Advertisement

“ಬಡವ ರಾಸ್ಕಲ್‌”ಚಿತ್ರವಿಮರ್ಶೆ: ಬಡವನ ಜೊತೆಗೊಂದು ಸುಖಕರ ಪ್ರಯಾಣ

09:22 AM Dec 25, 2021 | Team Udayavani |

ಆತ ಮಧ್ಯಮ ವರ್ಗದ ಹುಡುಗ. ಕೈಯಲ್ಲಿ ಕಾಸಿಲ್ಲದಿದ್ದರೂ ಮುಂದೊಂದು ದಿನ ಸ್ವಂತ ಕಾಲ ಮೇಲೆ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸವಿರುವ ಹುಡುಗ. ಇಂತಹ ಹುಡುಗನಿಗೆ ಒಂದಷ್ಟು ಫ್ರೆಂಡ್ಸ್‌, ಎದೆಯಲ್ಲೊಂದು ಲವ್‌ಸ್ಟೋರಿ… ಇಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ಫ್ರೆಂಡ್ಸ್‌ ಅಂಡ್‌ ಫ್ಯಾಮಿಲಿ ಡ್ರಾಮಾ ಎಂದು ಊಹಿಸೋದು ಕಷ್ಟವಲ್ಲ. ಧನಂಜಯ್‌ ತಮ್ಮ ಚೊಚ್ಚಲ ನಿರ್ಮಾಣದಲ್ಲಿ ಒಂದು ಮಧ್ಯಮ ವರ್ಗದ ಹುಡುಗನ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಪಕ್ಕಾ ಕಮರ್ಷಿಯಲ್‌ ಚೌಕಟ್ಟಿನಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಪ್ರೀತಿ, ಸ್ನೇಹ, ಸಮರ… ಹೀಗೆ ಎಲ್ಲದಕ್ಕೂ ರೆಡಿ ಇರುವ ಒಂದು ಹುಡುಗರ ಗ್ಯಾಂಗ್‌ ಈ ಸಿನಿಮಾದ ಹೈಲೈಟ್‌.

Advertisement

ಮೊದಲೇ ಹೇಳಿದಂತೆ ಈ ಸಿನಿಮಾದ ಹೈಲೈಟ್‌ ಫ್ರೆಂಡ್ಸ್‌ ಗ್ಯಾಂಗ್‌. ಆರಂಭದಿಂದ ಕೊನೆಯವರೆಗೂ ನಾಯಕ ಫ್ರೆಂಡ್ಸ್‌ ಬಿಟ್ಟು ಇರೋದೇ ಇಲ್ಲ. ಆ ತರಹದ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಿಡಲ್‌ ಕ್ಲಾಸ್‌ ಹುಡುಗ, ಶ್ರೀಮಂತ ಹುಡುಗಿ ನಡುವಿನ ಲವ್‌ಸ್ಟೋರಿಯೂ ಇದೆ, ಆ ತರಹದ ಲವ್‌ಸ್ಟೋರಿಗಳಲ್ಲಿ ಸಾಮಾನ್ಯವಾಗಿ ಬರುವ ಟ್ವಿಸ್ಟ್‌-ಟರ್ನ್ಗಳೂ ಇವೆ. ಜೊತೆಗೆ ಇಂತಹ ಸಂದರ್ಭದಲ್ಲಾಗುವ ಒಂದಷ್ಟು ನಿರೀಕ್ಷಿತ ಮತ್ತು ಅನಿರೀಕ್ಷಿತ ಘಟನೆಗಳನ್ನು ಸೇರಿಸಿ ನಿರ್ದೇಶಕ ಶಂಕರ್‌ ಗುರು “ಬಡವ ರಾಸ್ಕಲ್‌’ ಕಟ್ಟಿಕೊಟ್ಟಿದ್ದಾರೆ. ಆದರೆ, ಕಥೆಯ ವಿಚಾರಕ್ಕೆ ಬರುವುದಾದರೆ ತುಂಬಾ ಹೊಸದಾದ ಕಥೆಯಲ್ಲ. ಈ ಚಿತ್ರದಲ್ಲಿ ಕಥೆಗಿಂತ ಹೆಚ್ಚಾಗಿ ಸನ್ನಿವೇಶಗಳೇ ಹೈಲೈಟ್‌ ಆಗಿವೆ. ಆಯಾ ಸನ್ನಿವೇಶಗಳು ತೆರೆದು ಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಮಜ ಕೊಡುತ್ತಾ ಸಾಗುತ್ತದೆ.

ಇದನ್ನೂ ಓದಿ:ಕಲಿತದ್ದು ಒಂದೂವರೆೆ ಕ್ಲಾಸ್‌,ಡಾಕ್ಟರೇಟ್‌ಗಳಿಗೆ ಪಾಠ, 52 ದೇಶ ಸುತ್ತಾಟ

ಚಿತ್ರದಲ್ಲಿ ಇಂದಿನ ಯೂತ್ಸ್ ಎಂಜಾಯ್‌ ಮಾಡುವಂತಹ ಒಂದಷ್ಟು ಫ‌ನ್ನಿ ಘಟನೆಗಳು, ಸಂಭಾಷಣೆಗಳು ಇವೆ. ಜೊತೆಗೆ ಮಾಸ್‌ ಅಂಶಗಳು ಆಗಾಗ ಎಚ್ಚೆತ್ತುಕೊಳ್ಳುತ್ತದೆ. ಆದರೆ, ಚಿತ್ರದ ನಿರೂಪಣೆ ಅನೇಕ ಕಡೆಗಳಲ್ಲಿ ನಿಧಾನಗತಿಯಲ್ಲಿ ಸಾಗುವುದರಿಂದ ಇಡೀ ಚಿತ್ರದ ವೇಗಕ್ಕೆ ಅಡ್ಡಿಯುಂಟಾಗಿದೆ. ಅದರಾಚೆ ಒಂದು ಟೈಮ್‌ಪಾಸ್‌ ಸಿನಿಮಾವಾಗಿ “ಬಡವ ರಾಸ್ಕಲ್‌’ ಇಷ್ಟವಾಗುತ್ತದೆ.

ಚಿತ್ರದಲ್ಲಿ ಅಲ್ಲಲ್ಲಿ ಬರುವ ಕಾಮಿಡಿ, ರಂಗಾಯಣ ರಘು ಅವರ ಎಮೋಶಲ್‌ ಸೀನ್‌, ತಾರಾ ಅವರ ಮದರ್‌ ಸೆಂಟಿಮೆಂಟ್‌, ಸ್ನೇಹಿತರ ಅಡ್ಡ ಹೆಸರಿನ ಹಿಂದಿನ ಕಥೆ.. ಹೀಗೆ ಚಿತ್ರದಲ್ಲಿ ಬರುವ ಒಂದೊಂದು ಎಪಿಸೋಡ್‌ಗಳು ಚಿತ್ರವನ್ನು ಬೋರ್‌ ಆಗದಂತೆ ಮುಂದೆ ಸಾಗಿಸಿಕೊಂಡು ಹೋಗುತ್ತದೆ.

Advertisement

ನಟ ಧನಂಜಯ್‌ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಅಲ್ಲಲ್ಲಿ ಅವರ “ಟಗರು’ ಚಿತ್ರದ ಡಾಲಿ ಶೇಡ್‌ ಕಾಣುತ್ತದೆ. ಉಳಿದಂತೆ ನಾಯಕಿ ಅಮೃತಾ ಹೀಗೆ ಬಂದು ಹಾಗೆ ಹೋಗುತ್ತಾರೆ. ಆದರೆ, ಸಿನಿಮಾದ ಹೈಲೈಟ್‌ಗಳಲ್ಲಿ ರಂಗಾಯಣ ರಘು, ತಾರಾ ಅವರ ಜೋಡಿ ಕೂಡಾ ಒಂದು. ಅವರಿಬ್ಬರ ಮಾತುಕತೆ, ಮಗನ ಬಗೆಗಿನ ಕಾಳಜಿ ಎಲ್ಲವೂ ಇಷ್ಟವಾಗುತ್ತದೆ. ಉಳಿದಂತೆ ಫ್ರೆಂಡ್ಸ್‌ ಟೀಂನ ಪ್ರತಿಯೊಬ್ಬರು ಚಿತ್ರಕ್ಕೆ ಸಾಥ್‌ ನೀಡಿದ್ದಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next