Advertisement
ಹೌದು, ಬಾದಾಮಿ ತಾಲೂಕಿನ ಯರಗಟ್ಟಿ-ಕಮತಗಿ ರಾಜ್ಯ ಹೆದ್ದಾರಿ ಮೇಲಿರುವ ಕೆಂದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿಯನ್ನೊಮ್ಮೆ ನೋಡಿದರೆ ಗಾಬರಿಯಾಗುತ್ತದೆ. ಈ ಶಾಲೆಯ ಮೂರು ಕಟ್ಟಡಗಳು ಈಗಲೋ-ಆಗಲೋ ಬೀಳುವ ಹಂತದಲ್ಲಿವೆ. ಇಂತಹ ಕೊಠಡಿಯಲ್ಲೇ ಮಕ್ಕಳು ನಿತ್ಯ ಶಿಕ್ಷಣ ಕಲಿಯುವ ಅನಿವಾರ್ಯತೆ ಇದೆ.
Related Articles
Advertisement
ಗಾಳಿ-ಮಳೆ ಬಂದರೆ, ಹಂಚು-ಕೊಠಡಿ ಯಾವಾಗ ಬೀಳುತ್ತವೆ ಎಂಬ ತೀವ್ರ ಆತಂಕದಲ್ಲೇ ನಿತ್ಯ ಮಕ್ಕಳು ಜ್ಞಾನಾರ್ಜನೆ ಮಾಡುವಂತಾಗಿದೆ. ಇನ್ನೊಂದೆಡೆ, ಶಿಕ್ಷಕರೂ, ಬೇರೆ ದಾರಿ ಇಲ್ಲದೇ, ತಾವೂ ಆತಂಕದಲ್ಲೇ ನಿಂತು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. 40 ವರ್ಷಗಳ ಹಳೆಯ ಕಟ್ಟಡ, ದುರಸ್ತಿಗೊಳಿಸುವ ಅಥವಾ ಹೊಸ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಗ್ರಾಮಸ್ಥರದ್ದು.
ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ: ಬಾದಾಮಿಯಿಂದ 8 ಕಿ.ಮೀ ದೂರದಲ್ಲಿರುವ, ಯರಗಟ್ಟಿ-ಕಮತಗಿ ರಾಜ್ಯ ಹೆದ್ದಾರಿ (ಕೆಸಿಫ್)ಯ ಮಹಾಕೂಟ ಪಕ್ಕದಲ್ಲೇ ಇರುವ ಈ ಪ್ರಮುಖ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಇಡೀ ಗ್ರಾಮಕ್ಕೊಂದೇ ಈ ಶಾಲೆ ಇದ್ದು, ಸರ್ಕಾರಿ ಶಾಲೆಗೆ ಉತ್ತೇಜನ ನೀಡುವ ಜತೆಗೆ ಗ್ರಾಮೀಣ ಮಕ್ಕಳು, ನಿರ್ಭಯವಾಗಿ ನಿತ್ಯ ಶಿಕ್ಷಣ ಕಲಿಯುವ ವಾತಾವರಣ ರೂಪಿಸಲು ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಲಿ ಎಂಬುದು ಗ್ರಾಮಸ್ಥರ ಒತ್ತಾಯ.
ಶಾಸಕರ ಗಮನಕ್ಕೆ ತರುವೆಕೆಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂರು ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇರುವುದು ಗಮನಕ್ಕೆ ಬಂದಿರಲಿಲ್ಲ. ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬಂದಾಗ ಈ ಶಾಲೆಯ ಪರಿಸ್ಥಿತಿ ಕುರಿತು ಗಮನಕ್ಕೆ ತರಲಾಗುವುದು. ಕೊಠಡಿ ಮಂಜೂರು ಅಥವಾ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗುವುದು.
• ಹೊಳೆಬಸು ಶೆಟ್ಟರ,ಕಾಂಗ್ರೆಸ್ ಮುಖಂಡ ಗ್ರಾಪಂ ಇದೆ; ಅಧಿಕಾರ ಇಲ್ಲ!
ಗ್ರಾಪಂ ಪುನರ್‌ವಿಂಗಡಣೆಗೂ ಮುಂಚೆ ಆಡಗಲ್ಲ ಗ್ರಾಪಂ ವ್ಯಾಪ್ತಿಯಲ್ಲಿದ್ದ ಕೆಂದೂರ ಗ್ರಾಮವನ್ನು ಪ್ರತ್ಯೇಕ ಪಂಚಾಯತಯನ್ನಾಗಿ ಮಾಡಲಾಗಿತ್ತು. ಇದರಡಿ ಕೆಂದೂರ, ಕೆಂದೂರ ತಾಂಡಾ, ಕುಟಕನಕೇರಿ ಸೇರಿಸಲಾಗಿತ್ತು. ಕುಟಕನಕೇರಿ ಗ್ರಾಮಸ್ಥರು, ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿ, ಗ್ರಾಪಂ ಚುನಾವಣೆಯನ್ನೇ ಬಹಿಷ್ಕರಿಸಿದ್ದರು. ಹೀಗಾಗಿ ಕೆಂದೂರ ಗ್ರಾಪಂ ವ್ಯಾಪ್ತಿಯ ತಾಂಡಾ ಮತ್ತು ಗ್ರಾಮದ 2 ವಾರ್ಡ್‌ಗಳ 7 ಸದಸ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಈಗಲೂ 7 ಸದಸ್ಯರು ಆಯ್ಕೆಯಾದರೂ ಗ್ರಾಪಂಗೆ ಅಧ್ಯಕ್ಷ- ಉಪಾಧ್ಯಕ್ಷರಿಲ್ಲ. ಹೀಗಾಗಿ ಗ್ರಾಮದ ಯಾವುದೇ ಸಮಸ್ಯೆ ಹೇಳಿಕೊಳ್ಳಬೇಕಿದ್ದರೂ, ಆಡಳಿತಾಧಿಕಾರಿಯಾಗಿರುವ ತಾಪಂ ಇಒ ಬಳಿಗೆ ಹೋಗಬೇಕಿದೆ. ಕೆಂದೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಕುರಿತು ಇಒ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.