Advertisement

ಪರವಾನಿಗೆ ಪಡೆದರೂ ಗಣಪತಿ ಪೆಂಡಾಲ್ ಕಿತ್ತ ವ್ಯವಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ

04:30 PM Sep 09, 2021 | Team Udayavani |

ಮಹಾಲಿಂಗಪುರ : ಸರಕಾರದ ಮಾರ್ಗಸೂಚಿಯಂತೆ ಪುರಸಭೆ ಮತ್ತು ಹೆಸ್ಕಾಂ, ಪೊಲೀಸ್ ಠಾಣೆಯಿಂದ ಅಧಿಕೃತ ಪರವಾನಗಿ ಪಡೆದುಕೊಂಡು, ಗಣಪತಿ ಪ್ರತಿಷ್ಠಾಪನೆಗಾಗಿ ಪಟ್ಟಣದ ವಿವಿಧ ವೃತ್ತ ಮತ್ತು ಗಲ್ಲಿಗಳಲ್ಲಿ ಗಜಾನನ ಯುವಕ ಮಂಡಳಿಯವರು ಪೆಂಡಾಲ್ ಹಾಕುತ್ತಿದ್ದರು.

Advertisement

ಆದರೆ ಬುಧವಾರ ತಡರಾತ್ರಿ 12 ಗಂಟೆಗೆ ಪೊಲೀಸರು ಏಕಾಏಕಿ ನಗರದಲ್ಲಿನ ಎಲ್ಲಾ ಗಣಪತಿ ಪೆಂಡಾಲ್ ಗಳನ್ನು ತೆರವುಗೊಳಿಸಿದ್ದಾರೆ. ಪರವಾನಗಿ ಪಡೆದು ಹಾಕುತ್ತಿದ್ದರೂ ಸಹ ಪೊಲೀಸರು ಪೆಂಡಾಲ್ ತೆರವುಗೊಳಿಸಿರುವ ಕ್ರಮವನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಗಜಾನನ ಯುವಕ ಮಂಡಳಿಗಳ ಸದಸ್ಯರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಪೋಲಿಸ್ ನಡೆ ಹಾಗೂ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿದರು.

ಪುರಸಭೆ ಸದಸ್ಯ, ಆರ್ ಎಸ್ ಎಸ್ ಕಾರ್ಯಕರ್ತ ರವಿ ಜವಳಗಿ ಮಾತನಾಡಿ ಹಿಂದೂಗಳ ಬೆಂಬಲದಿಂದ ಚುನಾಯಿತರಾಗಿ ಹಿಂದೂ ಧರ್ಮದ ಆಚರಣೆಗಳಿಗೆ ತಡೆಮಾಡುತ್ತಿರುವ ಸಿಎಂ ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರಿಗೆ ಗಣಪತಿಯ ಶಾಪ ತಟ್ಟಲಿದೆ.

15 ದಿನಗಳ ಹಿಂದೆ ಅನ್ಯ ಧರ್ಮೀಯರ ಹಬ್ಬದ ಆಚರಣೆಯಲ್ಲಿ ಸಾವಿರಾರು ಜನರು ಸೇರಿದ್ದರು, ಆದರೆ ಆಗ ಬಾರದ ಕೋವಿಡ್ ಗಣಪತಿ ಹಬ್ಬಕ್ಕೆ ಮಾತ್ರ ಏಕೆ ಬರುತ್ತದೆ.? ಕೊರೊನಾ ನೆಪದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಿರೀ. ನೀವು ಪರವಾಣಿ ಕೊಟ್ಟರು, ಕೊಡದೇ ಇದ್ದರು ಸಹ, ಪೆಂಡಾಲ್ ಹಾಕಿ ಗಣೇಶೋತ್ಸವ ಮಾಡುತ್ತೇವೆ. ಸಂಘರ್ಷದಿಂದ ಬೆಳೆದುಬಂದ ಹಿಂದೂ ಕಾರ್ಯಕರ್ತರು ಕೇಸ್ ಗಳಿಗೆ ಹೆದರುವದಿಲ್ಲ. ವಿಜಯಪುರ, ಹುಬ್ಬಳ್ಳಿ, ಧಾರವಾಡಗಳಲ್ಲಿ ಪರವಾನಿಗೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಏಕೆ ಹೀಗೆ ? ಸರಕಾರ ಒಂದು ಕಣ್ಣಿಗೆ ಸುಣ್ಣ , ಒಂದು ಕಣ್ಣಿಗೆ ಬೆಣ್ಣೆ ಎಂಬಂತ ಭೇದಭಾವ ಮಾಡಬಾರದು, ಗಣೇಶೋತ್ಸವವಕ್ಕೆ ಅವಕಾಶ ನೀಡದಿದ್ದರೇ ಮುಂದೆ ಆಗುವ ಅನಾಹುತಗಳಿಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ಅವರೇ ನೇರ ಹೊಣೆಗಾರರು ಎಂದರು.

ಆಡಳಿತ ಪಕ್ಷ ಬಿಜೆಪಿ ಸದಸ್ಯರಾಗಿ ನೀವೇ ನಿಮ್ಮ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುವುದು ಎಷ್ಟೊಂದು ಸರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಂಘಟನೆಯ ಕಾರ್ಯಕರ್ತರಾದ ನಮಗೆ ಮೊದಲು ಧರ್ಮ, ದೇಶ ಮುಖ್ಯ.  ನಂತರ ರಾಜಕಾರಣ, ಅಧಿಕಾರ ಎಂದರು.

Advertisement

ಸಾಮಾಜಿಕ ಹೋರಾಟಗಾರ ಗುರುಲಿಂಗಯ್ಯ ಮಠಪತಿ, ಅನೀಲ ಕಿರಿಕಿರಿ, ರಾಘು ಗರಗಟ್ಟಿ, ಭರತ ಕದ್ದಿಮನಿ ಮಾತನಾಡಿ ಬೇರೆ ಊರುಗಳ ಸಾಕ್ಷಿ ಹೇಳಿ, ಗಣಪತಿ ಪೆಂಡಾಲ್ ತೆಗಿಸಿದ್ದು ಸರಿಯಲ್ಲ. ಕೆಲ ವರ್ಷಗಳ ಹಿಂದೆ ಮುಧೋಳ ದಲ್ಲಿ ಗಣೇಶೋತ್ಸವ ದಂಗೆ ಆಗಿದೆ. ಆದರೆ ಭಾವೈಕ್ಯತೆಗೆ ಹೆಸರಾದ ಮಹಾಲಿಂಗಪುರದಲ್ಲಿ ಇಲ್ಲಿಯವರೆಗೆ ಅಂತಹ ಯಾವುದೇ ಅಹಿತರ ಘಟನೆಗಳು ನಡೆದಿಲ್ಲ. ಅದಕ್ಕಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲು ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಎಸ್ ಪಿಯವರಿಗೆ ಒತ್ತಾಯಿಸಿದರು.

ಇದನ್ನೂ ಓದಿ:ಗೋವಾದಲ್ಲಿ ಗಣೇಶ ಚತುರ್ಥಿಗೆ ಪುರೋಹಿತರ ಕೊರತೆ! ಕಾರಣ…

ನಂದು ಲಾತೂರ, ರಾಘು ಚಿಂಚಲಿ, ಮನೀಶ್ ಬೆಳಗಾಂವಕರ, ಮಹಾಂತೇಶ್ ಬುಡೇಜಾಡರ,ಶಿವಾನಂದ ಹುಣಶ್ಯಾಳ, ಮಹಾಲಿಂಗಪ್ಪ ಕಂಕನವಾಡಿ,ಕೃಷ್ಣ ಕಳ್ಳಿಮನಿ, ಯಲ್ಲಪ್ಪ ಬನ್ನೆನ್ನವರ, ಚನ್ನಪ್ಪ ಪಟ್ಟಣಶೆಟ್ಟಿ, ಈಶ್ವರ ಹಿಟ್ಟಿನಮಠ, ವಿನೋದ ಸಿಂಪಿ, ಶಂಕರ ಸೊನ್ನದ, ಪುರಸಭೆ ಬಿಜೆಪಿ ಸದಸ್ಯರು, ವಿವಿಧ ಗಜಾನನ ಮಂಡಳಿಯ ಸದಸ್ಯರು ಹಿಂದೂಪರ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಠಾಣಾಧಿಕಾರಿ ಹೇಳಿಕೆ : ಸರ್ಕಾರದ ಮಾರ್ಗಸೂಚಿಯಂತೆ ರಸ್ತೆಗಳ ಮಧ್ಯೆ ಪೆಂಡಾಲ್ ಹಾಕಲು ಅವಕಾಶವಿಲ್ಲ. ದೇವಸ್ಥಾನಗಳಲ್ಲಿ, ರಸ್ತೆ ಪಕ್ಕದ ಖಾಲಿ ಜಾಗಗಳಲ್ಲಿ ಅಥವಾ ಖಾಲಿ ಇರುವ ಖಾಸಗಿ ಜಾಗಗಳಲ್ಲಿ ಗಣೇಶೋತ್ಸವ ಪೆಂಡಾಲ್ ಹಾಕಿ ಕೋವಿಡ್ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಿಸಬೇಕು ಎಂದು ಎಲ್ಲಾ ಗಣೇಶೋತ್ಸವ ಕಮೀಟಿಯ ಮಂಡಳಿಗಳಿಗೆ ತಿಳಿಸಲಾಗಿದೆ ಎಂದು ಮಹಾಲಿಂಗಪುರ ಠಾಣಾಧಿಕಾರಿ ವಿಜಯ ಕಾಂಬಳೆ ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next