Advertisement

ಅನಿಷ್ಟ ಪದ್ಧತಿ ಹೋಗಲಾಡಿಸಲು ಶ್ರಮಿಸಿ

01:16 PM Jun 13, 2019 | Naveen |

ಬಾಗಲಕೋಟೆ: ಬಾಲ ಕಾರ್ಮಿಕರಾಗಲು ಬಡತನ, ಅಷ್ಪ್ರುಶ್ಯತೆ, ಅನಿಷ್ಟ ಪದ್ದತಿಗಳೇ ಇದಕ್ಕೆ ಶಾಪವಾಗಿ ಪರಿಣಮಿಸಿದ್ದು, ಇದನ್ನು ನಿರ್ಮೂಲನೆ ಮಾಡಲು ಎಲ್ಲರಿಗೂ ಶಿಕ್ಷಣ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನೀಲ ಕಟ್ಟಿ ಹೇಳಿದರು.

Advertisement

ಜಿಪಂ ಸಭಾ ಭವನದ ಬುಧವಾರ ನಡೆದ ಜಿಲ್ಲಾಡಳಿತ, ಜಿ.ಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವಾರು ಕಾಯ್ದೆ, ಕಾನೂನು ಜಾರಿಗೆ ತಂದಿದ್ದರೂ ಸಹ ಬಾಲಕರನ್ನು ದುಡಿಸಿಕೊಳ್ಳುವ ಪ್ರವೃತ್ತಿ ಕಂಡು ಬರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಕುಟುಂಬದ ಆದಾಯ ಹೆಚ್ಚಿಸುವ ಮನೋಭಾವದಿಂದ ಪಾಲಕರು ಬಾಲ್ಯದಲ್ಲಿಯೇ ಮಕ್ಕಳನ್ನು ಕೆಲಸಕ್ಕೆ ಕಳುಹಿಸಲು ಮುಂದಾಗುತ್ತಾರೆ. ಅಂತಹ ಪಾಲಕರಿಗೆ ತಿಳಿವಳಿಕೆ ನೀಡುವ ಮೂಲಕ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ವೃತ್ತಿಯಲ್ಲಿ ತೊಡಗಿಸಿದರು ಮಕ್ಕಳ ಹಕ್ಕುಗಳ ರಕ್ಷಣೆ ಮೇಲೆ ಉಲ್ಲಂಘಿಸಿದಂತಾಗುತ್ತದೆ. ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದ್ದು, ಎಲ್ಲ ಮಕ್ಕಳ ಶಿಕ್ಷಣ ಪಡೆದುಕೊಳ್ಳಬೇಕು. ಇದರಿಂದ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಸವರಾಜ ಕುಬಕಡ್ಡಿ ಮಾತನಾಡಿ, ಸರಕಾರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅನೇಕ ಕಾಯ್ದೆಗಳನ್ನು ಜಾರಿಗೆ ತಂದರೂ ಇನ್ನು ಸಹ ನಿರ್ಮೂಲನೆ ಯಾಗಿಲ್ಲ. ಇದನ್ನು ತೊಲಗಿಸಬೇಕಾದರೆ ಸಮಾಜದಲ್ಲಿರುವ ವ್ಯವಸ್ಥೆ ಬದಲಾವಣೆಯಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಿದಾಗ ಮಾತ್ರ ಅವರ ಆರ್ಥಿಕ ಮಟ್ಟ ಸುಧಾರಿಸುವುದರ ಜೊತೆಗೆ ದೇಶವು ಸಹ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಹ ಮರಳಿ ಶಾಲೆಗೆ ತರುವ ಕೆಲಸವಾಗಬೇಕು ಎಂದು ತಿಳಿಸಿದರು.

Advertisement

ಸಾಮಾಜಿಕ ಕಳಕಳಿ ಇರುವವರು ಬಾಲಕಾರ್ಮಿಕ ನಿರ್ಮೂಲಣೆಗೆ ಮುಂದಾಗಬೇಕು. ನಮ್ಮ ಮಕ್ಕಳೇ ನಮಗೆ ಆಸ್ತಿ ಎಂಬ ಕಲ್ಪನೆ ನಮ್ಮಲ್ಲಿ ಬರಬೇಕು. ಅಂದಾಗ ಮಾತ್ರ ಮಕ್ಕಳ ಉತ್ತಮ ಬೆಳವಣಿಗೆಗೆ ಸಾಧ್ಯವಾಗುತ್ತದೆ. ನಮಗೆ ದೊರೆಯುವ ಪೂರಕ ಸೌಲಭ್ಯಗಳನ್ನು ನಾವೆಲ್ಲರೂ ಅನುಭವಿಸುವಂತಾಗಬೇಕು. ಆಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಎಂದು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ ಮಾತನಾಡಿ, ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದ್ದು, ಪೋಷಕರಲ್ಲಿ ಇದರ ಬಗ್ಗೆ ಪ್ರಜ್ಞೆ ಮೂಡಿಸಿ ತಡೆಗಟ್ಟುವ ಕೆಲಸವಾಗಬೇಕು.

ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ ಮಾತನಾಡಿ, ಬಾಲಕಾರ್ಮಿಕ ನಿರ್ಮೂಲಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು. ಎಲ್ಲ ಇಲಾಖೆಗಳ ಜೊತೆ ಸ್ವಯಂ ಸೇವಾ ಸಂಘಗಳ ಸಹಕಾರ ಅಗತ್ಯವಾಗಿದ್ದು, ಬಾಲಕಾರ್ಮಿಕ ನಿರ್ಮೂಲನೆಗೆ ಪಣ ತೊಡೋಣ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ತೇಜಸ್ವಿನಿ ಹಿರೇಮಠ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್‌. ಜಾಧವ, ವಕೀಲರ ಸಂಘದ ಅಧ್ಯಕ್ಷ ಸಿ.ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next