ಬಾಗಲಕೋಟೆ: ರಾಜ್ಯದ ಅತಿ ದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ 5 ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಉಳಿಸಬಲ್ಲ ಹೊಸ ತಂತ್ರಜ್ಞಾನ ಯೋಜನೆಯನ್ನೂ ಸರ್ಕಾರ ಕೈ ಬಿಟ್ಟಿದೆ.
Advertisement
ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಲು ಅನುಮತಿ ನೀಡಿದ್ದು, ಡ್ಯಾಂ ಎತ್ತರಿಸಿದಾಗ ಬಾಗಲಕೋಟೆ ನಗರದ ಕೆಲ ಭಾಗ ಹೊರತುಪಡಿಸಿ, ಅವಳಿ ಜಿಲ್ಲೆಯ 22 ಹಳ್ಳಿಗಳು ಮುಳುಗಡೆ ಆಗುತ್ತವೆ. ಅದರಲ್ಲಿ 12 ಹಳ್ಳಿಗಳು ಮುಳುಗಡೆ ಆಗದಂತೆ ಉಳಿಸಿಕೊಳ್ಳಲು ಸುಮಾರು 4855 ಎಕರೆ ಭೂಮಿ ಉಳಿಸಿಕೊಳ್ಳುವ ಅತ್ಯುತ್ತಮ ಯೋಜನೆ. 2015ರಲ್ಲಿ ಕೆಬಿಜೆಎನ್‌ಎಲ್‌ದಿಂದ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆಗಿನ ಸರ್ಕಾರ ಈ ಯೋಜನೆ ಕುರಿತು ಚರ್ಚಿಸಿ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿತ್ತು. ಇನ್ನೇನು 12 ಹಳ್ಳಿಗಳು ಉಳಿಯಲಿವೆ ಅಂದುಕೊಂಡಿರುವಾಗಲೇ ಈ ಯೋಜನೆ ಸಂಪೂರ್ಣ ಕೈ ಬಿಡುವಂತೆ ಸ್ವತಃ ಉಪ ಮುಖ್ಯಮಂತ್ರಿ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಯುಕೆಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಟೀಲ ಅವರು ಮುಳುಗಡೆ ಆಗಲಿರುವ 22 ಗ್ರಾಮಗಳಿಗೂ ಸುತ್ತಾಡಿ ತಡೆಗೋಡೆ ನಿರ್ಮಾಣದ ಸಾಧ್ಯತೆ, ಇದರಿಂದಾಗುವ ಪ್ರಯೋಜನ ಕುರಿತು ಸಮಗ್ರ ಯೋಜನೆ ರೂಪಿಸಿ ಕೆಬಿಜೆಎನ್‌ಎಲ್‌ಗೆ ಸಲ್ಲಿಸಿದ್ದರು. ಇದನ್ನು ಕೆಬಿಜೆಎನ್‌ಎಲ್ ಕೂಡ ಒಪ್ಪಿಕೊಂಡು, ಸಿಎಂ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಎದುರು ಸಲ್ಲಿಸಿತ್ತು.
Related Articles
Advertisement
ಯಾವ ಗ್ರಾಮಗಳು ಮುಳುಗುತ್ತಿರಲಿಲ್ಲ: ನಾರ್ವೆ ಮಾದರಿ ತಡೆಗೋಡೆ ನಿರ್ಮಾಣದಿಂದ ಬಾಗಲಕೋಟೆ ತಾಲೂಕಿನ ಕಲಾದಗಿ, ಗೋವಿಂದಕೊಪ್ಪ, ಗದ್ದನಕೇರಿ, ಉದಗಟ್ಟಿ, ಬೀಳಗಿ ತಾಲೂಕಿನ ಆಲಗುಂಡಿ, ಕಾತರಕಿ, ಬಾವಲತ್ತಿ, ಕೊಪ್ಪ ಎಸ್. ಕೆ, ಜಮಖಂಡಿ ತಾಲೂಕಿನ ಹಿರೇಪಡಸಲಗಿ, ಕುಂಬಾರಹಳ್ಳ, ಸನಾಳ, ಬಸವನಬಾಗೇವಾಡಿ ತಾಲೂಕಿನ ವಂದಾಲ ಹೀಗೆ ಒಟ್ಟು 12 ಗ್ರಾಮಗಳ ಮನೆ, ಭೂಮಿ ಸಂಪೂರ್ಣ ಮುಳುಗಡೆಯಿಂದ ತಪ್ಪಿಸಲು ಸಾಧ್ಯವಿತ್ತು. ಅಲ್ಲದೇ ಈ 12 ಗ್ರಾಮಗಳ 4855 ಎಕರೆ ಭೂಮಿ, 1500 ಕುಟುಂಬಗಳ ಸುಮಾರು 47,524 ಜನರಿಗಾಗಿ ನೂರಾರು ಕೋಟಿ ಖರ್ಚು ಮಾಡಿ 11 ಪುನರ್ವಸತಿ ಕೇಂದ್ರ ನಿರ್ಮಿಸುವ ಅಗತ್ಯವೇ ಬರುತ್ತಿಲ್ಲ.
5 ಸಾವಿರ ಕೋಟಿ ಮಾಡಬಹುದು ಉಳಿತಾಯ: ಆಲಮಟ್ಟಿ ಜಲಾಶಯ ಎತ್ತರಿಸುವುದರಿಂದ ಕೆಲವೆಡೆ ಆಳವಾದ ಹಿನ್ನೀರು ಆವರಿಸಿಕೊಂಡರೆ, ಕೆಲವೆಡೆ 1ಅಡಿಯಿಂದ 10 ಅಡಿವರೆಗೆ ಮಾತ್ರ ಹಿನ್ನೀರು ನಿಲ್ಲುತ್ತದೆ. ಕೇವಲ 1 ಅಡಿಯಷ್ಟು ನೀರು ನಿಲ್ಲುವ ಭೂಮಿಯನ್ನು ಮುಳುಗಡೆ ಮಾಡಿ ಪರಿಹಾರ ನೀಡುವ ಬದಲು ಅದನ್ನು ಉಳಿಸಿಕೊಳ್ಳಬೇಕು. ಹಣ ಪಡೆಯಬಹುದು. ಆದರೆ, ಒಂದು ಇಂಚು ಭೂಮಿ ಹೊಸದಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಇರುವ ಭೂಮಿಯನ್ನೇ ಉಳಿತಾಯ ಮಾಡಬೇಕು. ಇದರಿಂದ ಸರ್ಕಾರಕ್ಕೆ 5609.97 ಕೋಟಿ ಅನುದಾನ, 15,375 ಕಟ್ಟಡ ಉಳಿಸಿಕೊಳ್ಳಬಹುದಿತ್ತು. ಅಲ್ಲದೇ ಯುಕೆಪಿ 3ನೇ ಹಂತದ ಯೋಜನೆ ಪೂರ್ಣಗೊಳಿಸಲು 1 ಲಕ್ಷ ಕೋಟಿ ಅನುದಾನ ಅಗತ್ಯವಿದ್ದು, ಈ ಯೋಜನೆಯಿಂದ ಹಣದ ಹೊರೆ ಕಡಿಮೆ ಮಾಡಬಹುದಿತ್ತು ಎಂಬುದು ಇಂಜಿನಿಯರ್‌ಗಳ ವಾದ.
ಪ್ರವಾಸೋದ್ಯಮಕ್ಕೂ ಲಾಭ: ಈ ಯೋಜನೆ ಕೈಗೊಳ್ಳುವುದರಿಂದ15,375 ಕಟ್ಟಡ, 4855 ಎಕರೆ ಭೂಮಿ, 47,524 ಜನರನ್ನು ಈಗಿರುವ ಸ್ಥಳದಲ್ಲೇ ಮುಂದುವರಿಸುವ ಜತೆಗೆ 5 ಸಾವಿರ ಕೋಟಿ ಅನುದಾನ ಉಳಿತಾಯ ಅಷ್ಟೇ ಲಾಭ ಇರಲಿಲ್ಲ. ನಾರ್ವೆ ಮಾದರಿ ತಡೆಗೋಡೆ ಅಂದರೆ ನಮ್ಮ ಹೊಲದಲ್ಲಿ ಹಾಕುವ ಒಡ್ಡಿನ ರೀತಿ ಅಲ್ಲ ಅದು ಬೃಹತ್ ಗಾತ್ರದ ತಡೆಗೋಡೆಯಾಗಿದ್ದು, ಅದರ ಮೇಲೆ ಸಂಚಾರ, ಪ್ರವಾಸೋದ್ಯಮ, ಹಿನ್ನೀರು ಪ್ರದೇಶ ಸುಂದರಗೊಳಿಸುವ ಯೋಜನೆ ಇದಾಗಿತ್ತು. ಇಂತಹ ಉಳಿತಾಯ ಯೋಜನೆಯಿಂದ ಕೆಲವರ ವಿರೋಧ ಬರುತ್ತದೆ. ಅವರಿಗೆ ಮನವರಿಕೆ ಮಾಡಿಕೊಟ್ಟು ಕಾರ್ಯಗತಗೊಳಿಸಬೇಕೆಂದು ಪ್ರಸ್ತಾವನೆ ಸಲ್ಲಿಸುವ ವೇಳೆ ಇಂಜಿನಿಯರ್‌ಗಳೇ ಹೇಳಿದ್ದರು. ಆದರೆ ಯೋಜನೆ ಕುರಿತು ಸಾಧಕ-ಬಾಧಕ ಚರ್ಚಿಸದೇ, ಉಳಿತಾಯ ಯೋಜನೆಯೊಂದು ಕೈಬಿಟ್ಟಿರುವುದು ಯುಕೆಪಿ ಯೋಜನೆ ಮತ್ತಷ್ಟು ತಡವಾಗಲು ಕಾರಣವಾಗಲಿದೆ ಎಂಬುದು ಕೆಲವರ ಅಭಿಪ್ರಾಯ. ನಾರ್ವೆ ಮಾದರಿ ತಡೆಗೋಡೆ ನಿರ್ಮಾಣ ಎಂಬುದು ಕಾಗಕ್ಕ-ಗುಬ್ಬಕ್ಕ ಕಥೆ. ಇದೇ ನೆಪ ಹೇಳಿಕೊಂಡು ಕೆಲ ವರ್ಷದಿಂದ ಭೂ ಸ್ವಾಧೀನ ಪ್ರಕ್ರಿಯೆ ನಿಧಾನಗೊಂಡಿದೆ. ಅದನ್ನು ಕೈಬಿಟ್ಟು, ಭೂಸ್ವಾಧೀನ ಆರಂಭಿಸಬೇಕು. 3 ವರ್ಷದಲ್ಲಿ ಯುಕೆಪಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಪರಿಹಾರಧನ ನೀಡಲು ಬೇಕಾಗುವ ಅನುದಾನ, ಬರುವ ಬಜೆಟ್‌ನಲ್ಲಿ ಕೆಬಿಜೆಎನ್‌ಎಲ್‌ಗೆ ನೀಡಲಾಗುವುದು.
.ಗೋವಿಂದ ಕಾರಜೋಳ,
ಉಪ ಮುಖ್ಯಮಂತ್ರಿ