Advertisement

ನಿಪ್ಪಾಣಿಯೇ ಜಿಲ್ಲಾ ಕೇಂದ್ರವಾಗಲಿ: ಪಾಟೀಲ ಪುಟ್ಟಪ್ಪ 

04:42 PM Dec 03, 2018 | |

ಬಾಗಲಕೋಟೆ: ಬೆಳಗಾವಿ ಜಿಲ್ಲೆಯಲ್ಲಿ ಮೂರು ಹೊಸ ಜಿಲ್ಲೆ ಆಗಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಇನ್ನೂ ಕೆಲವರು ಈಗ ಇದ್ದಂತೆಯೇ ಬೆಳಗಾವಿ ಜಿಲ್ಲೆ ಮುಂದುವರೆಯಲಿ ಎನ್ನುತ್ತಾರೆ. ಆದರೆ, ಪ್ರಸ್ತಾಪಗೊಳ್ಳುವ ಮೂರು ನಗರಗಳಿಗಿಂತಲೂ ನಿಪ್ಪಾಣಿ ದೊಡ್ಡದು. ಅದು ರಾಜ್ಯದಲ್ಲಿ ಸುರಕ್ಷಿತವಾಗಿರಲು ನಿಪ್ಪಾಣಿಯೇ ಜಿಲ್ಲಾ ಕೇಂದ್ರವಾಗಬೇಕು ಎಂದು ಹಿರಿಯ ಹೋರಾಟಗಾರ ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.

Advertisement

ಪತ್ರಿಕಾ ಭವನದಲ್ಲಿ ರವಿವಾರ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ ಹಾಗೂ ಚಿಕ್ಕೋಡಿ ಜಿಲ್ಲೆಗಳಾಗಬೇಕು ಎಂದು ಹಲವರು ನಿರಂತರ ಒತ್ತಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈಗ ಇರುವಂತೆಯೇ ಮುಂದುವರಿಯಲಿ ಎನ್ನುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮೂರು ನಗರಗಳಿಗಿಂತ ನಿಪ್ಪಾಣಿ ದೊಡ್ಡದು. ಅದು ಮಹಾರಾಷ್ಟ್ರಕ್ಕೆ ಸೇರಿದೆ ಎಂಬಂತೆ ಕೆಲವರು ಮಾತನಾಡಿಕೊಳ್ಳುತ್ತಾರೆ. ನಿಪ್ಪಾಣಿ, ಕರ್ನಾಟಕದಲ್ಲಿ ಸುರಕ್ಷಿತವಾಗಿರಲು ಅದನ್ನೇ ಜಿಲ್ಲಾ ಕೇಂದ್ರವಾಗಿ ಮಾಡಬೇಕು. ಅಖಂಡ ಕರ್ನಾಟಕದ ಬಗ್ಗೆ, ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವುದು ಸುಲಭ. ಎಲ್ಲವನ್ನೂ ಸಮನಾಗಿ ಕಾಣುವ ಹೃದಯ ವೈಶಾಲ್ಯತೆ ಎಲ್ಲರಲ್ಲೂ ಇಲ್ಲ. ಹೃದಯ ವೈಶಾಲ್ಯತೆ ಇಲ್ಲದೇ ಇರುವುದರಿಂದ ಸಮಸ್ಯೆ ಜಟಿಲಗೊಳ್ಳುತ್ತಿವೆ ಎಂದರು.

ಕರ್ನಾಟಕ ಅಖಂಡವಾಗಲು ಮೈಸೂರಿಗರಿಗೆ ಬೇಕಾಗಿರಲಿಲ್ಲ. ಅದಕ್ಕಾಗಿ ಹೆಚ್ಚು ಹೋರಾಟ ಮಾಡಿದವರೇ ಉತ್ತರ ಕರ್ನಾಟಕ ಭಾಗದವರು. ಹೀಗಾಗಿ ನನಗೆ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಸದಸ್ಯತ್ವ ನೀಡುವಾಗ ನಾರಾಯಣ ಎಂಬುವವರು, ಉತ್ತರ ಕರ್ನಾಟಕ ಪ್ರಸ್ತಾಪಿಸಿ, ನಿಮಗೆ ಆ ಭಾಗದ ಗೌರವದೊಂದಿಗೆ ಸದಸ್ಯತ್ವ ನೀಡುತ್ತಿರುವುದಾಗಿ ಹೇಳಿದ್ದರು. ನಾನು ಕೇವಲ ಉತ್ತರ ಕರ್ನಾಟಕದವನಲ್ಲ. ಅಖಂಡ ಕರ್ನಾಟಕದವನು. ಒಂದೇ ಪ್ರದೇಶ ಗುರುತಿಸಿ ಕೊಡುವುದಾದರೆ ಬೇಡ ಎಂದು ಪ್ರಸ್ತಾಪಿಸಿದ್ದೆ ಎಂದರು. ರಾಜ್ಯದ ರಾಜಧಾನಿ ಮಧ್ಯ ಭಾಗದಲ್ಲಿ ಇರಬೇಕಿತ್ತು. ಮೊದಲೇ ತಪ್ಪು ಆಗಿದೆ. ಬೀದರನವರು ಬೆಂಗಳೂರಿಗೆ ಬರಲು 675 ಕಿಮೀ ದೂರ ಬರಬೇಕು. ಅವರು ಅಷ್ಟು ದೂರದಿಂದ ಹೋಗಿ ಕೆಲಸ ಮಾಡಿಕೊಳ್ಳಲು ಎಷ್ಟು ಕಷ್ಟ ಎಂಬುದು ಆ ಭಾಗದವರಿಗೇ ಗೊತ್ತು. ಇನ್ನು ಮೈಸೂರು ಭಾಗದ ಪತ್ರಕರ್ತರು, ಅಲ್ಲಿನ ಜನರಿಗೆ ಅಖಂಡ ಕರ್ನಾಟಕದ ಬಗ್ಗೆ ಗೊತ್ತೇ ಇಲ್ಲ. ತಿಳಿವಳಿಕೆಯೂ ಇಲ್ಲ ಎಂದರು. ಮೈಸೂರು ಭಾಗದವರಿಗೆ ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ಅಭಿಮಾನ ಇರಬೇಕು. ಕಾಸರಗೋಡು ಸಮೀಪದ ತಾಳವಾಡ ಎಂಬ ಪ್ರದೇಶದಲ್ಲಿ 19 ಗ್ರಾಮಗಳ ಜನರಿಗೆ ತಮಿಳು ಬರಲ್ಲ. ಅವರೆಲ್ಲ ಕನ್ನಡವೇ ಮಾತನಾಡುತ್ತಾರೆ. ಅವರಿಗಾಗಿ ಮೈಸೂರಿನವರು ಏನು ಮಾಡಿದ್ದಾರೆ? ರಾಜ್ಯದಲ್ಲಿ ಸಕ್ರಿಯವಾಗಿರುವ ಕನ್ನಡಪರ ಸಂಘಟನೆಗಳ ಪ್ರಮುಖರಿಗೆ ಅಖಂಡ ಕರ್ನಾಟಕದ ಬಗ್ಗೆ ಅಧ್ಯಯನ ಮತ್ತು ತಿಳವಳಿಕೆ ಇಲ್ಲ. ಕನ್ನಡ ಎಂದರೆ, ಹೈದ್ರಾಬಾದ್‌, ಮುಂಬೈ ಕರ್ನಾಟಕವೂ ಒಳಗೊಂಡಿದೆ. ಈ ಭಾಗದ ಬೀದರ, ವಿಜಯಪುರ, ಬಾಗಲಕೋಟೆ ಬಗ್ಗೆ ಅವರಿಗೆ ಎಷ್ಟು ಗೊತ್ತಿದೆ ಎಂದರು.

ರಾಜಕಾರಣಿಗಳಿಗೆ ಆಸಕ್ತಿ ಇಲ್ಲ: ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಇದಕ್ಕೆ ರಾಜಕಾರಣಿಗಳ, ಅಧಿಕಾರ ನಡೆಸುವವರ ನಿರ್ಲಕ್ಷ್ಯ ಕಾರಣ. ಶಾಸಕರಾದವರು ಅಭಿವೃದ್ಧಿಗಿಂತ ವರ್ಗಾವಣೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಪೊಲೀಸ್‌ ಇಲಾಖೆಯಲ್ಲಿ ಹೆಚ್ಚು ವರ್ಗಾವಣೆಗೆ ಹಣ ದೊರೆಯುತ್ತದೆ. ಹೀಗಾಗಿಯೇ ಆ ಇಲಾಖೆಯಲ್ಲಿ ಹೆಚ್ಚು ವರ್ಗಾವಣೆ ವ್ಯವಹಾರವಾಗಿ ಪರಿವರ್ತನೆಯಾಗಿದೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಅಭಿವೃದ್ಧಿ ಹಾಗೂ ಬಡವರ ಬಗ್ಗೆ ಕಾಳಜಿ ಇದೆ. ಅವರಂತಹ ಕಾಳಜಿ-ಬದ್ಧತೆ ಎಲ್ಲ ರಾಜಕಾರಣಿಗಳಲ್ಲಿ ಇರಬೇಕು. ಸುವರ್ಣ ವಿಧಾನಸೌಧಕ್ಕೆ ಕೇವಲ ಸರ್ಕಾರಿ ಕಚೇರಿ ಸ್ಥಳಾಂತರಿಸಿದರೆ ಸಾಲದು. ಸಚಿವರ ಕಚೇರಿಗಳೂ ಬೆಳಗಾವಿಗೆ ಬರಬೇಕು. ಸಚಿವರು ಬೆಂಗಳೂರಿನಲ್ಲಿ, ಕಚೇರಿಗಳು ಬೆಳಗಾವಿಯಲ್ಲಿ ಅಂದ್ರೆ ಹೇಗೆ ಎಂದರು.

ಕಡಿಮೆ ಊಟ; ದೀರ್ಘ‌ಕಾಲ ಬದುಕು
ನಿತ್ಯ ಕಡಿಮೆ ಊಟ ಮಾಡಿ, ದೀರ್ಘ‌ ಕಾಲ ಬದುಕಿ ಎಂಬುದು ನನ್ನ ಆರೋಗ್ಯದ ಗುಟ್ಟು. ನಾನು ಒಂದು ಜೋಳದ ರೊಟ್ಟಿ, ತರಕಾರಿ ಊಟ ಬಿಟ್ಟರೆ ಬೇರೆ ತಿನ್ನಲ್ಲ. ಕಾಫಿ-ಟೀ ಅಂತೂ ಮುಟ್ಟಲ್ಲ. ಇದೇ ನನ್ನ ಆರೋಗ್ಯದ ಗುಟ್ಟು ಎಂದು ಪಾಟೀಲ ಪುಟ್ಟಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next