Advertisement

ಹಳೆಯ ಘೋಷಣೆ ಈಡೇರಿಲ್ಲ

11:22 AM Feb 10, 2019 | |

ಬಾಗಲಕೋಟೆ: ಸರ್ಕಾರ ಪ್ರತಿ ವರ್ಷ ಮಂಡಿಸುವ ಆಯವ್ಯಯದಲ್ಲಿ ಜಿಲ್ಲೆಗೆ ನೀಡಿದ್ದ ಪ್ರಮುಖ ಯೋಜನೆಗಳೇ ಈವರೆಗೆ ಈಡೇರಿಲ್ಲ. ಹೀಗಾಗಿ ಹೊಸದಾಗಿ ಘೋಷಣೆ ಮಾಡಿದ ಯೋಜನೆಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬರುತ್ತವೆಯೇ ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡುತ್ತಿದೆ.

Advertisement

ನಿಜ, ಕಳೆದ 2018-19ನೇ ಸಾಲಿನಲ್ಲಿ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ, ಜಿಲ್ಲೆಯ ಹಲವು ನೀರಾವರಿ ಯೋಜನೆಗಳು ಘೋಷಣೆ ಮಾಡುವ ಜತೆಗೆ ಅವುಗಳಿಗೆ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಿದ್ದರು. ಈ ವರೆಗೆ ಅನುದಾನವೇ ಬಂದಿಲ್ಲ. ಹೀಗಾಗಿ ಕಾಮಗಾರಿ ನಡೆಯವುದು ದೂರದ ಮಾತು.

ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆಗೆ 73.75 ಕೋಟಿ ಅನುದಾನ ಘೋಷಿಸುವ ಜತೆಗೆ ಜಮಖಂಡಿ ತಾಲೂಕಿನ 9,164 ಹೆಕ್ಟೇರ್‌ಗೆ ನೀರಾವರಿ ಕಲ್ಪಿಸುವ ಯೋಜನೆ ಘೋಷಣೆಯಾಗಿತ್ತು. ಈ ಕಾಮಗಾರಿ ಮಾತ್ರ ಆರಂಭಗೊಂಡಿದ್ದು, ವರ್ಷವಾದರೂ ಪೂರ್ಣಗೊಂಡಿಲ್ಲ.

ಎರಡು ಜಿಲ್ಲೆಯ ಬೇಡಿಕೆ ಈಡೇರಿಲ್ಲ: ಎರಡು ಜಿಲ್ಲೆಗಳ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ ಜಿಲ್ಲೆಯ ರಾಯಬಾಗ, ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬೀಳಗಿ ತಾಲೂಕಿನ 36 ಸಾವಿರ ಹೆಕ್ಟೇರ್‌ ಭೂಮಿಗೆ ನೀರಾವರಿ ಕಲ್ಪಿಸುವ, 8.40 ಟಿಎಂಸಿ ಅಡಿ ನೀರು ಬಳಸಿಕೊಳ್ಳುವ ಸಸಾಲಟ್ಟಿ ಏತ ನೀರಾವರಿ ಯೋಜನೆ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದಕ್ಕೆ 140 ಕೋಟಿ ಅನುದಾನವೂ ಮೀಸಲಿಡಲಾಗಿತ್ತು. ಬಜೆಟ್‌ನಲ್ಲಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಆ ಭಾಗದ ರೈತರು ವಿಜಯೋತ್ಸವ ಕೂಡ ಆಚರಿಸಿದ್ದರು. ಆದರೆ, ಈ ಯೋಜನೆ ಈ ವರೆಗೂ ಅನುಷ್ಠಾನಗೊಂಡಿಲ್ಲ. ಮುಖ್ಯವಾಗಿ ಆಡಳಿತಾತ್ಮಕ ಅನುಮೋದನೆಯೂ ಸಿಕ್ಕಿಲ್ಲ ಎನ್ನಲಾಗಿದೆ.

ಇನ್ನು ಬೀಳಗಿ, ಜಮಖಂಡಿ ತಾಲೂಕಿನ ರೈತರ ಭೂಮಿಗೆ ನೀರಾವರಿ ಕಲ್ಪಿಸುವ ಗಲಗಲಿ-ಮರೇಗುದ್ದಿ ಯೋಜನೆಗೆ 100 ಕೋಟಿ ಘೋಷಣೆಯಾಗಿತ್ತು. ಇದು ಕೂಡ ಜಾರಿಯಾಗಿಲ್ಲ. ಕಳೆದ 2017-18ನೇ ಸಾಲಿನಲ್ಲಿ ಬೀಳಗಿ ತಾಲೂಕಿನಲ್ಲಿ ಯಳ್ಳಿಗುತ್ತಿ ಏತ ನೀರಾವರಿ ಘೋಷಣೆ ಮಾಡಿದ್ದು, ಅದೂ ಕಾರ್ಯರೂಪಕ್ಕೆ ಬಂದಿಲ್ಲ.

Advertisement

ಎರಡೂ ಬಜೆಟ್‌ನಲ್ಲಿ ಘೋಷಣೆ: 238 ಕೋಟಿ ವೆಚ್ಚದಲ್ಲಿ ಹೆರಕಲ್‌ ದಕ್ಷಿಣ ಏತ ನೀರಾವರಿ ಯೋಜನೆ (ವಿಸ್ತರಣೆ), ನಂದವಾಡಗಿ ಏತ ನೀರಾವರಿ ಯೋಜನೆ ವಿಸ್ತರಣೆ ಕಾಮಗಾರಿ (2ನೇ ಹಂತ) ಕೈಗೊಳ್ಳುವುದಾಗಿ ಕಳೆದ ಬಜೆಟ್‌ನಲ್ಲೇ ಹೇಳಿದ್ದರೂ ಈಡೇರಿಲ್ಲ. ನಂದವಾಡಗಿ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ 200 ಕೋಟಿ ನೀಡುವುದಾಗಿ ಸರ್ಕಾರ ವಾಗ್ಧಾನ ಮಾಡಿದೆ. ಅದು ಅನುಷ್ಠಾನಕ್ಕೆ ಬರುತ್ತಾ ಎಂಬುದಕ್ಕೆ ಭರವಸೆಯಿಲ್ಲ.

ಮುಧೋಳ ತಾಲೂಕಿನ ಮಂಟೂರ ಮತ್ತು ಇತರೆ 16 ಕೆರೆ ತುಂಬಿಸಲು 50 ಕೋಟಿ ಘೋಷಣೆಯಾಗಿತ್ತು. ಇದೂ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲಸಂಗಮ ಮತ್ತು ಚಿಕ್ಕಸಂಗಮ ಸಮಗ್ರ ಅಭಿವೃದ್ಧಿಗೆ ಸುಮಾರು 400 ಕೋಟಿ ಮೊತ್ತದ ವಿಸ್ತೃತ ಯೋಜನೆ ರೂಪಿಸಿದ್ದು, ಅದರಲ್ಲಿ ಮೊದಲ ಹಂತದಲ್ಲಿ 94.68 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಕಳೆದ 2018ರ ಮಾರ್ಚ್‌ 12ರಂದು ಸ್ವತಃ ಸಿದ್ದರಾಮಯ್ಯನವರೇ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದರು. ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿ ಎಂಬ ಈ ಯೋಜನೆಯಡಿ ಕೇವಲ ಛತ್ರ, ಕಲ್ಯಾಣ ಮಂಟಪ, ಯಾತ್ರಿ ನಿವಾಸ ಕಟ್ಟುವ ಕೆಲಸ ನಡೆದಿದೆ. ಮುಖ್ಯವಾಗಿ ಅಂತಾರಾಷ್ಟ್ರೀಯ ಬಸವ ಮ್ಯೂಜಿಯಂ, ಬಾತ್‌ಘಾಟ್, ಶರಣಗ್ರಾಮ ನಿರ್ಮಿಸುವ ಪ್ರಮುಖ ಕಾರ್ಯಗಳೇ ಆರಂಭಗೊಂಡಿಲ್ಲ.

ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ಕುಸಿತ ಕಂಡಿರುವ ರಾಜ್ಯದ 43 ತಾಲೂಕುಗಳಿಗೆ ಒಟ್ಟು 50 ಕೋಟಿ ಮಂಜೂರು ಮಾಡಲಾಗಿತ್ತು. ಅದರಲ್ಲಿ ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ಕೂಡ ಒಳಗೊಂಡಿದ್ದವು. ಈ ನಿಟ್ಟಿನಲ್ಲಿ ಯಾವ ಕಾಮಗಾರಿಯೂ ಅನುಷ್ಠಾನಕ್ಕೆ ಬಂದಿಲ್ಲ. ಜಮಖಂಡಿಯ ರಾಣಿ ಚನ್ನಮ್ಮ ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 1 ಕೋಟಿ ಅನುದಾನ ಮಂಜೂರು ಮಾಡಿದ್ದರೂ, ಆ ಹಣ ಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ.

ಹಳೆಯ ಘೋಷಣೆ ಮರೆತರೇ?: ಇನ್ನು 2013ರಲ್ಲಿ ಆಗಿನ ಬಿಜೆಪಿ ಸರ್ಕಾರ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಐಹೊಳೆ ಸ್ಥಳಾಂತರ ಘೋಷಣೆ ಮಾಡಿತ್ತು. ಅದಕ್ಕೆ ಆಗಿನ ಸಿಎಂ ಜಗದೀಶ ಶೆಟ್ಟರ ಭೂಮಿಪೂಜೆ ಮಾಡಿದ್ದರು. ಈಗ ಆರು ವರ್ಷ ಕಳೆದರೂ ಐಹೊಳೆಗೆ ಅಭಿವೃದ್ಧಿ ಅದೃಷ್ಟ ಕೂಡಿ ಬಂದಿಲ್ಲ. 2014-15ನೇ ಸಾಲಿನಲ್ಲಿ ಬಾಗಲಕೋಟೆಗೆ ಐಟಿ ಪಾರ್ಕ್‌ ಮಂಜೂರು ಮಾಡಿಸುವಲ್ಲಿ ಸ್ವತಃ ಆ ಇಲಾಖೆಯ ಸಚಿವರಾಗಿದ್ದ ಎಸ್‌.ಆರ್‌. ಪಾಟೀಲ ಮುತುವರ್ಜಿ ವಹಿಸಿದ್ದರು. ಆದರೆ, ಐಟಿ ಪಾರ್ಕ್‌ ಇತ್ತ ತಲೆಯೂ ಹಾಕಲಿಲ್ಲ. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಪಟ್ಟದಕಲ್ಲನಲ್ಲಿ ಪ್ರವಾಸಿ ಪ್ಲಾಜಾ ಮಂಜೂರಾಗಿತ್ತು. ಅದೂ ಕಾರ್ಯರೂಪಕ್ಕೆ ಬಂದಿಲ್ಲ. ಮುಖ್ಯವಾಗಿ ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ ಬ್ರಿಟಿಷರ ಕಾಲದ ಮುಚಖಂಡಿ ಕೆರೆ ಸಮಗ್ರ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣ ಮಾಡುವುದಾಗಿ 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅದಕ್ಕಾಗಿ ತಯಾರಿಸಿದ 9 ಕೋಟಿ ಮೊತ್ತದ ಪ್ರಸ್ತಾವನೆ ಇಂದಿಗೂ, ಪ್ರವಾಸೋದ್ಯಮ ಇಲಾಖೆಯಲ್ಲಿ ಧೂಳು ತಿನ್ನುತ್ತಿದೆ.

ಭೂಮಿಪೂಜೆ ಮಾಡಿದ್ದರು: ಲೋಕೋಪಯೋಗಿ ಇಲಾಖೆಯಿಂದ ಢವಳೇಶ್ವರ (ಮಹಾಲಿಂಗಪುರ ಬಳಿ) ಹತ್ತಿರ ಘಟಪ್ರಭಾ ನದಿಗೆ ಬೃಹತ್‌ ಸೇತುವೆ ನಿರ್ಮಾಣಕ್ಕೆ 10 ಕೋಟಿ, ರಬಕವಿ-ಬನಹಟ್ಟಿ ತಾಲೂಕಿನ ಮಹಿಷವಾಡಗಿ ಬಳಿಕ ಸೇತುವೆ ನಿರ್ಮಾಣಕ್ಕೆ 15 ಕೋಟಿ ಬಜೆಟ್‌ನಲ್ಲಿ ಘೋಷಿಸಿ, 2017ರಲ್ಲಿ ಸ್ವತಃ ಅಂದಿನ ಲೋಕೋಪಯೋಗಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಭೂಮಿಪೂಜೆ ಮಾಡಿ ಹೋಗಿದ್ದರು. ಈ ಎರಡು ಸೇತುವೆ ಕಾಮಗಾರಿಗಳು, ಆರಂಭಗೊಂಡಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅನುದಾನ ಬಂದಿಲ್ಲ ಎಂಬ ಉತ್ತರ ಕೊಡುತ್ತಿದ್ದಾರೆ.

ಕೆರೂರ ಏತ ನೀರಾವರಿ ಮಾಡ್ತಾರಾ: ಈ ಬಾರಿ ಬಾದಾಮಿ ತಾಲೂಕಿನ ಕೆರೂರ ಏತ ನೀರಾವರಿ ಯೋಜನೆ ಘೋಷಣೆ ಮಾಡಿದ್ದು, ಇದಕ್ಕೆ 300 ಕೋಟಿ ಅನುದಾನ ಮೀಸಲಿಟ್ಟಿದ್ದಾಗಿ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ. ವಾಸ್ತವದಲ್ಲಿ ಇದು 525 ಕೋಟಿ ಮೊತ್ತದ ಯೋಜನೆ, ಬೀಳಗಿ ತಾಲೂಕಿನ ಅನಗವಾಡಿ ಬಳಿ ಜಾಕ್‌ವೆಲ್‌ ನಿರ್ಮಿಸಿ, ಅಲ್ಲಿಂದ ಹೂಲಗೇರಿ ವರೆಗೆ ಲಿಫ್ಟ್‌ ಮಾಡಬೇಕು. ಅಲ್ಲಿಂದ ಈಗಾಗಲೇ ಘಟಪ್ರಭಾ ಬಲದಂಡೆ ಯೋಜನೆಯಡಿ ನಿರ್ಮಿಸಿದ ಕಾಲುವೆಗಳಿಗೆ ನೀರು ಹರಿಸಬೇಕು. ಆ ಮೂಲಕ ಬಾದಾಮಿ ತಾಲೂಕಿನ 16 ಹಳ್ಳಿಗಳ ಸುಮಾರು 16 ಸಾವಿರ ಹೆಕ್ಟೇರ್‌ ಭೂಮಿಗೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ಈ ಭಾಗಕ್ಕೆ ನೀರಾವರಿ ಕಲ್ಪಿಸಬೇಕೆಂಬ ಮನವಿ, ಹೋರಾಟ ಕಳೆದ 10 ವರ್ಷಗಳಿಂದಲೂ ಕೇಳಿ ಬಂದಿತ್ತು. ಇದೀಗ, ಸಿದ್ದರಾಮಯ್ಯ ಕೆರೂರ ಏತ ನೀರಾವರಿ ಯೋಜನೆ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅದು ಅನುಷ್ಠಾನಕ್ಕೆ ಬರಬೇಕು ಎಂಬುದು ಕೆರೂರ ಭಾಗದ ರೈತರ ಒತ್ತಾಯ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next