ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಬಹು ನಿರೀಕ್ಷಿತ ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯ ಜತೆಗೆ ಕ್ಷೇತ್ರವಾರು ಮೀಸಲಾತಿ ನಿಗದಿಯಾಗಿದ್ದು, ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆದರೆ, ಹಲವು ಯುವ ರಾಜಕಾರಣಿಗಳು ಕಟ್ಟಿಕೊಂಡಿದ್ದ ಭವಿಷ್ಯದ ರಾಜಕೀಯ ಕನಸು-ನಿರೀಕ್ಷೆಗಳು ಉಲ್ಪಾ-ಪಲ್ಟಾ ಆಗಿವೆ.
ಹೌದು. ರಾಜಕಾರಣದ ಪ್ರಮುಖ ಮೆಟ್ಟಿಲು ಗ್ರಾಪಂ ಚುನಾವಣೆ. ಆ ಗ್ರಾಪಂ ಚುನಾವಣೆಯಲ್ಲಿ 2ರಿಂದ ಮೂರು ಬಾರಿ ಗೆದ್ದವರೆಲ್ಲ ತಾಪಂ ಇಲ್ಲವೇ ಜಿಪಂ ಕ್ಷೇತ್ರಗಳ ಮೇಲೆ ಕಣ್ಣಿಡುವುದು ಸಾಮಾನ್ಯ. ಗ್ರಾಪಂನಿಂದ ರಾಜಕೀಯ ಆರಂಭಿಸಿದವರು ಇಂದು ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಹಾಗೆಯೇ ಜಿಪಂ ಚುನಾವಣೆಗೆ ಒಮ್ಮೆ ಗೆದ್ದವರು, ಮತ್ತೂಮ್ಮೆ ಸ್ಪರ್ಧಿಸಬೇಕೆಂಬ ಆಶಯ ಹೊಂದುವುದೂ ಸಾಮಾನ್ಯ. ಕಳೆದ 2015ರಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಹಳಬರದಲ್ಲಿ ಹೂವಪ್ಪ ರಾಠೊಡ ಅವರೊಬ್ಬರು ಮಾತ್ರ ಸ್ಪರ್ಧೆ ಮಾಡಿ 2ನೇ ಬಾರಿಯೂ ಆಯ್ಕೆಯಾಗಿದ್ದರು. ಇನ್ನುಳಿದ 35 ಜನರು ಹೊಸದಾಗಿ ಆಯ್ಕೆಯಾಗಿದ್ದರು.
ಹಳಬರ ಜತೆಗೆ ಹೊಸಬರ ಕಣ್ಣು: ಈವರೆಗೆ 36 ಇದ್ದ ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. ಅಲ್ಲದೇ ಎಸ್‌ಟಿ ವರ್ಗಕ್ಕೆ 2 ಕ್ಷೇತ್ರಗಳು ಮೀಸಲಿದ್ದವು. ಈ ಬಾರಿ ಅವು 3ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಿವೆ. ಒಂದು ಸ್ಥಾನ ಮಾತ್ರ ಎಸ್‌ಟಿ ಸಾಮಾನ್ಯವಾಗಿದ್ದು, ಪುರುಷ ಇಲ್ಲವೇ ಮಹಿಳೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಮುಖ್ಯವಾಗಿ ಬಾಗಲಕೋಟೆ ತಾಲೂಕಿನಲ್ಲಿ ಒಂದು ಕ್ಷೇತ್ರ ಎಸ್‌ಟಿ ವರ್ಗಕ್ಕೆ ಮೀಸಲಾಗಲಿದೆ ಎಂಬ ಬಹು ನಿರೀಕ್ಷೆ ಇತ್ತು. ಇದಕ್ಕಾಗಿ ಬಿಜೆಪಿಯ ಯುವ ಮುಖಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜು ನಾಯ್ಕರ ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಎಸ್‌ಟಿ ಮೀಸಲು ಇಲ್ಲದಿದ್ದರೂ ಸಾಮಾನ್ಯ ವರ್ಗದಿಂದ ಸ್ಪರ್ಧಿಸಲು ಅವರಿಗೆ ಅವಕಾಶವಿದೆ. ಇದಕ್ಕಾಗಿ ರಾಜಕೀಯ ತಯಾರಿ ಪ್ರಯತ್ನ ನಿರಂತರವಾಗಿ ನಡೆಸುತ್ತಿದ್ದು, ಪಕ್ಷದಿಂದ ಟಿಕೆಟ್ ದೊರೆಯಬೇಕಿದೆ.
ಬೇವೂರ ಜಿಪಂ ಕ್ಷೇತ್ರವನ್ನು ಬಿಜೆಪಿ ತನ್ನ ಮಡಿಲಿಗೆ ಪಡೆಯಲು ಹಲವು ವರ್ಷಗಳಿಂದ ಗಂಭೀರ ಪ್ರಯತ್ನ ನಡೆಸಿದ್ದು, ಆ ಆಶಯವನ್ನು ರಾಜು ನಾಯ್ಕರ ಅವರಿಗೆ ಟಿಕೆಟ್ ಕೊಟ್ಟರೆ ಈಡೇರಲಿದೆ ಎಂಬುದು ಅವರ ಬೆಂಬಲಿಗರ ಒತ್ತಾಸೆ. ಅಲ್ಲದೇ ಕಾಂಗ್ರೆಸ್‌ನಲ್ಲೂ ಹಲವರು ಹೊಸಬರು ಜಿಪಂ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಕೂಡ ಪಕ್ಷ ಟಿಕೆಟ್ ನೀಡಿದರೆ, ಹಿರಿಯರು ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಮಾಜಿ ಮಾಜಿ ಅಧ್ಯಕ್ಷೆಯರಾದ ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ ಕೂಡ ಇದೊಂದು ಬಾರಿ ಜಿಪಂಗೆ ಸ್ಪರ್ಧಿಸಬೇಕೆಂಬ ಒತ್ತಾಯ ಅವರ ಬೆಂಬಲಿಗರ ವಲಯದಲ್ಲಿ ಕೇಳಿ ಬಂದಿದೆ.
ಎಲ್ಲವೂ ಉಲ್ಟಾ-ಪಲ್ಟಾ: ತಾನೊಂದು ಬಗೆದರೆ, ದೈವವೊಂದು ಬಗೆಯಿತೆಂಬಂತೆ ವಿವಿಧ ಜಿಪಂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಯುವ ನಾಯಕರಿಗೆ ಮೀಸಲಾತಿ ನಿಗದಿ ನಿರಾಸೆ ಮೂಡಿಸಿದೆ. ಮೀಸಲಾತಿ ನಿಗದಿ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದು, ಈ ಕುರಿತು ದಾಖಲೆಗಳ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಜಿಪಂ ಕ್ಷೇತ್ರ ಎಸ್‌ಟಿ ಮಹಿಳೆಗೆ ಮೀಸಲಾಗಿದ್ದು,ಅದರ ಪಕ್ಕದಲ್ಲೇ ಬರುವ ಇಳಕಲ್ಲ ತಾಲೂಕಿನ ಗುಡೂರ ಎಸ್‌ಸಿ ಕ್ಷೇತ್ರವೂ ಎಸ್‌ಸಿ ಮಹಿಳೆಗೆ ಮೀಸಲಾಗಿದೆ. ಈ ಎರಡೂ ಕ್ಷೇತ್ರಗಳ ಗ್ರಾಮಗಳು ಒಂದಕ್ಕೊಂದು ಅಂಟಿಕೊಂಡಿದ್ದು, ಎಸ್‌ಟಿ ಮೀಸಲು ಕ್ಷೇತ್ರಗಳನ್ನು ಬೇರೆ ಬೇರೆ ತಾಲೂಕಿಗೆ ಹಂಚಿಕೆ ಮಾಡಿದರೂ ಅವು ಅಕ್ಕ-ಪಕ್ಕದಲ್ಲಿವೆ ಎಂಬ ಅಸಮಾಧಾನ ಕೇಳಿ ಬಂದಿದೆ. ಒಟ್ಟಾರೆ, ಜಿಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಯಾಗಿದ್ದು, ಇತ್ತ ರಾಜಕೀಯ ಚಟುವಟಿಕೆ ಬಿರುಸುಗೊಳ್ಳಲು ವೇದಿಕೆ ರೆಡಿಯಾಗಿದೆ.