Advertisement

ಪ್ರದರ್ಶನಕ್ಕಿವೆ ಶುದ್ಧ ನೀರಿನ ಘಟಕಗಳು

04:06 PM Jan 30, 2020 | Naveen |

ಬಾಗಲಕೋಟೆ: ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರು ಪೂರೈಸುವ ಸರ್ಕಾರದ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ ಎಂಬ ಪ್ರಬಲ ಆರೋಪ ಕೇಳಿ ಬರುತ್ತಿದೆ. ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು, ಸಂಪೂರ್ಣ ಕಳಪೆಯಾಗಿದ್ದು, ಹಳ್ಳಿ ಜನರಿಗೆ ಶುದ್ಧ ನೀರು ಪೂರೈಸುತ್ತಿಲ್ಲ ಎಂಬ ಆಕ್ರೋಶ ಕೇಳಿ ಬಂದಿದೆ.

Advertisement

815 ಶುದ್ಧ ಘಟಕ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 815 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಜಿಪಂನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಭೂ ಸೇನಾ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೀಗೆ ಹಲವು ಸರ್ಕಾರಿ ಇಲಾಖೆಗಳಿಂದ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಭೂ ಸೇನಾ ನಿಗಮ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಫೂರ್ಣ ಕಳಪೆಯಾಗಿದ್ದು, ಬಹುತೇಕ ಎಲ್ಲ ಗ್ರಾಮಗಳಲ್ಲಿ ಘಟಕಗಳು ಆರಂಭಗೊಂಡಿಲ್ಲ.

ಕಳೆದ 2ರಿಂದ 3 ವರ್ಷಗಳಿಂದ ಈ ಶುದ್ಧ ಕುಡಿಯುವ ನೀರಿನ ಘಟಕಗಳು, ಗ್ರಾಮಗಳಲ್ಲಿ ಕೇವಲ ಪ್ರದರ್ಶನಕ್ಕೆ ಮಾತ್ರ ನಿರ್ಮಿಸಿದಂತಾಗಿದೆ ಎನ್ನಲಾಗಿದೆ. 815 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 608 ಘಟಕ ಚಾಲ್ತಿಯಲ್ಲಿದ್ದು, ಇನ್ನುಳಿದ 182 ಘಟಕ ದುರಸ್ತಿಯಲ್ಲಿವೆ. ಅವುಗಳ ದುರಸ್ತಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ 182ಕ್ಕೂ ಹೆಚ್ಚು ಘಟಕಗಳು ಜನರಿಗೆ ನೀರು ಕೊಡುತ್ತಿಲ್ಲ. ಅದರಲ್ಲೂ ಭೂ ಸೇನಾ ನಿಗಮ ಸ್ಥಾಪಿಸಿದ ಘಟಕಗಳು ದುರಸ್ತಿ ಮಾಡಿಸಿದ ವಾರದಲ್ಲೇ ಪುನಃ ಸ್ಥಗಿತಗೊಳ್ಳುತ್ತಿವೆ.

ಹೀಗಾಗಿ ಅವುಗಳ ನಿರ್ವಹಣೆಯೇ ದೊಡ್ಡ ತಲೆನೋವಾಗಿದೆ ಎಂದು ಗ್ರಾಪಂನ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭೂ ಸೇನಾ ನಿಗಮದ್ದೆ ಸಮಸ್ಯೆ: ಭೂ ಸೇನಾ ನಿಗಮಕ್ಕೆ ಒಟ್ಟು 389 ಘಟಕ ಮಂಜೂರಾಗಿದ್ದು, ಅದರಲ್ಲಿ 367 ಘಟಕ ಮಾತ್ರ ನಿರ್ಮಿಸಲಾಗಿದೆ. ಇನ್ನುಳಿದ 14
ಘಟಕಕ್ಕೆ ಅನುದಾನ ನೀಡಿದರೂ ಈ ವರೆಗೆ ನಿರ್ಮಾಣ ಮಾಡಿಲ್ಲ. ಅದರಲ್ಲೂ ನಿರ್ಮಿಸಿದ 367 ಘಟಕಗಳಲ್ಲಿ ಕೇವಲ 208 ಘಟಕಗಳು ಮಾತ್ರ ಚಾಲ್ತಿಯಲ್ಲಿವೆ. ಇನ್ನುಳಿದ 159 ಘಟಕಗಳು ಸ್ಥಗಿತಗೊಂಡಿವೆ. ಇದಕ್ಕೆ ಮೂಲ ಕಾರಣ, ಕಳಪೆ ಗುಣಮಟ್ಟದಿಂದ
ನಿಮಿಸಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಮೂರು ವರ್ಷದಿಂದ ಆರಂಭಗೊಂಡಿಲ್ಲ: ಬಾದಾಮಿ ತಾಲೂಕಿನ ಕೆಂದೂರ ಗ್ರಾಮದಲ್ಲಿ ಭೂ ಸೇನಾ ನಿಗಮದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಮೂರು ವರ್ಷ ಕಳೆದಿವೆ. ಈವರೆಗೆ ಒಂದು ದಿನವೂ ಈ ಘಟಕದಿಂದ ಹನಿ ನೀರೂ ಜನರ ಬಾಯಿಗೆ ಬಿದ್ದಿಲ್ಲ. ಘಟಕ ಆರಂಭಿಸಿ, ಜನರಿಗೆ ಶುದ್ಧ ನೀರು ಕೊಡಿ ಎಂದು ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿಕೊಂಡರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೆಂದೂರಿನ ಜನ, ಪಕ್ಕದ ಕುಟಕನಕೇರಿಗೆ ಹೋಗಿ ಶುದ್ಧ ನೀರು ತರುತ್ತಿದ್ದಾರೆ.

Advertisement

ಶುದ್ಧೀಕರಿಸದ ನೀರು ಸೇವನೆಯಿಂದ ಹಲವಾರು ರೋಗ ಹರಡುತ್ತವೆ. ಕ್ಯಾಲ್ಸಿಯಂ, ಪ್ಲೋರೈಡ್‌ ಸೇರಿದಂತೆ ಅಧಿಕ ಸುಣ್ಣದ ನೀರು ಜಿಲ್ಲೆಯಲ್ಲಿದ್ದು, ಅಂತಹ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುವ ಜತೆಗೆ ಕೈ-ಕಾಲು ನೋವು ನಿರಂತರವಾಗುತ್ತದೆ. ಹೀಗಾಗಿ ಪ್ಲೋರೈಡ್‌ಯುಕ್ತ ಶುದ್ಧ ನೀರು ಪೂರೈಸಿ, ಗ್ರಾಮೀಣ ಜನರ ಆರೋಗ್ಯ ಕಾಪಾಡಬೇಕೆಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ಜಿಲ್ಲೆಯಲ್ಲಿ 790 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಆದರೆ, ಕಳಪೆ ಗುಣಮಟ್ಟದಿಂದ ಬಹುತೇಕ ಘಟಕಗಳು, ಜನರಿಗೆ ನೀರು ಕೊಡುವ ಬದಲು, ಪ್ರದರ್ಶನಕ್ಕೆ ಸೀಮಿತಗೊಂಡಿವೆ.

ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ನಿರ್ಮಿಸಿದ ಘಟಕ ಹೊರತುಪಡಿಸಿ ಇಲಾಖೆಯ 790 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ 616 ಘಟಕ ಸುಸ್ಥಿತಿಯಲ್ಲಿವೆ. ಇನ್ನುಳಿದ 174 ಘಟಕ ದುರಸ್ತಿಯಲ್ಲಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ
ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಗಂಗೂಬಾಯಿ ಮಾನಕರ,
ಜಿಪಂ ಸಿಇಒ

ನಮ್ಮೂರಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ 2ರಿಂದ 3 ವರ್ಷ ಆಗಿದೆ.
ಒಂದು ದಿನವೂ ನೀರು ಕೊಟ್ಟಿಲ್ಲ. ಘಟಕವನ್ನು ಆರಂಭವೂ ಮಾಡಿಲ್ಲ. ಹೀಗಾಗಿ ಪಕ್ಕದ
ಊರಿಗೆ ಹೋಗಿ, ಶುದ್ಧ ನೀರು ತರುತ್ತಿದ್ದೇವೆ. ಘಟಕ ಆರಂಭಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ನಮ್ಮೂರಲ್ಲಿ ನೋಡಲು ಮಾತ್ರ ಶುದ್ಧ ಕುಡಿಯುವ ನೀರಿನ ಘಟಕವಿದೆ.
.ಲಕ್ಷ್ಮೀಬಾಯಿ ಗುರುನಾಥ ಹುದ್ದಾರ,
ಕೆಂದೂರ ಗ್ರಾಮಸ್ಥೆ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next