Advertisement
ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ, ಬಾದಾಮಿಯ ಆ ಕಾಲದ ವೈಭವವನ್ನು ಯಾರೂ ಕಂಡವರಿಲ್ಲ. ಬಂಡೆಗಳಲ್ಲಿ ಜೀವ ಹಿಡಿದಿಟ್ಟುಕೊಂಡು, ಅವುಗಳೆದೆ ಮೇಲೆ ಕೆತ್ತಿದ ಶಿಲ್ಪಕಲೆಗಳಲ್ಲಿ ಭಾವ ತುಂಬಿಕೊಂಡು, ವಿಜೃಂಭಿಸಿದ ಬಾದಾಮಿ, ಕಾಲ ಸರಿದಂತೆ ಸಹಜವಾಗಿ ಮಸುಕಾಗಿತ್ತು. ಐತಿಹಾಸಿಕ ಚೆಲುವು ಎಲ್ಲೋ ಹೂತು ಹೋಗಿ, ಅದರ ನೈಜತೆಯೆಲ್ಲಾ ಮಂಕಾಯಿತೇನೋ ಎಂದು ಆತಂಕಪಡುವ ಹೊತ್ತಿನಲ್ಲೇ, ಬಾದಾಮಿ ರೂಪ ಬದಲಿಸಿಕೊಂಡಿದೆ. ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ ತುಂಬಿಕೊಂಡಿದೆ.
Related Articles
ಅಗಸ್ತ್ಯತೀರ್ಥದ ಉತ್ತರಕ್ಕೆ ಚಾರಣಪ್ರಿಯರ, ಶಿಲಾರೋಹಿಗಳ ಸ್ವರ್ಗವಾಗಿರುವ ಭವ್ಯ ಬಂಡೆಗಳು, ರಣಮಂಡಲ ಕೋಟೆ, ಶಿವಾಲಯಗಳು ಚೆಲುವು ತುಂಬಿಕೊಂಡಿವೆ. ವಾಸ್ತುಶಿಲ್ಪದ ಗಣಿಯಾಗಿರುವ ಗುಹಾಲಯಗಳು, ಮಾನವ ವಿಕಾಸದ ಕತೆ ಹೇಳುವ ಮಾನವ ಪಾರ್ಕ್; ಪಶ್ಚಿಮದ ದಡದಲ್ಲಿರುವ ಯಲ್ಲಮ್ಮನ ಗುಡಿ, ಪೂರ್ವಕ್ಕೆ ನೀರಿನಲ್ಲಿ ತೇಲುವಂತೆ ಕಾಣುವ ಭೂತನಾಥಗುಡಿಗಳ ಸಂಕೀರ್ಣ, ಕುಷ್ಟುರಾಯನ ಗುಡಿ, ವಿಶಾಲ ಜಲಾಶಯ… ಹೀಗೆ ಒಂದೊಂದೂ, ಒಂದೊಂದು ಬಗೆಯ ರೂಪಲಾವಣ್ಯಗಳಿಂದ ಆಕರ್ಷಿಸುತ್ತಿದೆ.
Advertisement
ಅಲ್ಪಾಯು ಜಲಪಾತ…ಇಷ್ಟೆಲ್ಲ ಕಾಯಕಲ್ಪದ ನಡುವೆ, ಬಾದಾಮಿಯನ್ನು ಇನ್ನಷ್ಟು ರಮಣೀಯವಾಗಿ ಕಂಗೊಳಿಸುವಂತೆ ಮಾಡಿರುವುದು ಪ್ರಕೃತಿ. ಧೋ ಎಂದು ಸುರಿದ ಮುಂಗಾರು ಮಳೆಗೆ ಇಡೀ ಬಾದಾಮಿಯೇ ಸ್ವತ್ಛ ಸುಂದರ. ಗುಡ್ಡವೆಲ್ಲ ಹಸಿರಿನ ಸೀರೆ ಹೊದ್ದಿದೆ. ಚಾಲುಕ್ಯ ಕಲಾಶಾಲೆ ಕಳೆಗಟ್ಟಿದೆ. ನಸುಗೆಂಪು ಬಣ್ಣದ ಬಂಡೆಗಳ ಗುಡ್ಡದ ಮೇಲ್ಭಾಗದಲ್ಲಿ ಸಮತಟ್ಟಾದ ಪ್ರದೇಶವು ಅಗಸ್ತ್ಯತೀರ್ಥದತ್ತ ಸ್ವಲ್ಪ ಇಳಿಜಾರಾಗಿದೆ. ಜಡಿಮಳೆಯಿಂದ ಸಂಗ್ರಹವಾದ ನೀರು ಅಬ್ಬರಿಸುತ್ತಾ, ರಭಸದಿಂದ ಅಗಸ್ತ್ಯತೀರ್ಥದತ್ತ ಹರಿಯುತ್ತಿದೆ. ಕಡಿದಾದ ಬಂಡೆಗಳ ಮೇಲೆ ಧುಮ್ಮಿಕ್ಕಿ ಬೀಳುವ ದಿಡಗು (ಅಲ್ಪಾಯು ಜಲಪಾತ) ನಯನ ಮನೋಹರ! ಬೆಟ್ಟದ ತುದಿಯಿಂದ ಶ್ವೇತ ಸುಂದರಿಯಂತೆ ಬಳುಕುತ್ತಾ, ಬಂಡೆಗಲ್ಲಿನ ನಡುವೆ ಅಂಕುಡೊಂಕಾಗಿ ಹರಿಯುವ ಈ ಜಲಧಾರೆಯ ಚೆಲುವು ಮನಮೋಹಕ. ಜೋಗವ ನೆನಪಿಸುತಾ…
ಸುಮಾರು 250 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರು, ಬಂಡೆಗಳಿಗೆ ಅಪ್ಪಳಿಸಿದಾಗ ಮುತ್ತಿನ ಮಣಿಗಳು ತೂರಿದಂತೆ ತೋರುತ್ತದೆ. ಆ ನೀರು, ಕಲ್ಲುಬಂಡೆಗಳ ಸಂದಿಗೊಂದಿಗಳಲ್ಲಿ ಸದ್ದುಮಾಡುತ್ತಾ, ನೊರೆನೊರೆಯಾಗಿ ಹರಿಯುವಾಗ, ಹಾಲಿನ ಹೊಳೆ ರೂಪುಗೊಳ್ಳುತ್ತದೆ. ಈ ಅಲ್ಪಾಯು ಜೋಗದ ಹಿಂದೆ ಸೂರ್ಯನ ಕಿರಣಗಳು ಚೆಲ್ಲಾಡುತ್ತಾ, ನೃತ್ಯಗೈಯ್ಯುವ ಹೊತ್ತಿನಲ್ಲೇ, ಕಾಮನಬಿಲ್ಲೊಂದು ಆಗಸದಿಂದ ಭುವಿಗೆ ಬಣ್ಣದ ತೋರಣ ಕಟ್ಟಿರುತ್ತದೆ. ದಿಡಿಗಿನ ಮಗ್ಗಲು ಜವಳು ನೆಲದಲ್ಲಿ ಊಟಿ ಕೀಳುವುದರಿಂದ ಕಾಣುವ ಕಾರಂಜಿಗಳ ವೈವಿಧ್ಯಮಯ ವಯ್ನಾರ ವರ್ಣಿಸಲಸದಳ. ಈ ಜಲಪಾತದ ಕುರಿತು, ಚಾಲುಕ್ಯರ ತಾಮ್ರ ಶಾಸನದಲ್ಲೂ ಉಲ್ಲೇಖಗಳಿವೆ. ಬಾದಾಮಿ ಗತಚೆಲುವಿನ ಸೀರೆ ಉಟ್ಟಿದೆ ಎಂದಿದ್ದೂ ಇದೇ ಕಾರಣಕ್ಕೆ. ಸುಂದರ ಸಾಹಸ…
– ಬೇಸಿಗೆಯಲ್ಲಿ, ಅಗಸ್ತ್ಯ ತೀರ್ಥ ಬತ್ತಿದಾಗ ಪುರಾತತ್ವ ಇಲಾಖೆಯು ಶಿಥಿಲಗೊಂಡ ಮೆಟ್ಟಿಲುಗಳನ್ನು, ಭೂತನಾಥ ಗುಡಿಗಳ ಸಂಕೀರ್ಣಗಳ ಹಾಳಾದ ಮೆಟ್ಟಿಲುಗಳನ್ನು ಮೂಲಕ್ಕೆ ಚ್ಯುತಿ ಬರದಂತೆ ದುರಸ್ತಿ ಮಾಡಿದೆ. – ಪುರಸಭೆ, ಅಗಸ್ತ್ಯತೀರ್ಥದ ಹೂಳು ಎತ್ತಿ, ಸ್ವತ್ಛಮಾಡಿದೆ. ಮಳೆ ಬಂದಾಗ ಗುಡ್ಡದಿಂದ ಹರಿದು ಬರುವ ನೀರು ಅಲ್ಲಲ್ಲಿ ಪೋಲಾಗದಂತೆ, ಗೋಡೆ ನಿರ್ಮಿಸಿ, ಹೊಂಡಕ್ಕೆ ಹರಿಯುವಂತೆ ಮಾಡಿದೆ. – ಅಗಸ್ತ್ಯತೀರ್ಥದ ದಂಡೆ, ತಟಕೋಟೆಯ ಸುತ್ತ, ಕಪ್ಪೆ ಅರಭಟ್ಟನ ಶಾಸನಕ್ಕೆ ಹೋಗುವ ದಾರಿಯ ಇಕ್ಕೆಲಗಳು ಈಗ ಸ್ವಚ್ಛ. ಅಲ್ಲಿ ಹಚ್ಚಹಸುರಿನ ಲಾನ್ ಹಾಸಿಕೊಂಡಿದೆ. ಮೂಲ ಸೌಂದರ್ಯಕ್ಕೆ ಧಕ್ಕೆ ಬಾರದ ಹಾಗೆ, ಅಲ್ಲಿ ಇಲ್ಲಿ ಬಿದ್ದ ಕೋಟೆ ಕೊತ್ತಳ, ಬುರುಜುಗಳ ರಿಪೇರಿ ಮಾಡಿದ್ದಾರೆ. ಬಾವನಬಂಡೆಯ ಮೇಲಿರುವ ಶಿವಾಲಯಗಳಿಗೆ ಹೋಗಲು ಚಾಲುಕ್ಯರ ಶೈಲಿಯಲ್ಲೇ ಮನಮೋಹಕ ರಸ್ತೆ ಮಾಡಿದ್ದಾರೆ. ಮಾಲಗಿತ್ತಿ ದೇವಾಲಯಕ್ಕೆ ಹೋಗಲು ಸರಿಯಾದ ಮಾರ್ಗ ಇರಲಿಲ್ಲ. ಅದರ ಹಿಂದೆ ಬಹಳ ದಿನಗಳಿಂದ ಹಾಳು ಬಿದ್ದ ಕೋಟೆಗೂ ಕಾಯಕಲ್ಪದ ಮೋಕ್ಷ ಸಿಕ್ಕಿದೆ.ಇವೆಲ್ಲವೂ ಬಾದಾಮಿಯ ಬೆಡಗನ್ನು ಇನ್ನಷ್ಟು ಹೆಚ್ಚಿಸಿವೆ. – ಡಾ|| ಕರವೀರಪ್ರಭು ಕ್ಯಾಲಕೊಂಡ