ಜೋಯಿಡಾ: ಗ್ರಾಮದ ಗಡಿ ದೇವರಿಗೆ ನೈವೇದ್ಯ ರೂಪದಲ್ಲಿ ಕೋಳಿ ಮಾಂಸ ಹಾಗೂ ಸಾರಾಯಿ ನೀಡುವ ವಿಶಿಷ್ಟ ಪದ್ಧತಿ ತಾಲೂಕಿನ ಬಾಡಪೋಲಿ ಮರಾಠ ಸಮುದಾಯದವರ ಗಡಿಹಬ್ಬದ ಆಚರಣೆಯಲ್ಲಿದೆ.
ಬಾಡಪೋಲಿ ಮರಾಠ ಸಮುದಾಯದವರು ಅನಾದಿ ಕಾಲದಿಂದಲೂ ಗಡಿದೇವರಾದ ಸಿದ್ಧನಿಗೆ ಪ್ರತಿವರ್ಷ ಗಡಿಹಬ್ಬದಂದು ಸಾರಾಯಿ ಹಾಗೂ ಕೋಳಿ ಮಾಂಸ ನೈವೇದ್ಯ ನೀಡುವ ಪದ್ಧತಿ ನಡೆಸುತ್ತಾ ಬಂದಿದ್ದಾರೆ. ಇದೇ ಸಂಪ್ರದಾಯ ಮುಂದುವರಿದಿದೆ. ನಂತರ ಹಿರಿಯರೆಲ್ಲ ಸೇರಿ ದೇವರ ಸನ್ನಿಧಿಯಲಿ ಕುಳಿತು, ದೇವರ ಪ್ರಸಾದ ಎಂಬಂತೆ ಸಾರಾಯಿ ಹಾಗೂ ಕೋಳಿ ಮಾಂಸ ಸೇವಿಸುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ.
ಕಾಡಂಚಿನಲ್ಲಿರುವ ಈ ಗಡಿದೇವರ ಹಬ್ಬದಲ್ಲಿ ಗ್ರಾಮದ ಪುರುಷರು ಮಾತ್ರ ಪಾಲ್ಗೊಳ್ಳುತ್ತಾರೆ. ಆದರೆ ಊರಿಗೆ ಬಂದ ನೆಂಟರಿಷ್ಟರು ದಂಪತಿ ಸಮೇತರಾಗಿ ಮಕ್ಕಳೊಂದಿಗೆ ಪಾಲ್ಗೊಳ್ಳುವುದು ವಿಶೇಷ. ಹರಕೆ ನೀಡಿದ ಭಕ್ತಾದಿಗಳು ಅಲ್ಲಿಯೇ ಅಡಿಗೆ ಮಾಡಿ ಎಲ್ಲರೂ ಸೇರಿ ಊಟಮಾಡುವ ಪದ್ಧತಿ ರೂಢಿಯಲ್ಲಿದೆ.
ಈ ರೀತಿ ಸೇವೆ ಸಲ್ಲಿಸುವ ಮೂಲಕ ಗ್ರಾಮವನ್ನು, ಬೆಳೆ, ಬೇಸಾಯವನ್ನು ಸಂರಕ್ಷಿಸಿ, ಗ್ರಾಮದ ಜನತೆಗೆ ಸುಖ ಸಮೃದ್ಧಿ ನೀಡಿ, ಮಹಾಮಾರಿಯಿಂದ ಸಕಲರನ್ನು ಕಾಪಾಡುವಂತೆ ಬೇಡಿಕೊಂಡರು. ಹರಕೆ ಹೊತ್ತ ಭಕ್ತರಿಗೆ ದೇವರು ಬೇಡಿಕೆಗೆ ಸ್ಪಂದಿಸುತ್ತಾನೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ತಾಲೂಕಿನ ಮರಾಠ ಸಮುದಾಯದಲ್ಲಿ ಇಂತಹ ವಿಶಿಷ್ಟ ಪದ್ಧತಿ ತೀರ ಕಡಿಮೆ ಎಂದೆನಿಸಿದರೂ ಬಾಡಪೋಲಿಯಲ್ಲಿ ಮಾತ್ರ ಆಚರಣೆಯಲ್ಲಿದ್ದು, ಇದನ್ನು ಆಚರಿಸದೇ ಇದ್ದರೆ ಊರಿನಲ್ಲಿ ದನಕರು, ಬೆಳೆ ಬೇಸಾಯದಲ್ಲಿ ತೊಂದರೆ ಬರುತ್ತದೆ ಎನ್ನುವ ಭಯ ಗ್ರಾಮಸ್ಥರಲ್ಲಿದೆ.