ಬೆಳ್ತಂಗಡಿ: ಭಾರತೀಯರು ಮತ್ತೂಬ್ಬರ ನೋವು, ಸಂಕಷ್ಟಗಳಿಗೆ ಪ್ರತಿಸ್ಪಂದಿಸುವವರು. “ಬದುಕು ಕಟ್ಟೋಣ ಬನ್ನಿ’ ತಂಡದಿಂದ ಮೂಡಿದ ರಾಷ್ಟ್ರ ಪರಿವರ್ತನೆಯ ಈ ಕಾಯಕವು ಪ್ರಧಾನಿ ಮೋದಿ ಅವರ “ಮನ್ ಕಿ ಬಾತ್’ನಲ್ಲಿ ಉಲ್ಲೇಖೀತ ವಿಚಾರ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ 2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಉಜಿರೆಯ “ಬದುಕು ಕಟ್ಟೋಣ ಬನ್ನಿ’ ತಂಡದಿಂದ ಪುನರ್ ನಿರ್ಮಾಣಗೊಂಡ 12 ಮನೆಗಳ ಗೃಹಪ್ರವೇಶೋತ್ಸವ ಕಾರ್ಯಕ್ರಮವನ್ನು ಮೇ 8ರಂದು ಕೊಳಂಬೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜೇಶ್ ಪೈ ಮತ್ತು ಮೋಹನ್ ಕುಮಾರ್, ಶಾಸಕ ಹರೀಶ್ ಪೂಂಜ ಮಿತ್ರರಿಂದ ಸೇವೆಯ ಮೂಲಕ ಬದುಕು ಕಟ್ಟುವ ಕಾರ್ಯ ಆಗಿದೆ. ತಂಡದ ಸೇವಾ ಕಾರ್ಯ ಸಾಂಕ್ರಾಮಿಕದಂತೆ ನಾಡಿನುದ್ದಗಲ ಹಬ್ಬಲಿ ಎಂದರು.
ದೇಶ- ಜಗತ್ತಿಗೆ ಪ್ರೇರಣೆಯಾಗುವ ರೀತಿಯಲ್ಲಿ ಕೊಳಂಬೆಯ ಸಂತ್ರಸ್ತರ ಬದುಕು ಪುನರ್‌ರೂಪಿಸಿದ ಇಂಥ ತಂಡ ಪ್ರತೀ ಗ್ರಾಮದಲ್ಲಿ ಹುಟ್ಟಲಿ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಆಶಿಸಿದರು. ಮುಖ್ಯ ಅತಿಥಿಗಳಾಗಿದ್ದ ಆರೆಸ್ಸೆಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಶುಭ ಕೋರಿದರು.
ಸೇವೆ ಆರಂಭಿಸಿದಾಗ ಅನೇಕ ಟೀಕೆಗಳು ಎದುರಾದವು. ಆದರೆ ಅವೆಲ್ಲವನ್ನೂ ಮೆಟ್ಟಿ ನಿಂತು ಇಲ್ಲಿನ ಕುಟುಂಬಗಳ ಬದುಕು ಕಟ್ಟುವಲ್ಲಿ ಸೇವೆ ನೀಡಿದ್ದೇವೆ. ನಮ್ಮ ಜತೆ ಕೈ ಜೋಡಿಸಿದ ಶಾಸಕರು, ಸಂಘ ಸಂಸ್ಥೆಗಳು ಹಾಗೂ ದಾನಿಗಳು, ಜತೆಗೆ ಸಾವಿರಾರು ಸ್ವಯಂಸೇವಕರು ಅಭಿನಂದನಾರ್ಹರು ಎಂದು ಪ್ರಾಸ್ತಾವಿಸಿ ಮಾತನಾಡಿದ “ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.
ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ ಕೆ.ವಿ.ಪ್ರಸಾದ್, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ರಂಜಿನಿ ಮತ್ತು ನೆರಿಯ ಗ್ರಾ.ಪಂ. ಅಧ್ಯಕ್ಷೆ ವಸಂತಿ ಉಪಸ್ಥಿತರಿದ್ದರು.
ಚಾರ್ಮಾಡಿ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಎಂ.ಡಿ. ಜನಾರ್ದನ ಅವರು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿದರು. “ಬದುಕು ಕಟ್ಟೋಣ ಬನ್ನಿ’ ತಂಡದ ಮತ್ತೋರ್ವ ಸಂಚಾಲಕ ರಾಜೇಶ್ ಪೈ ವಂದಿಸಿದರು. ಸ್ಮಿತೇಶ್ ಎಸ್. ಬಾರ್ಯ, ತಿಮ್ಮಯ್ಯ ನಾಯ್ಕ ನಿರ್ವಹಿಸಿದರು.