Advertisement
ಜಿಲ್ಲೆಯಲ್ಲಿ ಈ ವರೆಗೆ 14,025 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ 13,760 ಜನ ಕೊರೊನಾ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಕಳೆದ ಒಂದು ತಿಂಗಳಿಂದ 2ನೇ ಅಲೆ ಕಾಣಿಸಿಕೊಂಡಿದ್ದು, 125ಕ್ಕೂ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿದೆ. 2ನೇ ಅಲೆಯ ಭೀತಿ ಅಷ್ಟೊಂದು ಇಲ್ಲದಿದ್ದರೂ, ಜಿಲ್ಲಾಡಳಿತ ಚಿಕಿತ್ಸೆಗಾಗಿ ಎಲ್ಲ ತಯಾರಿ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
Related Articles
Advertisement
ಜಿಲ್ಲೆಯ 9 ತಾಲೂಕು ಕೇಂದ್ರಗಳಲ್ಲೂ ತಾಲೂಕು ಆಸ್ಪತ್ರೆ ಹಾಗೂ ವಿವಿಧ ವಸತಿ ನಿಲಯಗಳನ್ನು ಕೊರೊನಾ ಕೇರ್ ಸೆಂಟರ್ (ಸಿಸಿಸಿ ಕೇಂದ್ರ)ಗಳನ್ನಾಗಿ ಪರಿವರ್ತಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು 78 ಬೆಡ್‌ಗಳ (ಮೊದಲ ಮಹಡಿ) ಪ್ರತ್ಯೇಕ ವಿಭಾಗ ಕೂಡ ಇದೆ. ಇನ್ನೂ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಜಿಲ್ಲಾಸ್ಪತ್ರೆಯ ಇತರೆ ವಿಭಾಗಗಳನ್ನು ಬೇರೆಡೆ ಸ್ಥಳಾಂತರಿಸಿ, ಇಡೀ ಆಸ್ಪತ್ರೆಯನ್ನು ಮತ್ತೆ ಕೊರೊನಾ ಚಿಕಿತ್ಸೆ ಕೇಂದ್ರವನ್ನಾಗಿ ಮಾರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
12 ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧತೆ: ಜಿಲ್ಲಾಸ್ಪತ್ರೆಯ 78 ಬೆಡ್‌ಗಳ ಕೊರೊನಾ ಕೇಂದ್ರದಲ್ಲಿ ಸದ್ಯ 10 ಜನ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ 250 ಜನರಿಗೆ ಚಿಕಿತ್ಸೆ ಕೊಡಲು ಬೆಡ್‌ಗಳ ಲಭ್ಯತೆ ಇದೆ. ಜತೆಗೆ ಜಿಲ್ಲಾ ಕೇಂದ್ರದಲ್ಲಿ ಎರಡು ಸಿಸಿಸಿ ಕೇಂದ್ರ ಸ್ಥಾಪನೆಗೆ ವಸತಿ ನಿಲಯ ಗುರುತಿಸಲಾಗಿದೆ. ಇವುಗಳ ಜತೆಗೆ ಸೋಂಕಿತರು ಹೆಚ್ಚಾದರೆ, ವಿವಿಧ 12 ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಆರಂಭಿಸಲು ಸಿದ್ಧತೆಯಲ್ಲಿರಲು ಖಾಸಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಬುಧವಾರ 13 ಜನರಿಗೆ ಸೋಂಕು: ಜಿಲ್ಲೆಯಲ್ಲಿ ಬುಧವಾರ 5 ಜನ ಕೊರೊನಾ ಸೋಂಕಿನಿಂದ ಗುಣಮುಖರಾದರೆ, ಮತ್ತೆ 13 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 14025 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 13760 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ 4, ಜಮಖಂಡಿ 3, ಬೀಳಗಿ, ಮುಧೋಳ, ಹುನಗುಂದ ತಲಾ 2 ಹಾಗೂ ಬೇರೆ ಜಿಲ್ಲೆಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ಸರಕಾರಿ, ಖಾಸಗಿ ಹಾಗೂ ಹೋಮ್ ಐಸೋಲೇಷನ್‌ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈ ವರೆಗೆ 4,76,947 ಸ್ಯಾಂಪಲ್ ಪರೀಕ್ಷೆ ಮಾಡಿದ್ದು, ಅದರಲ್ಲಿ ಪೈಕಿ 4,58,143 ನೆಗಟಿವ್ ಬಂದಿದ್ದು, 14,025 ಜನರಿಗೆ ಪಾಜಿಟಿವ್ ಬಂದಿದೆ. ಸಧ್ಯ 129 ಜನ ಸಕ್ರಿಯ ಪ್ರಕರಣಗಳಿದ್ದು, 10 ಜನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-ಶ್ರೀಶೈಲ ಕೆ. ಬಿರಾದಾರ