ್ಕಳ ಶಸ್ತ್ರಚಿಕಿತ್ಸಕ ಡಾ|ರಮೇಶ ಹಟ್ಟಿ ಕೂಡಲೇ ಅಗತ್ಯ ಶಸ್ತ್ರಚಿಕಿತ್ಸೆ ನಡೆಸಿದರು. ಮರುದಿನ ಸಿಟಿ ಸ್ಕ್ಯಾನ್ ಮೂಲಕ ಮಗುವಿನ ದೇಹದೊಳಗಿನ ಬೇರೆ ಯಾವುದೇ ಭಾಗಕ್ಕೆಗಾಯವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮೂರ್‍ನಾಲ್ಕು ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರು. ಸದ್ಯ ಮಗು ಗುಣಮುಖವಾಗಿದ್ದು, ಮರುಜೀವ ನೀಡಿದ ವೈದ್ಯರ ಕಳಕಳಿಗೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರವಳಿಕೆ ತಜ್ಞ ಡಾ| ಅನಿಲ್ ಜಿ., ಡಾ| ಸುನೀಲ ಪಾಟೀಲ ಮುಂತಾದ ವೈದ್ಯರು ಸಹಕರಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕರೆ ತಂದಾಗ ಮಧ್ಯರಾತ್ರಿಯಾಗಿತ್ತು. ನಮ್ಮ ಆಸ್ಪತ್ರೆ ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಅಪಾಯದಿಂದ ಪಾರು ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮವಿದ್ದರೂ ಮಕ್ಕಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಪಾಲಕರ ಮೊದಲ ಆದ್ಯತೆ ಆಗಬೇಕು.
*ಡಾ|ಆರ್.ಟಿ. ಪಾಟೀಲ, ಮುಖ್ಯ ವೈದ್ಯರು,
ಶಾಂತಿಆಸ್ಪತ್ರೆ, ಬಾಗಲಕೋಟ
ಮಗುವನ್ನು ಆಸ್ಪತ್ರೆಗೆ ಕರೆ ತಂದಾಗ ಹೊಟ್ಟೆ ಬಳಿ 6ರಿಂದ 8 ಸೆಂ.ಮೀ.ನಷ್ಟು ಗಾಯವಾಗಿ ಸಣ್ಣ ಕರುಳು ಹೊರ ಬಂದಿತ್ತು. ಮೂತ್ರ ಚೀಲಕ್ಕೂ ಗಾಯವಾಗಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಎಲ್ಲವನ್ನೂ ಸರಿಪಡಿಸಲಾಗಿದ್ದು, ಮಗು ಆರೋಗ್ಯವಾಗಿದೆ.
*ಡಾ| ರಮೇಶ ಹಟ್ಟಿ,
ಮಕ್ಕಳ ಶಸ್ತ್ರಚಿಕಿತ್ಸಕ, ಬಾಗಲಕೋಟೆ