ಬೆಂಗಳೂರು: ಖ್ಯಾತ ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಬಡೆಕ್ಕಿಲ ಪ್ರದೀಪ್ ತಮ್ಮ ನವೋನ್ನತಿ ಫೌಂಡೇಶನ್ ಮುಖಾಂತರ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸಮುದಾಯದ ಜೊತೆ ಕನೆಕ್ಟ್ ಆಗುವ ಕನ್ನಡದ 76 ಧ್ವನಿಗಳ ಮೂಲಕ ಭಾರತದ 76 ವರ್ಷಗಳ ಕಥೆಯನ್ನು ಹೇಳಲಿದ್ದಾರೆ.
ಭಾರತದ ಸ್ವಾತಂತ್ರ್ಯೋತ್ತರ 76 ವರ್ಷಗಳನ್ನು 76 ವಿವಿಧ ಧ್ವನಿಗಳನ್ನು ಬಳಸಿಕೊಂಡು ಸಂಚಿಕೆಯಲ್ಲಿ ಸ್ವಾತಂತ್ರ್ಯ ಹೋರಾಟದ ಗೆಲುವಿನ ನಂತರ ಭಾರತ ಕಂಡ ಏರಿಳಿತದ ಪರಿಚಯ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬೇರೆ ಬೇರೆ ಮಂದಿ ಭಾರತದ ಕುರಿತು ಮಾತುಗಳನ್ನಾಡುತ್ತಾರೆ.
140 ಕೋಟಿ ಜನಸಂಖ್ಯೆಯ ನಮ್ಮ ದೇಶದ ಕಥೆಯನ್ನು ಇಪ್ಪತ್ತು ನಿಮಿಷದ ಈ ಕಾರ್ಯಕ್ರಮದಲ್ಲಿ ಹೇಳುವುದು ಅಸಾಧ್ಯವೇ ಆದರೂ, ನಮ್ಮ ಮಾತುಗಳಲ್ಲಿ ಅದರ ಅವಲೋಕನ ಮಾಡಿದರೆ, ಅದು ನಮ್ಮೊಳಗೆ ದೇಶ ಭಕ್ತಿಯ ಬೆಳಕನ್ನು ಹಚ್ಚುತ್ತದೆ ಅನ್ನುವುದು ನಮ್ಮ ನಂಬಿಕೆ ಎನ್ನುತ್ತಾರೆ ಕಾರ್ಯಕ್ರಮದ ಪರಿಕಲ್ಪನೆ ಮಾಡಿರುವ ಬಡೆಕ್ಕಿಲ ಪ್ರದೀಪ.
ರಿವರ್ಬ್ ಇಂಕ್ ಸಂಸ್ಥೆ ನಿರ್ಮಾಣದ ಕಾರ್ಯಕ್ರಮವು ನವೋನ್ನತಿ ಫೌಂಡೇಶನ್ ಅಡಿಯಲ್ಲಿ ಅನಾವರಣಗೊಳ್ಳುತ್ತಿದೆ.
ಜೊತೆಗೆ ರಾಜ್ಯದ ಹಲವು ಕಾಲೇಜುಗಳ ಮಾಧ್ಯಮ ವಿದ್ಯಾರ್ಥಿಗಳನ್ನೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿದೆ. ಪ್ರದೀಪ್ ಅವರ ತಂಡದ ಶರಧಿ ಆರ್ ಫಡ್ಕೆ ಅಲ್ಲದೇ ದೊಡ್ಡದೊಂದು ತಂಡ 20ರಿಂದ 30 ನಿಮಿಷದೊಳಗಿನ ಈ ಕಾರ್ಯಕ್ರಮಕ್ಕಾಗಿ ಕೆಲಸ ಮಾಡಿದೆ. ಇದೇ ಆಗಸ್ಟ್ 15ರಂದು ರಾಜ್ಯದ ಹಲವು ಸಮುದಾಯ ಬಾನುಲಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.