Advertisement
ತಮಿಳುನಾಡು ಮೂಲದ ಜಹಾಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಆರೋಪಿ. ಆರೋಪಿ ಬಂಧನದಿಂದ ಬೆಂಗಳೂರು ಹಾಗೂ ಚೆನೈನಲ್ಲಿ ಎಸಗಿರುವ ಮೂರು ಅತ್ಯಾಚಾರ ಪ್ರಕರಣಗಳು, ಒಂದು ಲೈಂಗಿಕ ದೌರ್ಜನ್ಯ ಹಾಗೂ ಎರಡು ವಂಚನೆ ಕೇಸ್ ಪತ್ತೆಯಾಗಿವೆ. ಆರೋಪಿ ಇನ್ನೂ ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಸಾಧ್ಯತೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಎರಡೂ ಪ್ರತ್ಯೇಕ ಪ್ರಕರಣಗಳ ತನಿಖೆ ಚುರುಕುಗೊಳಿಸಿ ಆರೋಪಿ ಜಹಾಂಗೀರ್‌ನನ್ನು ಬಂಧಿಸಿದಾಗ, ನ.1ರಿಂದ 4ರವರೆಗಿನ ಅವಧಿಯಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ಯುವತಿ ಮೇಲಿನ ಅತ್ಯಾಚಾರ, ಮೇ ತಿಂಗಳಲ್ಲಿ ಮಹಿಳೆಯೊಬ್ಬರಿಗೆ ವಂಚನೆ ಎಸಗಿರುವುದು ಬೆಳಕಿಗೆ ಬಂದಿತು. ಜತೆಗೆ, ಚೆನೈನಲ್ಲಿ ಈತನ ವಿರುದ್ಧ ಎರಡು ಅತ್ಯಾಚಾರ ಕೇಸ್‌ಗಳು ದಾಖಲಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.
2017ರಲ್ಲಿ ಜೈಲು ಸೇರಿದ್ದ: ಮಹಿಳೆಯೊಬ್ಬರಿಂದ 2.97 ಲಕ್ಷ ರೂ. ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಜಹಾಂಗೀರ್ ಚೆನೈ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಜಾಮೀನು ಆಧಾರದಲ್ಲಿ ಬಿಡುಗಡೆಗೊಂಡ ಬಳಿಕ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸುತ್ತಿರುವುದು ಕಂಡು ಬಂದಿದೆ.
ಯುವತಿಯರ ಮೊಬೈಲ್‌ನಿಂದಲೇ ರೂಂ ಬುಕಿಂಗ್: ಆರೋಪಿ ಜಹಾಂಗೀರ್, ಒಬ್ಬೊಬ್ಬ ಮಹಿಳೆ, ಯುವತಿ ಪರಿಚಯವಾದಾಗಲೂ ಒಂದೊಂದು ಹೆಸರು ಹೇಳಿಕೊಂಡಿದ್ದಾನೆ. ಕಿರಣ್ ರೆಡ್ಡಿ, ಕಾರ್ತಿಕ್ ರೆಡ್ಡಿ ಹೀಗೆ ಹಲವು ನಕಲಿ ಹೆಸರುಗಳನ್ನು ಹೇಳಿ ಪರಿಚಯ ಮಾಡಿಕೊಂಡಿದ್ದಾನೆ. ಪೊಲೀಸರಿಗೆ ಯಾವುದೇ ಕಾರಣಕ್ಕೂ ಸಿಕ್ಕಿಬೀಳಬಾರದು ಎಂಬ ಉದ್ದೇಶದಿಂದ ಸಂತ್ರಸ್ತ ಯುವತಿ, ಮಹಿಳೆಯರ ಮೊಬೈಲ್ ನಂಬರ್‌ನಿಂದಲೇ ಓಯೋ ಹೋಟೆಲ್‌ಗಳಲ್ಲಿ ಕೊಠಡಿ ಬುಕ್ ಮಾಡುತ್ತಿದ್ದ. ಅವರ ಬ್ಯಾಂಕ್ ಅಕೌಂಟ್‌ನಿಂದಲೇ ಹಣ ಪಾವತಿಸುತ್ತಿದ್ದ. ಜತೆಗೆ ಫೇಸ್‌ಬುಕ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಆತ ಅಕೌಂಟ್ ಹೊಂದಿಲ್ಲ. ಸಂತ್ರಸ್ತರು ತನ್ನೊಂದಿಗೆ ಬರಲು ಪಿಸ್ತೂಲ್ ನಿಂದ ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಡ್ರಾಪ್ ನೆಪದಲ್ಲಿ 40 ಸಾವಿರ ರೂ. ದೋಚಿದ! : ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಇದೇ ವರ್ಷ ಮೇ ತಿಂಗಳಲ್ಲಿ ಮಗನ ಜತೆ ತಿರುಪತಿಗೆ ತೆರಳಿದ್ದು, ಬೆಂಗಳೂರು ಮಾರ್ಗವಾಗಿ ವಾಪಸ್ ಹೈದ್ರಾಬಾದ್‌ಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಆಕೆಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರು ಹತ್ತಿಸಿಕೊಂಡಿದ್ದ ಜಹಾಂಗೀರ್, ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರ ಮುಂಭಾಗ ಕಾರು ನಿಲ್ಲಿಸಿ, ಆಕೆಯ ಮಗನಿಗೆ ಬೊಂಬೆ ತರುತ್ತೇನೆ ಎಂದು ಹೇಳಿ ಆಕೆಯದ್ದೇ ಡೆಬಿಟ್ ಕಾರ್ಡ್ ಪಡೆದು ಹೋಗಿದ್ದ. ಬಳಿಕ ಕಾರ್ಡ್ ಮೂಲಕ 40,200 ರೂ. ಡ್ರಾ ಮಾಡಿಕೊಂಡು, ಕಾರ್ಡ್ ವಾಪಸ್ ಕೊಟ್ಟಿದ್ದ. ಬಳಿಕ ಬೊಂಬೆ ಪ್ಯಾಕ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಆಕೆಯನ್ನು ಕಾರಿನಿಂದ ಇಳಿಸಿ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ವಿವರಿಸಿದರು. ಪ್ರಕರಣದ ತನಿಖಾ ತಂಡದಲ್ಲಿ ಹಲಸೂರು ಉಪವಿಭಾಗದ ಎಸಿಪಿ ಮಂಜುನಾಥ್ ಟಿ., ಇನ್ಸ್ ಪೆಕ್ಟರ್ ದಿವಾಕರ್ ಎಂ., ಪಿಎಸ್‌ಐ ಸುರೇಶ್ ಸೇರಿ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.
ಆರೋಪಿ ಜಹಾಂಗೀರ್‌ನಿಂದ ವಂಚನೆಗೊಳಗಾದ, ದೌರ್ಜನ್ಯಕ್ಕೆ ಒಳಗಾದ ಯುವತಿಯರು ದೂರು ನೀಡಿದರೆ ತನಿಖೆ ನಡೆಸಲಾಗುವುದು. ದೂರುದಾರರ ಮಾಹಿತಿ ಗೌಪ್ಯವಾಗಿಡಲಾಗುವುದು. –ಹಲಸೂರು ಠಾಣೆ ಪೊಲೀಸರು