Advertisement

ಚೊಂಬು ಹಿಡಿದು ಗ್ರಾಮಸ್ಥರ ಪ್ರತಿಭಟನೆ

05:17 PM Dec 06, 2018 | |

ಬಾಗಲಕೋಟೆ: ಶೌಚಾಲಯ ನಿರ್ಮಾಣದ ಸಹಾಯಧನ ನೀಡುವಂತೆ ಆಗ್ರಹಿಸಿ ಮಹಿಳೆಯರು ಕೈಯಲ್ಲಿ ಚೊಂಬು ಹಿಡಿದು ಡಿಸಿ ಕಚೇರಿ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

Advertisement

ಮುಧೋಳ ತಾಲೂಕಿನ ಬುದ್ನಿ (ಪಿಡಿ) ಗ್ರಾಮದ ಮಹಿಳೆಯರು, ಪುರುಷರು ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ತಾವು ನಿರ್ಮಿಸಿದ ವೈಯಕ್ತಿಕ ಶೌಚಾಲಯದ ಸಹಾಯಧನ ಈ ವರೆಗೆ ನೀಡಿಲ್ಲ. ಕೂಡಲೇ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಮನೆಯಿಂದಲೇ ಬುತ್ತಿ ಮಾಡಿಕೊಂಡು ಬಂದಿದ್ದ ಜನರು, ಜಿಲ್ಲಾಡಳಿತ ಭವನದ ಎದುರೇ ಬುತ್ತಿ ಬಿಚ್ಚಿಕೊಂಡು ಊಟ ಮಾಡಿದರು.

ಗ್ರಾಮದ ಸರ್ವೇ ನಂಬರ್‌ಗಳ ಅತಂತ್ರದಿಂದ ಸರ್ಕಾರದ ಶೌಚಗೃಹ ನಿರ್ಮಾಣದ ಸಹಾಯ ಧನ ಸರಿಯಾಗಿ ಸಿಗುತ್ತಿಲ್ಲ. ತೋಟಗಾರಿಕೆ, ರೇಷ್ಮೆ, ಕೃಷಿ ಮುಂತಾದ ಇಲಾಖೆ ಯೋಜನೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಜಿಲ್ಲಾಡಳಿತ ಬುದ್ನಿ ಪಿ.ಡಿ. ಗ್ರಾಮದ ಸರ್ವೇ ನಂಬರ್‌ಗಳನ್ನು ಕೆಸರಕೊಪ್ಪ ಗ್ರಾಪಂ ವ್ಯಾಪ್ತಿಗೆ ಸೇರಿಸಬೇಕು. ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಗ್ರಾಮಸ್ಥರು, ಮುಧೋಳ ತಾಲೂಕಿನ ಮಹಾಲಿಂಗಪುರ ಸಮೀಪದ ಬುದ್ನಿ ಪಿ.ಡಿ ಗ್ರಾಮವು ಹಲವು ಮೂಲಭೂತ ಸಮಸ್ಯೆ ಎದುರಿಸುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಬುದ್ನಿ ಪಿ.ಡಿ ಗ್ರಾಮದ ಎರಡು ಸರ್ವೇ ನಂಬರ್‌ ಗಳು ಮಹಾಲಿಂಗಪುರ ಪಟ್ಟಣದ ವ್ಯಾಪ್ತಿಗೆ ಬರುತ್ತವೆ. ಉಳಿದ 127 ಸರ್ವೇ ನಂಬರ್‌ಗಳು ಪಟ್ಟಣದ ವ್ಯಾಪ್ತಿಗೆ ಬರುವುದಿಲ್ಲ. ಈ ನಂಬರ್‌ಗಳು ಕೆಸರಕೊಪ್ಪ ಗ್ರಾಮದ ವ್ಯಾಪ್ತಿಗೂ ಬರುವುದಿಲ್ಲ. ಗ್ರಾಮವು ಅತಂತ್ರ ಸ್ಥಿತಿಯಲ್ಲಿದೆ. ಗ್ರಾಮದ ಗೋಳು ಕೇಳ್ಳೋರ್ಯಾರು ಎಂದು ದೂರಿದರು.

Advertisement

ಗ್ರಾಮಸ್ಥರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಗ್ರಾಮದ 127 ಸರ್ವೇ ನಂಬರ್‌ಗಳು ಕೆಸರಕೊಪ್ಪ ಗ್ರಾಪಂ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು. ನಿರ್ದೇಶಕರು ಜಿಲ್ಲಾಡಳಿತಕ್ಕೆ ಆದೇಶಿಸಿ 11 ತಿಂಗಳು ಕಳೆದರೂ ಜಿಲ್ಲಾಡಳಿತ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಸ್‌.ವಿ. ಮೇಟಿ, ವಿಷ್ಣು ಮಾನಕರ, ಕರೆಪ್ಪ ಪೂಜೇರಿ, ಚನ್ನಪ್ಪ ಕಡಾರಿ, ಆರ್‌.ಬಿ. ಪಾಟೀಲ, ರೇಣುಕಾ ಯರಗುದ್ರಿ, ನೀಲವ್ವ ಮುಧೋಳ, ಯಲ್ಲವ್ವ ಶೇಗುಣಸಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next