ಬದಿಯಡ್ಕ: ನೃತ್ಯ ಮತ್ತು ಸಂಗೀತ ಒಟ್ಟಾಗಿ ಬಾಳುವ ಸಂಸ್ಕೃತಿಯನ್ನು ಕಲಿಸುತ್ತದೆ. ಹಾಗೆಯೇ ಸಂಬಂಧಗಳನ್ನು ಬೆಸೆಯುವ, ಉಳಿಸುವ ಕೊಂಡಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಹೇಳಿದರು.
ನಾಟ್ಯ ನಿಲಯಂ ಶಾಸ್ತ್ರೀಯ ನೃತ್ಯ ಸಂಸ್ಥೆ ಮಂಜೇಶ್ವರ ಇದರ ಸಾತ್ವಿಕಾ ಶಾಖೆಯ ವಾರ್ಷಿಕೋತ್ಸವ ಪ್ರಯುಕ್ತ ನಾಟ್ಯಗುರು ನಾಟ್ಯಕಲಾಸಿಂಧು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ನಿರ್ದೇಶನದಲ್ಲಿ ಆಯೋಜಿಸಲಾದ ಶಿವಾರ್ಪಣಂ ಸಂಗೀತ ನೃತ್ಯ ಸಂಗಮ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದರು. ಕಾಸರಗೋಡಿನ ಜನತೆ ಭಾಷೆ, ಸಂಸ್ಕೃತಿ ಹಾಗೂ ಪಾರಂಪರಿಕ ಕಲಾ ರೂಪಗಳಿಗೆ ನೀಡುವ ಗೌರವ, ತೋರುವ ಆಸಕ್ತಿ, ಉಳಿಸಿ ಬೆಳೆಸುವ ಸನ್ಮನಸು ಹೊಂದಿರುವುದು ಬೆರಗುಮೂಡಿಸುತ್ತದೆ. ಇಲ್ಲಿನ ಜನತೆ ಇವೆಲ್ಲವನ್ನೂ ಸಂರಕ್ಷಿಸುವ ಪುಣ್ಯಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಬದುಕಿನಲ್ಲಿ ಶಿಸ್ತು, ಹಿರಿಯರನ್ನು ಗೌರವಿಸುವ, ಪರಿಪಾಲಿಸುವ ಮನೋಭಾವ, ಏನಾದರೂ ಸಾಧಿಸುವ ಹಟ ನಮ್ಮಲ್ಲಿರಬೇಕು. ಪ್ರತಿಹೆಜ್ಜೆಯಲ್ಲೂ ಕಲಾಭೂಮಿಕೆಯನ್ನು ಸಂಪನ್ನಗೊಳಿಸುವ ಶ್ರೇಷ್ಠ ಗುರು ಗಡಿನಾಡಿನ ಮಕ್ಕಳ ಸೌಭಾಗ್ಯ ಎಂದು ಅವರು ಹೇಳಿದರು.
ಕಲಾಸ್ಪರ್ಶಂ ಸಭಾಭವನ, ರಾಷ್ಟ್ರಕವಿ ಗೋವಿಂದ ಪೈ ಗಿಳಿವಿಂಡು, ಹೊಸಬೆಟ್ಟು ಇಲ್ಲಿ ಜರುಗಿದ ಸಮಾರಂಭದಲ್ಲಿ ಸೀತಾರಾಮ ಮಾಸ್ಟರ್ ಪಿಲಿಕೂಡ್ಲು ಅಧ್ಯಕ್ಷತೆವಹಿಸಿ ಮಾತನಾಡಿ ಬಾಲಕೃಷ್ಣ ಮಾಸ್ಟರ್ ನೃತ್ಯವನ್ನೇ ಬದುಕಾಗಿಸಿ ಸಾವಿರಾರು ಮಕ್ಕಳ, ಹೆತ್ತವರ ಕನಸಿಗೆ ಹೊಸಬಣ್ಣ ಕೊಟ್ಟವರು. ಅವರ ಸಮರ್ಪಣಾ ಮನೋಭಾವ, ಸರಳತೆ, ನೇರನುಡಿ, ಸದಾ ನಗುವಲ್ಲೇ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಇಂದು ಈ ಸಭಾಂಗಣ ತುಂಬಿತುಳುಕುವಂತೆ ಮಾಡಿದೆ. ಪ್ರತಿಯೊಂದು ಶಿಷ್ಯರನ್ನೂ ತನ್ನ ಮಕ್ಕಳಂತೆ ಕಾಣುವ ಗುರುವಿನ ಹೃದಯ ವೈಶಾಲ್ಯತೆಗೆ ಸಾಟಿಯಿಲ್ಲ ಎಂದು ಹೇಳಿದರು.
ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಸುಪ್ರಿಯಾ ಶೆಣೆ„ ದೀಪ ಪ್ರಜ್ವಲನೆಯ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಕೇರಳ ಗ್ರಾಮೀಣ ಬ್ಯಾಂಕ್ ಅಧಿಕಾರಿ ಅಶೋಕ್ ನಾಯಕ್ ಹಾಗೂ ಡಾ| ಕೃಷ್ಣ ನಾಯಕ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ನಾಟ್ಯನಿಲಯಂನ ಕೋಶಾಧಿಕಾರಿ ಶರ್ಮಿಳಾ ಬಾಲಕೃಷ್ಣ, ಸಂಚಾಲಕರಾದ ಕಿರಣ್ ಮಾಸ್ಟರ್ ಮಂಜೇಶ್ವರ ಉಪಸ್ಥಿರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಡಾ| ಬಾಲಕೃಷ್ಣ ಮಂಜೇಶ್ವರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ದೇಹದಾಡ್ಯರ್ ಸ್ಪರ್ಧೆಯಲ್ಲಿ ಮಿ| ಕಾಸರಗೋಡು ಆಗಿ ಆಯ್ಕೆಯಾದ ಕೀರ್ತನ್ ಕೂಡ್ಲು ಅವರನ್ನು ಮನೀಶ್ ಮಂಜೇಶ್ವರ ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು.
ಕಾರ್ಯಕ್ರಮದಂಗವಾಗಿ ಮೊದಲಿಗೆ ಉಣ್ಣಿಕೃಷ್ಣನ್ ವೀಣಾಲಯಂ ಅವರ ಶಿಷ್ಯವೃಂದದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸುಮಾರು 60 ವಿದ್ಯಾಥಿಗಳು ಗೆಜ್ಜೆಪೂಜೆ ಸಲ್ಲಿಸಿ ನೃತ್ಯ ಪ್ರದರ್ಶನ ನೀಡಿದರು. ನಾಟ್ಯನಿಲಯಂನ ಸಂಚಾರಿ ತಂಡದವರು ಕಾರ್ಯಕ್ರಮದಲ್ಲಿ ಭಾಗಿಗಳಾದರು.