Advertisement

ಕಾಂಗ್ರೆಸ್‌ಗೀಗ ಮುಜುಗರದ ಸಮಯ!

09:17 AM Jan 12, 2019 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಈಗ ಮುಜುಗರದ ಸಮಯ ಆರಂಭವಾಗಿದೆ. ಪಕ್ಷದ ನಾಯಕರು ಹಾಗೂ ಪ್ರಮುಖ ಕಾರ್ಯಕರ್ತರಲ್ಲಿನ ಗೊಂದಲ, ಅಸಮಾಧಾನದಿಂದ ಜಿಲ್ಲೆಯಲ್ಲಿ ಇಡೀ ಪಕ್ಷಕ್ಕೇ ಮುಜುಗರವಾಗುವ ಘಟನೆ ನಡೆಯುತ್ತಿವೆ ಎನ್ನಲಾಗಿದೆ.

Advertisement

ಒಂದೇ ವಾರದಲ್ಲಿ ಎರಡು ಘಟನೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಜತೆಗೆ ಮುಜುಗರ ಉಂಟು ಮಾಡಿದೆ ಎಂಬುದು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರ ಅಸಮಾಧಾನ.

ಏನಿದು ಮುಜುಗರ: ಜ.8ರಂದು ಜಿಲ್ಲೆಯ ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ಐವರು ಸಚಿವರು ಒಳಗೊಂಡ ಸಚಿವ ಸಂಪುಟ ಉಪ ಸಮಿತಿ ಸದಸ್ಯರು, ಬಿಜೆಪಿ ಶಾಸಕರ ಮನೆ (ಬಿಜೆಪಿ ಕಚೇರಿಗೂ)ಗೆ ಭೇಟಿ ನೀಡಿದ್ದರು. ಈ ಅಸಮಾಧಾನ, ಬೀಳಗಿಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದೆ. ಕಂದಾಯ ಸಚಿವರ ರಾಜೀನಾಮೆ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆವರೆಗೂ ಈ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಕಚೇರಿಗೆ ಕಾಂಗ್ರೆಸ್‌ನ ಐವರು ಸಚಿವರು ಭೇಟಿ ನೀಡಿ, ಉಪಾಹಾರ, ಸನ್ಮಾನ ಸ್ವೀಕರಿಸಿದ್ದು ತಪ್ಪು ಎಂದು ಕಾಂಗ್ರೆಸ್‌ನ ಹಿರಿಯರೂ ಒಪ್ಪಿಕೊಳ್ಳುತ್ತಾರೆ. ಆದರೆ, ಸೌಹಾರ್ದಯುತ ರಾಜಕೀಯ ಬಯಸುವ ಕೆಲವು ಮುತ್ಸದ್ಧಿಗಳು, ಕಾಂಗ್ರೆಸ್ಸಿಗರ ಮನೆಗೆ, ಬಿಜೆಪಿಗರು, ಬಿಜೆಪಿ ನಾಯಕರ ಮನೆಗೆ ಕಾಂಗ್ರೆಸ್ಸಿಗರು ಭೇಟಿ ಕೊಟ್ಟರೆ ತಪ್ಪೇನು. ರಾಜಕೀಯ ಅಂದ್ರೆ ಕೇವಲ ದ್ವೇಷ-ಅಸೂಯೆ ವಾತಾವರಣವೇ ಇರಬೇಕಾ ಎಂದು ಪ್ರಶ್ನಿಸುತ್ತಾರೆ. ಆದರೆ, ತಮ್ಮದೇ ಸಚಿವರು, ತಮ್ಮನ್ನು ಮಾತನಾಡಿಸದೇ, ಬಿಜೆಪಿಗರ ಮನೆಗೆ ಹೋಗಿರುವುದು ಕಾಂಗ್ರೆಸ್‌ನ ಹಲವರಿಗೆ ಆಕ್ರೋಶ ತರಿಸಿರುವುದು ಸುಳ್ಳಲ್ಲ.

ತಾ.ಪಂ.ನಲ್ಲೂ ಮುಜುಗರ: ಐವರು ಸಚಿವರು ಬಿಜೆಪಿ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಕಾಂಗ್ರೆಸ್ಸಿಗರಲ್ಲಿ ಮುಜುಗರವಾದ ಘಟನೆ ನಡೆದ ವಾರದೊಳಗೇ, ತಾ.ಪಂ. ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯಲ್ಲೂ ಕಾಂಗ್ರೆಸ್‌ಗೆ ಮುಜುಗರದ ಜತೆಗೆ ಹಿನ್ನಡೆಯೂ ಆದಂತಿದೆ.

Advertisement

ಬಾಗಲಕೋಟೆ ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ವಿರುದ್ಧ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು, ಅವಿಶ್ವಾಸ ನಿರ್ಣಯ ಮಂಡನೆಗೆ ಸ್ವಹಸ್ತಾಕ್ತರದ ಪತ್ರಬರೆದು, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. 2ನೇ ಮೂರರಷ್ಟು ಸದಸ್ಯರು ಅವಿಶ್ವಾಸಕ್ಕೆ ಮನವಿ ಸಲ್ಲಿಸಿದ್ದರಿಂದ, ಜಿಲ್ಲಾಧಿಕಾರಿಗಳು ವಿಶೇಷ ಸಭೆ ನಡೆಸಲು ಬಾಗಲಕೋಟೆ ತಾ.ಪಂ. ಅಧಿಕಾರಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಲಕೋಟೆ ತಾ.ಪಂ. ಸಭಾ ಭವನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ದಿನ ಮತ್ತು ಸಮಯ ನಿಗದಿಯಾದರೂ, ಸಭೆಯೇ ನಡೆಯಲಿಲ್ಲ. ಯಾರು ಅವಿಶ್ವಾಸ ನಿರ್ಣಯಕ್ಕೆ ಒತ್ತಾಯಿಸಿ ಪತ್ರ ಕೊಟ್ಟಿದ್ದರೋ ಅವರೇ ಸಭೆಗೆ ಬರಲಿಲ್ಲ. ಇದೂ ಕಾಂಗ್ರೆಸ್‌ಗೆ ಮುಜುಗರ, ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಎಂದು ಕಾಂಗ್ರೆಸ್‌ನ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಅಧಿಕಾರಕ್ಕಿರುವ ಬಲ; ಅವಿಶ್ವಾಸಕ್ಕಿಲ್ಲ: ಬಾಗಲಕೋಟೆ ತಾ.ಪಂ.ನ ಒಟ್ಟು 18 ಸದಸ್ಯರಲ್ಲಿ ಕಾಂಗ್ರೆಸ್‌ 11 ಹಾಗೂ ಬಿಜೆಪಿ ಏಳು ಸದಸ್ಯರಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಒಟ್ಟು ಸದಸ್ಯರ ಬಲದಲ್ಲಿ ಅರ್ಧದಷ್ಟು ಸದಸ್ಯರು ಒಂದು ಪಕ್ಷದಿಂದ ಆಯ್ಕೆಯಾಗಿರಬೇಕು. 9 ಸದಸ್ಯರಿರುವ ಪಕ್ಷಕ್ಕೆ ಅಧಿಕಾರ ಅಬಾಧಿತ. ಆದರೆ, ಕಾಂಗ್ರೆಸ್‌ಗೆ 11 ಸದಸ್ಯರಿದ್ದು, ಕಳೆದ 2015ರಲ್ಲಿ ಚನ್ನನಗೌಡ ಪರನಗೌಡರ ಮತ್ತು ಸಲೀಮ್‌ ಶೇಖ್‌ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರು.

ಬಹುಮತದೊಂದಿಗೆ ಅಧಿಕಾರಕ್ಕೆ ಬರಲು 9 ಸದಸ್ಯರ ಅಗತ್ಯವಿದ್ದರೆ, ಅವಿಶ್ವಾಸ ನಿರ್ಣಯ ಮಂಡನೆಗೆ ಕಡ್ಡಾಯವಾಗಿ 12 ಜನ ಸದಸ್ಯರ ಬಲ ಬೇಕೇಬೇಕು. ಹೀಗಾಗಿ ಅಧ್ಯಕ್ಷರೂ ಸೇರಿ ಕಾಂಗ್ರೆಸ್‌ನಲ್ಲಿ 11 ಸದಸ್ಯರಿದ್ದಾರೆ. ಅಧ್ಯಕ್ಷರು ತಮ್ಮ ವಿರುದ್ಧವೇ ನಡೆಯುವ ಅವಿಶ್ವಾಸ ನಿರ್ಣಯ ಸಭೆಗೆ ಬರುವುದಿಲ್ಲ. ಹೀಗಾಗಿ ಕಾಂಗ್ರೆಸ್‌ನ ಬಲ 10ಕ್ಕೆ ಕುಸಿಯುತ್ತದೆ. ಇದರಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಲಾಗುತ್ತದೆ ಎಂದು ಅರಿತು, ಶುಕ್ರವಾರ ನಡೆದ ಸಭೆಗೆ ಯಾರೂ ಆಗಮಿಸಿಲ್ಲ ಎಂಬ ಮಾತು ಕೇಳಿಬಂತು. ಇನ್ನು ಬಿಜೆಪಿ ಸದಸ್ಯರು ಮಾತ್ರ, ಕಾಂಗ್ರೆಸ್‌ನ ಒಳ ಜಗಳ ಕಂಡು, ಒಳಗೊಳಗೆ ಖುಷಿಪಟ್ಟು ಇಂದಿನ ಸಭೆಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.

ಗೌಡ್ರ ಅಧಿಕಾರಕ್ಕೆ ತೊಂದ್ರೆ ಇಲ್ಲ
ತಾಪಂ ಅಧ್ಯಕ್ಷ ಚನ್ನಗೌಡ ಪರನಗೌಡರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ನಡೆದಿಲ್ಲ. ಒಮ್ಮೆ ಅವಿಶ್ವಾಸ ನಿರ್ಣಯಕ್ಕೆ ಕರೆದ ದಿನ ಮತ್ತು ನಿಗದಿ ಸಮಯದೊಳಗೆ ನಡೆಸದಿದ್ದರೆ ಅದನ್ನು ಮುಂದೂಡಲು ಬರುವುದಿಲ್ಲ. ಇನ್ನು 20 ತಿಂಗಳ ವರೆಗೆ ಅವಿಶ್ವಾಸ ನಿರ್ಣಯ ಸಭೆಯನ್ನೇ ಕರೆಯಲು ಕರ್ನಾಟಕ ಪಂಚಾಯತ್‌ ಕಾನೂನಿನಡಿ ಅವಕಾಶವಿಲ್ಲ. ಅಲ್ಲದೇ ತಾ.ಪಂ. ಅಧ್ಯಕ್ಷರ ಐದು ವರ್ಷಗಳ ಅವಧಿ ಉಳಿದಿರುವುದು 18 ತಿಂಗಳು ಮಾತ್ರ. ಹೀಗಾಗಿ ಚನ್ನಗೌಡರು, ಉಳಿದ 18 ತಿಂಗಳು ಪೂರ್ಣಗೊಳಿಸಬಹುದು. ಇಲ್ಲವೇ ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟರೆ ಮಾತ್ರ ಬೇರೊಬ್ಬರಿಗೆ ಅವಕಾಶ ಸಿಗಲು ಸಾಧ್ಯ.

ಕೈಗೆ ಕೈಕೊಟ್ಟ ಬಿಜೆಪಿಗರು!
ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಭೆ ನಡೆಸಲು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಒಟ್ಟು ಸದಸ್ಯರಲ್ಲಿ ಕಾಂಗ್ರೆಸ್‌ನ 10 ಜನ ಹಾಗೂ ಬಿಜೆಪಿಯ 4 ಜನ ಸದಸ್ಯರಿದ್ದರು. ಬಿಜೆಪಿಯ ಇಬ್ಬರು ಸದಸ್ಯರು, ಆರಂಭದಲ್ಲೇ ಅವಿಶ್ವಾಸ ನಿರ್ಣಯ ಸಭೆಗೆ ನಾವು ಬರಲ್ಲ ಎಂದು ಇಬ್ಬರು ದೂರ ಸರಿದಿದ್ದರು. ಇನ್ನಿಬ್ಬರು ಬಿಜೆಪಿ ಸದಸ್ಯರಾದರೂ ಬೆಂಬಲ ಕೊಡುತ್ತಾರೆಂಬ ವಿಶ್ವಾಸ ಕಾಂಗ್ರೆಸ್‌ನ 10 ಸದಸ್ಯರಿಗಿತ್ತು. ಆದರೆ, ಗುರುವಾರ ರಾತ್ರಿ, ಬಿಜೆಪಿಯ ಆ ಇಬ್ಬರು ಸದಸ್ಯರೂ ಕೈಕೊಟ್ಟಿದ್ದರಿಂದ ಕಾಂಗ್ರೆಸ್‌ನ ಸದಸ್ಯರಿಗೆ ನಿರಾಶೆಯಾಗಿತ್ತು. ಅವಿಶ್ವಾಸ ನಿರ್ಣಯ ಸೋಲುತ್ತದೆ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಶುಕ್ರವಾರದ ಸಭೆಗೆ ಯಾರೂ ಹಾಜರಾಗಿಲ್ಲ ಎಂದು ಮೂಲಗಳು ಖಚಿಪಡಿಸಿವೆ.

ಪಕ್ಷಕ್ಕೆ ಇದೊಂದು ಪಾಠ
ತಾಪಂ ಸದಸ್ಯರು, ಅವಿಶ್ವಾಸ ನಿರ್ಣಯ ಮಂಡನೆಗೆ ಮುನ್ನ ಜಿಲ್ಲಾ ಕಾಂಗ್ರೆಸ್‌ ಸಮಿತಿಯೊಂದಿಗೆ ಚರ್ಚಿಸಿಲ್ಲ. ಚರ್ಚಿಸಿ, ಮುಂದುವರೆದಿದ್ದರೆ ಪಕ್ಷಕ್ಕೆ ಇಂದು ಆಗಿರುವ ಮುಜುಗರ ತಪ್ಪಿಸಬಹುದಿತ್ತು. ಇಂದಿನ ಘಟನೆಯಿಂದ ಪಕ್ಷಕ್ಕೆ ಒಂದು ಪಾಠವಾಗಿದೆ.
•ಎಂ.ಬಿ. ಸೌದಾಗರ,
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next