ಹರಪನಹಳ್ಳಿ: ಸಮರ್ಪಕ ಕುಡಿಯುವ ನೀರಿನ ಒತ್ತಾಯಿಸಿ ತಾಲೂಕಿನ ಬಾಗಳಿ ಗ್ರಾಮ ಪಂಚಾಯ್ತಿ ಎದುರು ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಬಾಗಳಿ ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ನೀರಿಗಾಗಿ ಜನರು ಪರದಾಡುತ್ತಿದ್ದಾರೆ.
ಬೋರವೆಲ್ ಕೊರೆಸಿದರೂ ನೀರಿನ ಸಂಪರ್ಕ ಕಲ್ಪಿಸಲು ವಿಳಂಬ ಮಾಡಲಾಗುತ್ತಿದೆ. ತಾರತಮ್ಯ ಮಾಡದೇ ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಗ್ರಾಪಂಂ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.
ದಕ್ಷತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ಅಂಬೇಡ್ಕರ್ ಶಾಲೆಯ ಬಳಿ ಬೊರವೆಲ್‌ನಲ್ಲಿ ನೀರಿದೆ. ಅದಕ್ಕೆ ಮೋಟರ್ ಅಳವಡಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಗ್ರಾಮಸ್ಥರು ಪಿಡಿಒ ಅವರಿಗೆ ತಾಕೀತು ಮಾಡಿದರು.ಗ್ರಾಮದಲ್ಲಿ ಎಂಟು ಬೋರ್‌ವೆಲ್ ಗಳಿದ್ದರೂ ನೀರು ಮಾತ್ರ ಸಮರ್ಪಕವಾಗಿಲ್ಲ,
ಆದ್ದರಿಂದ ಈಗಾಗಲೇ ಹೊಸದಾಗಿ ಎರಡು ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ನೀರು ದೊರೆತ್ತಿರುವುದರಿಂದ ಅದನ್ನು ಕೂಡಲೇ ಗ್ರಾಮಸ್ಥರ ಸೇವೆಗೆ ಕಲ್ಪಿಸುವುದಾಗಿ ಗಾ.ಪಂ ಉಪಾಧ್ಯಕ್ಷ ಶಿವಕುಮಾರಗೌಡ ತಿಳಿಸಿದರು. ಗ್ರಾಪಂ ಪಿಡಿಒ ಎಸ್.ಎಂ.ವೀರಯ್ಯ ಹಾಗೂ ಸದಸ್ಯರು ಇಂಜಿನಿಯರ್ ಪುರುಷೋತ್ತಮ ಇವರಿಗೆ ದೂರವಾಣಿ ಮೂಲಕ ಸಮಸ್ಯೆ ತಿಳಿಸಿದಾಗ ಈಗಾಗಲೇ ಗುತ್ತಿಗೆಯನ್ನು ನೀಡಲಾಗಿದೆ.
ಗುತ್ತಿಗೆಯ ಮೊತ್ತದಲ್ಲಿ ವ್ಯತ್ಯಾಸವಾಗಿ ಅದನ್ನು ಸರಿಪಡಿಸಿ ಇನ್ನು ಹದಿನೈದು ದಿನಗಳಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು. ಅಲ್ಲಿಯವರೆಗೂ ತಾತ್ಕಾಲಿಕ ನೀರಿನ ವ್ಯವಸ್ಥೆಗೆ ಗ್ರಾಪಂನಿಂದ ಪತ್ರ ನೀಡಿದಲ್ಲಿ ಖಾಸಗಿ ಬೊರವೆಲ್ ಮಾಲೀಕರಿಂದ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಮುಖಂಡರಾದ ಎಚ್.ಶೆಟ್ಟೆಪ್ಪ, ಸದಸ್ಯ ರೋಣದ ಕಲ್ಲಪ್ಪ, ಜಿ.ಯಮುನಪ್ಪ, ಉಮೇಶ್, ಗ್ರಾಮಸ್ಥರಾದ ಚನ್ನಬಸಪ್ಪ, ಅಯ್ಯಪ್ನರ ಹನುಮವ್ವ, ಕೋಟೆಪ್ಪ, ಮಲ್ಲೇಶ್, ನಾಗರಾಜ, ಕೊಟ್ರೇಶ್, ಜಿ.ಸಿದ್ದಪ್ಪ ಸೇರಿದಂತೆ ಅನೇಕರಿದ್ದರು.