ಬಾದಾಮಿ: ತಾಲೂಕಿನ ಮುತ್ತಲಗೇರಿಯಲ್ಲಿ ಕೋವಿಡ್ ಮಧ್ಯೆಯೂ ಮಾರಕ ಗಂಟಲು ಮಾರಿ ರೋಗ ಭೀತಿ ಗ್ರಾಮಸ್ಥರ ನಿದ್ದೆಗೆಡಿಸಿದೆ. ತಾಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ಮುತ್ತಲಗೇರಿಯಲ್ಲಿ 1100ಕ್ಕೂ ಹೆಚ್ಚು ಮನೆ, 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಗ್ರಾಮ ಪಂಚಾಯತ್ ಸ್ಥಾನಮಾನ ಇದೆ. ಕಳೆದ ಹದಿನೈದು ದಿನಗಳಿಂದ ಗ್ರಾಮದಲ್ಲಿ ಮೃತಪಟ್ಟ ಐವರಿಗೆ ಗಂಟಲು ಮಾರಿ ರೋಗ ತಗುಲಿತ್ತೇ ಎಂಬುದರ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ.
25ಕ್ಕೂ ಹೆಚ್ಚು ಜನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಟಲು ಮಾರಿ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರಿದ್ದು, ಕುಡಿಯುವ ನೀರಿನೊಂದಿಗೆ ಸೇರಿ ಗಂಟಲು, ಹೊಟ್ಟೆ ನೋವು ಕಾಣಿಸುತ್ತಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಸಾಮಾನ್ಯ ರೋಗಕ್ಕೆ ಸಿಗುತ್ತಿಲ್ಲ ಚಿಕಿತ್ಸೆ; ತಾಲೂಕಿನ ಆಸ್ಪತ್ರೆಯಲ್ಲಿ ಕೊರೊನಾ ರೋಗದ ಮಧ್ಯೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ. ಮುತ್ತಲಗೇರಿ ಗ್ರಾಮದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿ ಗಂಟಲು ಮಾರಿ ರೋಗಕ್ಕೆ ತುತ್ತಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಬೆಳಗಾವಿಗೆ ಹೋಗಿ ಅಲ್ಲಿಯೂ ಚಿಕಿತ್ಸೆ ಸಿಗದೆ ವಾಪಸ್ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ವಿದ್ಯಾರ್ಥಿ ಮೃತಪಟ್ಟಿದ್ದು, ಈತನಲ್ಲಿ ರೋಗ ಲಕ್ಷಣಗಳಿರುವ ಬಗ್ಗೆ ದೃಢಪಟ್ಟಿಲ್ಲ.
ಗಂಟಲು ಮಾರಿ ರೋಗ ಮತ್ತೂಬ್ಬರಿಗೆ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಸೂಕ್ತ ಚಿಕಿತ್ಸೆ ಕ್ರಮ ಕೈಗೊಳ್ಳಬೇಕಾಗಿದೆ. ಗಂಟಲು ಮಾರಿ ರೋಗದ ಲಕ್ಷಣಗಳು ಕಂಡು ಬಂದರೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡುಬಿಟ್ಟು ಮಾರಕ ರೋಗ ಹತೋಟಿಗೆ ಮುಂದಾಗಿ ಗ್ರಾಮಸ್ಥರ ಆತಂಕ ದೂರ ಮಾಡಬೇಕಿದೆ.