ಬಾಗಲಕೋಟೆ: ರಾಜ್ಯದಲ್ಲಿಯೇ ಪ್ರಥಮವಾಗಿ ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯಗಳನ್ನು ನಮ್ಮ ಬ್ಯಾಂಕಿಗೆ ಅಳವಡಿಸಲಾಗಿದೆ. ಬ್ಯಾಂಕಿನ ಆರ್ಥಿಕ ಪ್ರಗತಿಗಾಗಿ ದೈನಂದಿನ ಕಾರ್ಯಚಟುವಟಿಕೆಗಳನ್ನು ಸಿಬ್ಬಂದಿಗಳು ದಕ್ಷತೆಯಿಂದ ಹಾಗೂ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮೂರುದಿನಗಳ ಕಾಲ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಸಿಬ್ಬಂದಿಗಳು ಮೇಲಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಂಡು, ಅವರು ಹೇಳುವ ಕೆಲಸವನ್ನು ನಿರ್ವಹಿಸಬೇಕು. ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಬಂಡಿಯ 2 ಗಾಲಿಗಳು ಇದ್ದಂತೆ. ಆಡಳಿತ ಮಂಡಳಿ ನಿರ್ದೇಶಿಸುವ ಎಲ್ಲ ಕೆಲಸ ಕಾರ್ಯಗಳನ್ನು ಶ್ರದ್ಧೆ ಹಾಗೂ ವಿಶ್ವಾಸದಿಂದ ಮಾಡಬೇಕು. ಬ್ಯಾಂಕಿನ ಗೌಪ್ಯತೆ ಕಾಪಾಡಬೇಕು. ಮೂರು ದಿನಗಳ ತರಬೇತಿ ಶಿಬಿರದಲ್ಲಿ, ಬ್ಯಾಂಕಿನಲ್ಲಿ ಖಾತೆ ಪ್ರಾರಂಭ, ಕೆವೈಸಿ, ಸಾಲದ ಅರ್ಜಿ ತಯಾರಿಸುವದು, ದಾವಾ ಪಂಚಾಯ್ತ, ಅಮಲ್ಜಾರಿ ಪ್ರತಿಕ್ರಿಯೆ, ಸಾಲ ವಸೂಲಿ ಮುಂತಾದವುಗಳ ಕುರಿತು ತಿಳಿಸಲಾಗುವದು.
ಸಿಬ್ಬಂದಿಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕು. ಜೊತೆಗೆ ಕಾಲ ಕಾಲಕ್ಕೆ ಬದಲಾಗುವ ಕಾಯ್ದೆ ನಿಯಮಗಳನ್ನು ತಿಳಿದುಕೊಳ್ಳುವದು ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದರು. ತರಬೇತಿ ಶಿಬಿರದಲ್ಲಿ ಅಧಿಕಾರಿಗಳಾದ ಎಸ್.ಬಿ. ಬಾದಾಮಿ, ಪಿ.ಎನ್. ಹಳ್ಳಿಕೇರಿ, ವಿ.ಎಂ. ಹಿರೇಮಠ. ಜ್ಯೋತಿ ನಾವಲಗಿ, ಕೆ.ಎಲ್. ಲೆಂಕೆಪ್ಪನವರ, ಎಂ.ಎನ್. ಮುಕ್ಕಣ್ಣವರ, ಸುರೇಶ ನಾವಲಗಿ, ಎಂ.ವಿ. ಹಣಮಶೆಟ್ಟಿ, ಎನ್.ಎಂ. ಫಕೀರಪುರ, ಅರವಿಂದ ಯಲಿಗಾರ ಮುಂತಾದವರು ಉಪಸ್ಥಿತರಿದ್ದರು. ಮಹಾಬಳೇಶ್ವರ ಗುಡಗುಂಟಿ ಸ್ವಾಗತಿಸಿದರು. ವಿಜಯಕುಮಾರ ದೊಡಮನಿ ವಂದಿಸಿದರು.