ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್‌ನ ಡಬಲ್ಸ್ ವಿಭಾಗದ ಕೋಚ್, ಮಲೇಶ್ಯಾದ ತಾನ್ ಕಿಮ್ ಹರ್ ವೈಯಕ್ತಿಕ ಕಾರಣದಿಂದ ಕೋಚ್ ಸ್ಥಾನದಿಂದ ಹಿಂದೆ ಸರಿದಿದ್ದಾರೆ.
“ಹೌದು, ಕಿಮ್ ಹರ್ ಡಬಲ್ಸ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕಳೆದ ತಿಂಗಳಿನಲ್ಲೇ ಅವರು ಈ ವಿಚಾರದ ಬಗ್ಗೆ ತಿಳಿಸಿದ್ದರು.ಕೌಟುಂಬಿಕ ಸಮಸ್ಯೆಯಿರುವ ಕಾರಣ ಅವರ ಹಿರಿಯರ ರಾಷ್ಟ್ರೀಯ ಕೂಟದ ವೇಳೆಯೇ ಭಾರತ ಬ್ಯಾಡ್ಮಿಂಟನ್ ತಂಡವನ್ನು ತೊರೆದಿದ್ದಾರೆ’ ಎಂದು ಬಿಎಐನ ಕಾರ್ಯದರ್ಶಿ ಉಮ್ಮರ್ ರಶೀದ್ ಹೇಳಿದ್ದಾರೆ.
2016ರಲ್ಲಿ ಭಾರತದ ರಾಷ್ಟ್ರೀಯ ತಂಡದ ಡಬಲ್ಸ್ ವಿಭಾಗದ ಕೋಚ್ ಆಗಿ ನೇಮಕಗೊಂಡ 47 ವರ್ಷದ ತಾನ್, ತಮ್ಮ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶ್‌ನೊಂದಿಗಿನ (ಬಿಎಐ)ಅವರ ಒಪ್ಪಂದ 2020ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಮುಕ್ತಾಯಗೊಳ್ಳಲಿತ್ತು. ಭಾರತದಲ್ಲಿ ಕಾರ್ಯ ನಿರ್ವಹಿಸುವುದಕ್ಕೂ ಮುನ್ನ ಅವರು ಇಂಗ್ಲೆಂಡ್, ದಕ್ಷಿಣ ಕೊರಿಯಾ ಹಾಗೂ ತವರಿನ ತಂಡಕ್ಕೆ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಕಿಮ್ ಹರ್ ತರಬೇತಿಯಲ್ಲಿ ಭಾರತದ ಚಿರಾಗ್ ಶೆಟ್ಟಿ-ಸಾತ್ವಿಕ್‌ರಾಜ್ ರಾಂಕಿರೆಡ್ಡಿ ಜೋಡಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಬಳಿಕ ಈ ಜೋಡಿ ಹೈದರಾಬಾದ್ ಓಪನ್ ಸೂಪರ್ ಪ್ರಶಸ್ತಿ ಹಾಗೂ ಸಯ್ಯದ್ ಮೋದಿ ಸೂಪರ್ 300 ಕೂಟದ ಪೈನಲ್ ತಲುಪಿತ್ತು. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಲು ತಾನ್ ಕಿಮ್ ನೆರವಾಗಿದ್ದರು.
ವನಿತೆಯರ ವಿಭಾಗದಲ್ಲಿ ಎನ್. ಸಿಕ್ಕಿ ರೆಡ್ಡಿ-ಅಶ್ವಿನಿ ಪೊನ್ನಪ್ಪ ಇವರ ಮಾರ್ಗದರ್ಶನದಲ್ಲೇ ಗೋಲ್ಡ್‌ಕೋಸ್ಟ್‌ನಲ್ಲಿ ಕಂಚಿನ ಪದಕ ಜಯಿಸಿತ್ತು.