Advertisement

ಬಯಕೆ ದೀರ್ಘಕಾಲವಿದ್ದು ಈಡೇರುವವರೆಗೂ ಉತ್ಸಾಹವಿರಲಿ: ಸಿದ್ದೇಶ್ವರ ಶ್ರೀ

06:54 PM Aug 27, 2021 | Team Udayavani |

ಬನಹಟ್ಟಿ : ಕನಸುಗಳನ್ನು ಸಾಕಾರವಾಗುವಂತೆ ಕಾಣಬೇಕು. ಅಧಿಕಾರ ಹಾಗೂ ಜನರ ಮಧ್ಯ ಪರಸ್ಪರ ಭಾವದಿಂದ ಇಚ್ಛೆ ಪೂರೈಕೆಯಾಗುವವರೆಗೂ ಪ್ರಯತ್ನವಿರಬೇಕು. ದೀರ್ಘಕಾಲದ ಬಯಕೆಯಿರಬೇಕಾದರೆ ಉತ್ಸಾಹ ಕೊನೆಯವರೆಗಿದ್ದರೆ ಮಾತ್ರ ಈಡೇರುವದೆಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನುಡಿದರು.

Advertisement

ಅವರು ಶುಕ್ರವಾರ ರಬಕವಿಯ ದಲಾಲ ಫಾರ್ಮ್ ಹೌಸ್‌ನ `ಹಸಿರು ಸಿರಿ’ ತೋಟದಲ್ಲಿ ಜರುಗಿದ ಜಮಖಂಡಿ ಉಪವಿಭಾಗದ ಅಭಿವೃದ್ಧಿ ಕುರಿತು ಚಿಂತನ ಗೋಷ್ಠಿ-2 ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಆದರ್ಶ ತಾಲೂಕು ಸಮೂಹವಾಗುವಲ್ಲಿ ರಬಕವಿ-ಬನಹಟ್ಟಿ, ಬೀಳಗಿ, ಜಮಖಂಡಿ ಹಾಗೂ ಮುಧೋಳ ಮಹತ್ವ ಪಡೆದಿವೆ. ಆರ್ಥಿಕ, ಉದ್ಯಮ, ಶಿಕ್ಷಣವು ಪರಸ್ಪರ ಸದ್ಭಾವನೆಯಲ್ಲಿ ಕೊರತೆಯಾಗಬಾರದು. ನಿಸರ್ಗದ ಮೇಲೆ ಪೆಟ್ಟು ಬೀಳದಂತೆ ಕಾಪಾಡಿಕೊಂಡು ದುಡಿಮೆಯಿರಬೇಕೆಂದು ಹೇಳಿದರು.

ನಿರಾಣಿ ಸಮೂಹ ಸಂಸ್ಥೆಯ ಸಿಎಂಡಿ ಸಂಗಮೇಶ ನಿರಾಣಿ ಮಾತನಾಡಿ, ಜಮಖಂಡಿ ಜಿಲ್ಲಾ ಕೇಂದ್ರ ಸ್ಥಾನವಾಗಬೇಕು. ಸರ್ಕಾರಕ್ಕೆ ರಾಜ್ಯದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವುದು ಜಮಖಂಡಿ ಉಪವಿಭಾಗವಾಗಿದೆ. ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳಾಗುವಲ್ಲಿ ಹಿಂದುಳಿದಿರುವುದು ವಿಪರ್ಯಾಸವೆಂದರು. ಈ ಹಿಂದೆ ಜಮಖಂಡಿ ಆಡಳಿತದ ಪ್ರಧಾನ ಸ್ಥಳವಾಗಿ, ಹೈಕೊರ್ಟ್ ಕೂಡ ಇತ್ತು. ಕುಡಚಿ-ಬಾಗಲಕೋಟ ರೈಲು ಮಾರ್ಗವಾಗಬೇಕು. ನೇಕಾರರ ಜೀವನಾಡಿಯಾದ ರಬಕವಿ-ಬನಹಟ್ಟಿಗೆ ಪೂರಕ ಜವಳಿ ಆಧಾರಿತ ಯೋಜನೆ ಹಾಗು ಜವಳಿ ಪಾರ್ಕ್, ನೂಲಿನ ಗಿರಣಿ ಉನ್ನತೀಕರಣ ಅವಶ್ಯವಿದೆ. ಉನ್ನತ ವ್ಯಾಸಾಂಗದ ಶಿಕ್ಷಣ ಸಂಸ್ಥೆ ಹಾಗೂ ಹೈಟೆಕ್ ಸರ್ಕಾರಿ ಆಸ್ಪತ್ರೆಯ ಅವಶ್ಯವಿದೆ ಎಂದರು.

ಉಪವಿಭಾಗದ ಅಭಿವೃದ್ಧಿಗಾಗಿ ಈಗಾಗಲೇ ಮೊದಲನೇಯ ಚಿಂತನಗೋಷ್ಠಿಯನ್ನು ಮುಧೋಳದಲ್ಲಿ ನಡೆಸಿದ್ದು, ಇದೀಗ ರಬಕವಿ-ಬನಹಟ್ಟಿಯಲ್ಲಿ ಯಶಸ್ವಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜಮಖಂಡಿ ಹಾಗೂ ಬೀಳಗಿಯಲ್ಲಿ ಕೊನೆಯದಾಗಿ ಅಧಿಕಾರಿ ವರ್ಗದ ಮಹತ್ವದ ಸಭೆ ನಡೆಸಿ ಸರ್ಕಾರಕ್ಕೆ ಮಾಹಿತಿ ತಲುಪಿಸುವ ವ್ಯವಸ್ಥೆಯಿದೆ ಎಂದು ಸಂಗಮೇಶ ನಿರಾಣಿ ತಿಳಿಸಿದರು.

ಇದನ್ನೂ ಓದಿ:ಚುನಾವಣೆ-ರಾಜಕೀಯ ಸಭೆಗಿಲ್ಲದ ನಿರ್ಬಂಧ ನಮಗ್ಯಾಕೆ?ವೀಕೆಂಡ್‌ ಕರ್ಫ್ಯೂ ಬೆಂಬಲಿಸಲ್ಲ

Advertisement

ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ ಮಾತನಾಡಿ, ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯು ಸದ್ಯ ಮುಧೋಳ ತಾಲೂಕಿನ ಶಿರೋಳ ಗ್ರಾಮದವರೆಗೆ ಮುಕ್ತಾಯಗೊಂಡಿದೆ. ಶೀಘ್ರವೇ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದವರೆಗೂ ಭೂಸ್ವಾಧೀನ ಕ್ರಿಯೆ ನಡೆಯಲಿದ್ದು, ಇದೀಗ ಖಜ್ಜಿಡೋಣಿಯಿಂದ ಲೋಕಾಪೂರದವರೆಗೆ ಸುಮಾರು 10 ಕಿ.ಮೀನಷ್ಟು ರೈಲು ಮಾರ್ಗವೂ ಮುಕ್ತಾಯಗೊಂಡಿದೆ ಎಂದು ತಿಳಿಸಿದರು. ರಬಕವಿ-ಬನಹಟ್ಟಿ ತಾಲೂಕಿಗೆ ಮಿನಿ ವಿಧಾನಸೌಧಕ್ಕೆ 4 ಎಕರೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗದುಗಿನ ಶಿವಾನಂದ ಮಠದ ಕೈವಲ್ಯನಾಥ ಶ್ರೀಗಳು, ಐನಾಪುರದ ಗುರುದೇವ ಆಶ್ರಮದ ಬಸವೇಶ್ವರ ಶ್ರೀ, ಕರಿಕಟ್ಟಿಯ ಡಾ. ಬಸವರಾಜ ಶ್ರೀಗಳು ಹಾಗು ಹರ್ಷಾನಂದ ಸ್ವಾಮೀಜಿ ವೇದಿಕೆ ಮೇಲಿದ್ದರು.

ಜಮಖಂಡಿ ಉಪವಿಭಾಗಾದ ಸಮಗ್ರ ಅಭಿವೃದ್ಧಿ ಕುರಿತು ಭೀಮಶಿ ಮಗದುಮ್, ಪ್ರೊ. ಬಸವರಾಜ ಕೊಣ್ಣೂರ, ಬಸವರಾಜ ದಲಾಲ, ರಾಮಣ್ಣ ಹುಲಕುಂದ, ಡಾ. ರವಿ ಜಮಖಂಡಿ, ಪ್ರಭು ಉಮದಿ, ಮಹಾದೇವಿ ಪಾಟೀಲ, ಸಂಜಯ ಜವಳಗಿ, ಪಿ.ಎನ್. ಪಾಟೀಲ, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟ, ಮಲ್ಲಿಕಾರ್ಜುನ ಹೆಗ್ಗಳಗಿ, ಅಶೋಕ ಕುಲಕರ್ಣಿ, ಜಯರಾಮಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.

ಮಲ್ಲಿಕಾರ್ಜುನ ಹುಲಬಗಾಳಿ ಸ್ವಾಗತಿಸಿದರು. ಸಾಹಿತಿ ಸಿದ್ಧರಾಜ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಾನಂದ ದಾಶ್ಯಾಳ ನಿರೂಪಿಸಿದರು. ಶ್ರೀಶೈಲ ದಲಾಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next