ಬಾದಾಮಿ: ಶ್ರೀ ಬನಶಂಕರಿ ದೇವಿ ಜಾತ್ರೆ ಆರಂಭಗೊಂಡಿದೆ ದೇವಸ್ಥಾನದಲ್ಲಿ ಶ್ರೀ ದೇವಿ ಗರ್ಭ ಗುಡಿಯ ಎದುರು ನೂತನ ಧ್ವಜಸ್ತಂಭದ ಕಳಾಕರ್ಷಣೆ ಹಾಗೂ ಕಳಾದಿ ಹೋಮ ನೆರವೇರಿಸುವ ಮೂಲಕ ಆಗಮಶಾಸ್ತ್ರದ ಪ್ರಕಾರ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ನೂರು ವರ್ಷಗಳ ಇತಿಹಾಸ ಹೊಂದಿದ್ದ ಹಳೆಯ ಧ್ವಜಸ್ತಂಭ ಶಿಥಿಲಗೊಂಡಿತ್ತು. ಹೀಗಾಗಿ ಆ ಧ್ವಜಸ್ತಂಭ ತೆರವುಗೊಳಿಸಲಾಯಿತು. ಆಗಮಶಾಸ್ತ್ರದ ವಿಧಿ ವಿಧಾನಗಳ ಮೂಲಕ ನೂತನ ಸ್ತಭ ಸ್ಥಾಪನೆ ಮಾಡಲಾಯಿತು.
ಧ್ವಜಸ್ತಂಭದ ವಿಶೇಷತೆ: ಚೌರಸ ಮಾದರಿಯ ಅಷ್ಠಪವನ, ವರ್ತುಲ ಆಕಾರ ಮೂರು ಭಾಗಗಳಿವೆ. ಇದರಲ್ಲಿ ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಸ್ವರೂಪದ ಢಮುರ, ತ್ರಿಶೂಲ ಆಯುಧಗಳಿವೆ. ಈ ಸ್ತಂಭವನ್ನು ಸಾಗಾವಾನಿ (ಟೀಕ) ಕಟ್ಟಿಗೆ (ಕಾಸ್ಟ) ಬಳಸಿ ಸೂಕ್ಷ್ಮ ಕೆತ್ತನೆಯಿಂದ ತಯಾರಿಸಲಾಗಿದ್ದು, ಇದು ಭೂವಿಸ್ತಾರದಿಂದ ಗರ್ಭಾಲಯದ ಕಂಠದವರೆಗೆ ಎತ್ತರವಿದೆ. ಇದರಲ್ಲಿ ಶ್ರೀದೇವಿ ಮೂರ್ತಿ, ಆಯುಧಗಳನ್ನು ಕೆತ್ತನೆ ಮಾಡಲಾಗಿದೆ.
ಘಟಸ್ಥಾಪನೆ: ಬನಶಂಕರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಘಟಸ್ಥಾಪನೆ ನಿಮಿತ್ತ ಬೆಳಗ್ಗೆಯಿಂದಲೇ ದೇವಸ್ಥಾನದ ಪ್ರಾಂಗಣ ಶುಚಿಗೊಳಿಸಿ ಧಾರ್ಮಿಕ ವಿಧಿ ವಿಧಾನ ಕೈಗೊಳ್ಳುವ ಮೂಲಕ ಘಟಸ್ಥಾಪನೆ ಹಾಕಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ವಿದ್ವಾನ್ ಅಶೋಕಭಟ್ಟ ಪೂಜಾರ ನೇತೃತ್ವದಲ್ಲಿ ಶ್ರೀರಂಗ, ವಿಕ್ರಮ, ಚಿದಂಬರ ಶಾಸ್ತ್ರೋಕ್ತ ಪೂಜಾ ಕೈಂಕರ್ಯ ಕೈಗೊಂಡು ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಚೇರಮನ್ ಮಲ್ಲಾರಭಟ್ಟ, ಮಹೇಶ, ಪ್ರಕಾಶ, ಮಾಲತೇಶ, ಅಣಭಟ್ಟ, ಅರವಿಂದ, ಶ್ಯಾಮಭಟ್ಟ, ಉದಯ, ಪೂಜಾರ ಮನೆತನದ ಸದಸ್ಯರಿದ್ದರು.